ಸಾರಾಂಶ
ಕೊಪ್ಪಳ:
ಪರಿಣಾಮಕಾರಿ ಬೋಧನೆಗಾಗಿ ಶಿಕ್ಷಕರಿಗೆ ರಂಗಕಲೆ ಅತ್ಯವಶ್ಯವಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಉಪನ್ಯಾಸಕ ಪ್ರವೀಣಕುಮಾರ ಪೊಲೀಸ್‌ಪಾಟೀಲ ಹೇಳಿದರು.ನಗರದ ಹೊರವಲಯದ ದದೇಗಲ್ ಗ್ರಾಮದಲ್ಲಿರುವ ರಾಜೀವಗಾಂಧಿ ರೂರಲ್ ಬಿ.ಇಡಿ ಕಾಲೇಜನಲ್ಲಿ ನಡೆದ ನಾಟಕೋತ್ಸವ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ರಂಗಕಲೆ ಬಳಸಿಕೊಂಡು ಬೋಧಿಸಿದರೆ ವಿದ್ಯಾರ್ಥಿಗಳಲ್ಲಿ ನಿರೀಕ್ಷಿತವಾಗಿ ಕಲಿಕಾ ಫಲ ಉಂಟಾಗಲಿದೆ. ನಾಟಕ ಅಭಿನಯ ಮೂಲಕ ಪಾಠ ಮಾಡಿದಾಗ ವಿದ್ಯಾರ್ಥಿಗಳಲ್ಲಿ ಪಾಠ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದರು.
ಭವಿಷ್ಯದಲ್ಲಿ ಶಿಕ್ಷಕರಾಗುವ ಪ್ರಶಿಕ್ಷಣಾರ್ಥಿಗಳು ಬಿ.ಇಡಿ ತರಬೇತಿಯ ಸಮಯದಲ್ಲಿ ಶ್ರದ್ಧೆ ಮತ್ತು ಆಸಕ್ತಿಯಿಂದ ರಂಗಕಲೆ ಕರಗತ ಮಾಡಿಕೊಳ್ಳಬೇಕು. ಈ ದಿಸೆಯಲ್ಲಿ ಮಹಾವಿದ್ಯಾಲಯ ಆಯೋಜಿಸಿದ ರಂಗ ತರಬೇತಿಯು ನಿಜಕ್ಕೂ ಪ್ರಶಿಕ್ಷಣಾರ್ಥಿಗಳಿಗೆ ಸಹಾಯಕಾರಿ ಆಗಲಿದೆ ಎಂದು ಹೇಳಿದರು.ಸಂಸ್ಥೆಯ ಪ್ರಾಚಾರ್ಯ ವಿನೋದ ಹುಲಿ ಅಧ್ಯಕ್ಷತೆ ವಹಿಸಿದ್ದರು. ರಂಗ ಕಲಾವಿದರಾದ ಲಕ್ಷ್ಮಣ ಪೀಳಗಾರ, ಶರಣು ಶೆಟ್ಟರ್, ಸಂತೋಷ ಹುಲಿಗಿ, ಮಹಾಂತೇಶ ಸಂಗಟಿ, ಹಾಗೂ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಉಪನ್ಯಾಸಕ ಬಸವರಾಜ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಶ್ರೀಲತಾ ದೇಸಾಯಿ, ಸುಮಾ ಅಳವಂಡಿ, ರೇಖಾ ಮಾರುತಿ ಗಡಾದ ದೇವೆಂದ್ರಕುಮಾರ ಕಾರ್ಯಕ್ರಮ ನಿರ್ವಹಿಸಿದರು.ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ 5 ತಂಡಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಜಾಗೃತಿ ನಾಟಕ ಪ್ರದರ್ಶಿಸಿದರು. ಹನುಮಂತಗೌಡ ನಾಯಕತ್ವದ ಬೆಟ್ಟದ ಹೂವು ತಂಡ ಅನಾಥ ನೇಗಿಲು ಎಂಬ ನಾಟಕ ಶೀರ್ಷಿಕೆಯಡಿ ರೈತನ ಸಮಸ್ಯೆಗಳು, ಪಂಪಾಪತಿ ಕಂಬಳಿ ನಾಯಕತ್ವದ ಕರುನಾಳ ಬೆಳಕು ತಂಡವು ಭ್ರಷ್ಟಾಚಾರ ನಾಟಕದ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಲಂಚಗುಳಿತನದ ಬಗ್ಗೆ, ಜಯರಾಮ ನಾಯಕತ್ವದ ಕನಸಿನ ಹೂವುಗಳ ತಂಡವು ಮೆಡಿಕಲ್ ಮಾಫಿಯಾ ಮೂಲಕ ವೈದ್ಯ ಲೋಕದ ಕರಾಳ ಮುಖ ಅನಾವರಣ, ಕಾವ್ಯಶ್ರೀ ನಾಯಕತ್ವದ ಕಲ್ಪವೃಕ್ಷ ತಂಡವು ಬಾಧಿತ ಜನ ನಾಟಕ ವಿಷಕಾರಿಕ ಅನಿಲ ಸೂಸುವ ಕಾರ್ಖಾನೆಗಳ ಸ್ಥಾಪನೆಯಿಂದ ಜನರಿಗೆ ಉಂಟಾಗುವ ದುಷ್ಟಪರಿಣಾಮಗಳ ಕುರಿತು, ಪ್ರಶಾಂತ ನಾಯಕತ್ವದ ಜೇನುಗೂಡು ತಂಡವು ಮಹಿಳಾ ಶೋಷಣೆ ಮೂಲಕ ಪ್ರಚಲಿತ ದಿನಗಳಲ್ಲಿ ಮಹಿಳೆ ಎದುರಿಸುತ್ತಿರುವ ಸಮಸ್ಯೆ, ಅನ್ಯಾಯ ಮತ್ತು ಲಿಂಗ ಪತ್ತೆ ಹಚ್ಚುವಿಕೆ, ಭ್ರೂಣ ಹತ್ಯೆ ವಿರುದ್ಧ ಜಾಗೃತಿ ನಾಟಕ ಪ್ರದರ್ಶಿಸಿದರು.