ಸಾರಾಂಶ
ರಾಗ ಮಯೂರಿ ಅಕಾಡೆಮಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಶಾಲೆಗಳಲ್ಲಿ ಯಾಂತ್ರಿಕವಾಗಿ ಶಿಕ್ಷಣ ಪಡೆಯುವ ಮಕ್ಕಳಿಗೆ ಬೇಸಿಗೆ ಶಿಬಿರಗಳಲ್ಲಿ ಸೃಜನಾತ್ಮಕ ಚಿಂತನೆಯ ನಾಟಕ, ಕಲೆ ಅಭ್ಯಾಸ ಮಾಡುವುದರಿಂದ ಭವಿಷ್ಯದಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲಿದೆ ಎಂದು ಕಿರು ತೆರೆ ಕಲಾವಿದ ಹಿತೇಶ್ ಕಾಫಿ ನಡ್ಕ ಅಭಿಪ್ರಾಯಪಟ್ಟರು.
ರಾಗ ಮಯೂರಿ ಆಕಾಡೆಮಿ ನೇತೃತ್ವದಲ್ಲಿ ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದ ಸಭಾ ಭವನದಲ್ಲಿ 10 ದಿನಗಳ ವರ್ಣ ವೈಭವ ಚಿಣ್ಣರಮೇಳ-2025 ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಮೊಬೈಲ್, ಟಿ.ವಿ. ಆಕರ್ಷಣೆಯಿಂದ ಹೊರ ಬಂದು ಸೃಜನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಶಿಸ್ತು ಕಲಿಯಲು ಬೇಸಿಗೆ ಶಿಬಿರ ಸಹಕಾರಿ ಎಂದರು.ಮುಖ್ಯ ಅತಿಥಿಯಾಗಿದ್ದ ನಾಗಚಂದ್ರ ಪ್ರತಿಷ್ಠಾನದ ಮುಖ್ಯಸ್ಥ ಕಣಿವೆ ವಿನಯ್ ಮಾತನಾಡಿ, ತಂದೆ, ತಾಯಿಗಳು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಕಲಿಸಬೇಕು. ಸಂಸ್ಕಾರಗಳು ಬದುಕಿನಲ್ಲಿ ಶಾಶ್ವತವಾಗಿ ಉಳಿಯಲಿದೆ. ರಾಗ ಮಯೂರಿ ಅಕಾಡೆಮಿ ನಿರ್ದೇಶಕಿ ಅಂಕಿತ ಪ್ರಜ್ವಲ್ ಬೇಸಿಗೆ ಶಿಬಿರ ನಡೆಸಿ ದಕ್ಷಿಣ ಕನ್ನಡದ ಅನೇಕ ಕಲಾವಿದರನ್ನು ಕರೆಸಿದ್ದಾರೆ. ಮಲೆನಾಡಿನ ಮಕ್ಕಳಿಗೆ ಈ ಬೇಸಿಗೆ ಶಿಬಿರ ಉಪಯೋಗವಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ರಾಗಮಯೂರಿ ಅಕಾಡೆಮಿ ನಿರ್ದೇಶಕಿ ಹಾಗೂ ನೃತ್ಯ ಶಿಕ್ಷಕಿ ಅಂಕಿತಾ ಪ್ರಜ್ವಲ್ ವಹಿಸಿದ್ದರು. ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್,ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ,ತಾಲೂಕು ಬ್ರಾಹ್ಮಣ ಸಭಾದ ಮಾಜಿ ಅಧ್ಯಕ್ಷ ಶ್ರೀನಾಥ್, ಕಲಾವಿದ ಅಭಿನವ ಗಿರಿರಾಜ್, ರಾಗಮಯೂರಿ ಅಕಾಡೆಮಿ ಕಾರ್ಯದರ್ಶಿ ಪ್ರಜ್ವಲ್, ರಂಗಭೂಮಿ ಕಲಾವಿದೆ ಅರ್ಪಿತಾ ಕೆನಡ್ಕ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಕಲಾವಿದ ಅಭಿನವ ಗಿರಿರಾಜ್ ಅವರಿಗೆ ವರ್ಣಾವರಿ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಿರು ತೆರೆ ಕಲಾವಿದ ಹಿತೇಶ ಕಾಫಿ ನಡ್ಕ, ರಂಗಭೂಮಿ ಕಲಾವಿದೆ ಅರ್ಪಿತಾ ಕೆನಡ್ಕ ಹಾಗೂ ಸುನೀತಾ ಅವರನ್ನು ಸನ್ಮಾನಿಸಲಾಯಿತು.
ನಂತರ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಂದ ವೈವಿದ್ಯಮಯ ನೃತ್ಯ, ಹಾಡು, ಮೂಕಾಭಿನಯ, ಪ್ಯಾಷನ್ ಶೋ ಹಾಗೂ ಬಂಗಾರದ ಮೀನು ಎಂಬು ವಿಶೇಷ ನಾಟಕವನ್ನು ಮಕ್ಕಳು ಪ್ರದರ್ಶನ ಮಾಡಿದರು. ನಂದಿನಿ ಆಲಂದೂರು ಹಾಗೂ ಸುನೀತಾ ಕಾರ್ಯಕ್ರಮ ನಿರೂಪಿಸಿದರು.