Drama has the power to provoke thought.

ವಿಚಾರ ಸಂಕಿರಣ, ನಾಟಕ ಪ್ರದರ್ಶನ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಸಿದ್ದಾಪುರಜಾಗತಿಕವಾಗಿ ವಿಸ್ತರಿಸಿಕೊಂಡ ಕಲಾಪ್ರಕಾರವಾಗಿ ನಾಟಕ ರಂಗಭೂಮಿ ರೂಪುಗೊಂಡಿದೆ. ನಾಟಕಗಳು ನಮ್ಮ ಬದುಕಿನ ಅವಿಭಾಜ್ಯ ಅಂಗ ಎಂದು ನಾಣಿಕಟ್ಟಾದ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ನಿರ್ದೇಶಕ ವಿ.ಎಂ. ಹೆಗಡೆ ತ್ಯಾಗಲಿ ಹೇಳಿದರು.ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಒಡ್ಡೋಲಗ ಹಿತ್ಲಕೈ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕಾರವಾರ ಇವರ 2025-26ರ ಧನಸಹಾಯ ಯೋಜನೆ ಅಡಿಯಲ್ಲಿ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಜರುಗಿದ ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಾಟಕಗಳು ಭಿನ್ನವಾದ ಭಾವನೆ, ಆಲೋಚನೆ ಹುಟ್ಟಿಸುವಂಥ ಶಕ್ತಿಯನ್ನು ಪಡೆದಿರುವಂಥವು. ಪ್ರಸ್ತುತ ಸಂದರ್ಭದಲ್ಲಿ ಪುರಾಣಗಳ ಮರು ಅವಲೋಕನ ಮಾಡುತ್ತವೆ ಎಂದರು.ಅಧ್ಯಕ್ಷತೆ ವಹಿಸಿದ್ದ ನಾಣಿಕಟ್ಟಾದ ಅಗ್ರಗಣ್ಯ ಎಪ್.ಪಿ.ಓ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಮಾತನಾಡಿ, ಸಾಂಸ್ಕೃತಿಯತೆ ಸಮಾಜದ ಜೀವಾಳ. ಸಮಾಜದ ಬೆಳವಣಿಗೆಗೆ ಅವು ಹೆಚ್ಚಿನ ಕೊಡುಗೆ ನೀಡುತ್ತವೆ, ನಾಟಕವು ಸದಭಿರುಚಿಯನ್ನು ಮೂಡಿಸಲು ಉತ್ತಮ ವೇದಿಕೆಯಾಗಿದೆ ಎಂದರು.ಪತ್ರಕರ್ತ, ಸಾಹಿತಿ ಗಂಗಾಧರ ಕೊಳಗಿ ಮಾತನಾಡಿ, ಸಂಪ್ರದಾಯದ ಮುಸುಕಿನಲ್ಲಿ ಹೆಣ್ಣಿನ ಮೇಲೆ ನಡೆಸಿದ ದಬ್ಬಾಳಿಕೆ ಹೇಸಿಗೆ, ಆಕ್ರೋಶ ಹುಟ್ಟಿಸುವಂಥದ್ದು. ಆಧುನಿಕ ಸಾಹಿತ್ಯ ಮಾತ್ರವಲ್ಲ, ಜಾನಪದ ಅಲಿಖಿತ ಹಾಡುಗಳಲ್ಲಿ, ವಚನಗಳಲ್ಲಿ ಹೆಣ್ಣಿನ ಪ್ರತಿಭಟನೆಯ ಸೆಳಕುಗಳನ್ನು ಕಾಣಬಹುದು. ಹೆಣ್ಣನ್ನು ದೇವಿಯಾಗಿ ಕಂಡಂತೆ ದುಷ್ಟ ಶಿಕ್ಷಕಿಯಾಗಿಯೂ ಪುರಾಣಗಳು ಕಂಡಿವೆ. ಹೆಣ್ಣು ಕೇಳುವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ ಎಂದರು.

ಸಮನ್ವಯ ಮಾತುಗಳನ್ನಾಡಿದ ಪ್ರಸಿದ್ಧ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ಟ, ಹೆಣ್ಣು ಕೇಳುತ್ತಿರುವುದು ಸಮಾನತೆಯನ್ನಲ್ಲ. ಸಮಾನ ಅವಕಾಶವನ್ನ. ನನಗೊಂದು ಅಸ್ತಿತ್ವವಿದೆ ಎಂದು ಗುರುತಿಸಿ ಎನ್ನುವುದನ್ನು ಎಂದರು.

ಈ ಸಂದರ್ಭದಲ್ಲಿ ಜರುಗಿದ ಸ್ತ್ರೀ ಎಂದರೆ ಅಷ್ಟೇ ಸಾಕೇ ಎನ್ನುವ ವಿಷಯದ ವಿಚಾರ ಸಂಕಿರಣದಲ್ಲಿ ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ಪ್ರೌಢಶಾಲಾ ಶಿಕ್ಷಕಿ ಸಂಧ್ಯಾ ಶಾಸ್ತ್ರಿ, ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ ವಿಷಯ ಮಂಡಿಸಿದರು.

ಒಡ್ಡೋಲಗ ಸಂಸ್ಥೆಯ ಅಧ್ಯಕ್ಷ, ರಂಗ ನಿರ್ದೇಶಕ ಗಣಪತಿ ಹೆಗಡೆ ಹಿತ್ಲಕೈ ಉಪಸ್ಥಿತರಿದ್ದರು.ರಂಗಕಲಾವಿದೆ ಪ್ರಜ್ಞಾ ಹೆಗಡೆ ಹಿತ್ಲಕೈ ಸ್ವಾಗತಿಸಿ, ವಂದಿಸಿದರು. ನಂತರ ಶಿರಸಿಯ ಆದರ್ಶ ವನಿತಾ ಸಮಾಜದ ಸದಸ್ಯೆಯರಿಂದ ಎಚ್.ಎಸ್. ವೆಂಕಟೇಶಮೂರ್ತಿ ರಚಿಸಿ, ಡಾ.ಶ್ರೀಪಾದ ಭಟ್ಟ ನಿರ್ದೇಶಿಸಿದ ನಿನಗೆ ನೀನೇ ಗೆಳತಿ ನಾಟಕ ಪ್ರದರ್ಶನಗೊಂಡಿತು.