ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದ ಕೃಷ್ಣೇಗೌಡರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಮಂಗಳವಾರ ತಾಲೂಕಿನ ಕೊರಟಿಕೆರೆ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಬೂತ್ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷ್ಣೇಗೌಡರು ಚುನಾವಣೆ ವೇಳೆ ಜತೆಯಲ್ಲಿದ್ದ ಎಲ್ಲಾ ಮುಖಂಡರು, ಕಾರ್ಯಕರ್ತರ ಕೈಗೆ ಸಿಗದೆ 11ತಿಂಗಳಿಂದ ದೂರವಾಗಿದ್ದಾರೆ. ಒಮ್ಮೆಯೂ ಕೂಡ ಬೆಂಬಲಿಸಿದವರ ಕಷ್ಟ - ಸುಖವನ್ನು ಅವರು ಕೇಳಿಲ್ಲ. ಇತ್ತೀಚೆಗೆ ಜೆಡಿಎಸ್ ಮುಖಂಡರು ಅವರನ್ನು ಭೇಟಿಯಾಗಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಕ್ಷೇತ್ರದ ಶಾಸಕ ಎ.ಮಂಜು ಅವರು ಕೃಷ್ಣೇಗೌಡರ ಭೇಟಿ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಅವರು ಜೆಡಿಎಸ್ ಜತೆ ಒಳಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೋಲಿಗೆ ನಾಟಕವಾಡುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಕೃಷ್ಣೇಗೌಡರು ತಮ್ಮ ಬೆಂಬಲಿಗರು, ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮುಕ್ತವಾಗಿ ಸೇರುವುದಾದರೆ ಸ್ವಾಗತಿಸುತ್ತೇನೆ ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೇಯಸ್ ಪಟೇಲ್ ರ ಗೆಲುವು ನಿಶ್ಚಿತವಾಗಿದ್ದು, ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಅತ್ಯಧಿಕ ಮತಗಳನ್ನು ಕೊಡಿಸಲು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಮುಖಂಡರು, ಕಾರ್ಯಕರ್ತರ ಸಭೆ ನಡೆಸುತ್ತಿದ್ದೇನೆ. ಈ ಸಂದರ್ಭದಲ್ಲಿ ಇತರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಮುಖಂಡರು ಕಾಂಗ್ರೆಸ್ ಪಕ್ಷ ಸೇರುತಿದ್ದಾರೆ. ಕೃಷ್ಣೇಗೌಡರ ಜತೆಯಲ್ಲಿದ್ದವರೂ ಸಹ ಅಧಿಕ ಸಂಖ್ಯೆಯಲ್ಲಿ ಪಕ್ಷ ಸೇರುತ್ತಿದ್ದಾರೆ. ರಾಜ್ಯ ಸರ್ಕಾರ ಎಲ್ಲಾ ವರ್ಗಗಳ ಜನರಿಗೆ ನೀಡಿರುವ ಐದೂ ಗ್ಯಾರಂಟಿಗಳು ಈ ಬಾರಿ ನಮ್ಮ ಚುನಾವಣೆಗೆ ದೊಡ್ಡಶಕ್ತಿಯನ್ನು ನೀಡಲಿವೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವು ಶತ ಸಿದ್ಧ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಪುಟ್ಟಯ್ಯ, ಗಣಪತಿ, ಚಿಕ್ಕಹೊನ್ನೇಗೌಡ, ವೀರಪ್ಪ, ಧರ್ಮಣ್ಣ, ಗ್ರಾಪಂ ಹಾಲಿ, ಮಾಜಿ ಸದಸ್ಯರು, ಗ್ರಾಮದ ಮುಖಂಡರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))