ಸಾರಾಂಶ
ರೋಣ:ನಾಟಕಗಳು ಕೇವಲ ಮನರಂಜನೆ ನೀಡುವ ರಂಗ ಕಲೆಯಾಗದೇ ಸಮಾಜದ ಅಂಕುಡೊಂಕು ತಿದ್ದುವ ಸಾಧನವಾಗಿದೆ ಎಂದು ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾ ಮಾಜಿ ಅಧ್ಯಕ್ಷ ಬಸವಂತಪ್ಪ ತಳವಾರ ಹೇಳಿದರು.
ಅವರು ಇತ್ತೀಚೆಗೆ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಶ್ರೀಗುದ್ನೇಶ್ವರ ಹಾಗೂ ದುರ್ಗಾದೇವಿ (ದೇವಮ್ಮ ದೇವಿ) ಜಾತ್ರಾ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಸಹಯೋಗದಲ್ಲಿ ಶ್ರೀಮಾರುತೇಶ್ವರ ಕೃಪಾ ಪೋಷಿತ ಭಗತ್‌ಸಿಂಗ್ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಕೆರಳಿದ ಧರ್ಮದ ಹುಲಿಗಳು ಎಂಬ ಸುಂದರ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು.ಹಬ್ಬ ಹರಿದಿನ, ಜಾತ್ರೆಗಳ ಸಂದರ್ಭದಲ್ಲಿ ಪೂರ್ವಕಾಲದಿಂದ ಗ್ರಾಮೀಣ ಪ್ರದೇಶದಲ್ಲಿ ಅಭಿನಯಿಸಿರುವ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳು ಸಮಾಜದ ಪರಿವರ್ತನೆಗೆ ಸಂದೇಶ ನೀಡುವ ಸಂವಹನವಾಗಿವೆ. ರಂಗ ಕಲೆ ಅತ್ಯಂತ ಗಟ್ಟಿ ಕಲೆಯಾಗಿದೆ. ಟಿವಿ, ಸಿನೆಮಾ, ಧಾರವಾಹಿಗಳ ಅಬ್ಬರದ ಮಧ್ಯೆಯೂ ರಂಗ ಕಲೆ ಜನರನ್ನು ಆಕರ್ಷಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ರಂಗ ಕಲಾವಿದರು ಎಲೆಮೆರೆಯಂತಿದ್ದಾರೆ. ಅಂತವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ನನ್ನಯ್ಯಸ್ವಾಮಿ ಹಿರೇಮಠ ಮಾತನಾಡಿ, ರಂಗ ಕಲೆ ಉಳಿಸಲು ಶ್ರಮಿಸುತ್ತಿರುವ ಗ್ರಾಮೀಣ ಯುವಕರಿಗೆ ಸೂಕ್ತ ತರಬೇತಿ, ಪ್ರೋತ್ಸಾಹ ಅತ್ಯಗತ್ಯವಿದೆ. ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮಾಧ್ಯಮವಾಗಿದೆ ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ವಿ.ಎಚ್. ಬಡಿಗೇರ, ನಿವೃತ್ತ ಪಿಎಸ್ಐ ಎಂ.ಎಚ್. ಕಂಬಳಿ, ಮಲ್ಲಿಕಾರ್ಜುನಗೌಡ.ಕೆ. ಪಾಟೀಲ, ವೇಂಕಪ್ಪ ಕುಂದರಗಿ, ಶರಣಪ್ಪ ಆಶಿ, ಕಂಟೆಪ್ಪಗೌಡ ಕರಕನಗೌಡ್ರ, ರಾಮಪ್ಪ ಹೆಬ್ಬಳ್ಳಿ, ಸಿದ್ದನಗೌಡ ಕರಕನಗೌಡ್ರ, ಬಸವರಾಜ ಸುರೇಬಾನ, ಪಿ.ಎಸ್. ಪಾಟೀಲ, ಕವಿ ಭೀಮಪ್ಪ ದುಗಲದ, ಬಾಬು ಪಾಟೀಲ, ಶರಣಪ್ಪ ಕುರಿಗಾರ, ಶಿವಾಜಿ ಆರೇರ, ಶಿವಾಜಿ ಘಾಟಗೆ, ಗ್ರಾಪಂ ಸದಸ್ಯೆ ಉಮಾ ಅಣ್ಣಿಗೇರಿ, ಶಿವಗಂಗಾ ಹಿಂದಿನಮನಿ ಮುಂತಾದವರು ಉಪಸ್ಥಿತರಿದ್ದರು. ವೀರೇಂದ್ರ ಪಾಟೀಲ ನಿರೂಪಿಸಿ, ಸ್ವಾಗತಿಸಿದರು. ನಾಗರಾಜ ಚಿಕ್ಕರಡ್ಡಿ ವಂದಿಸಿದರು.