ಸಮಾಜ ಪರಿವರ್ತನೆಗೆ ನಾಟಕಗಳು ಸಹಕಾರಿ

| Published : May 26 2024, 01:30 AM IST

ಸಾರಾಂಶ

ಜಾತ್ರಾಮಹೋತ್ಸವ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಹಮ್ಮಿಕೊಳ್ಳುವ ನಾಟಕ ಪ್ರದರ್ಶನಗಳಿಂದ ಸಮಾಜ ಪರಿವರ್ತನೆಯಾಗಲು ಸಹಕಾರಿಯಾಗುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ, ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಜಾತ್ರಾಮಹೋತ್ಸವ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಹಮ್ಮಿಕೊಳ್ಳುವ ನಾಟಕ ಪ್ರದರ್ಶನಗಳಿಂದ ಸಮಾಜ ಪರಿವರ್ತನೆಯಾಗಲು ಸಹಕಾರಿಯಾಗುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ, ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಹೇಳಿದರು.

ಪಟ್ಟಣದ ಬಸವನಗರದಲ್ಲಿರುವ ರೇಣುಕಾ ಯಲ್ಲಮ್ಮದೇವಿ ಜಾತ್ರಾಮಹೋತ್ಸವದಂಗವಾಗಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ರಾಯಬಾಗ ತಾಲೂಕಿನ ಅಲಖನೂರಿನ ಮಲ್ಲಿಕಾರ್ಜುನ ನಾಟ್ಯ ಸಂಘದ ಮಗ ಹೋದರು ಮಾಂಗಲ್ಯ ಬೇಕು ಎಂಬ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮೊದಲು ಗ್ರಾಮಾಂತರ ಪ್ರದೇಶಗಳಲ್ಲಿ ನಾಟಕಗಳ ಪ್ರದರ್ಶನ ಹೆಚ್ಚಾಗಿ ನಡೆಯುತ್ತಿದ್ದವು. ಈಚೆಗೆ ಜಾತ್ರಾಮಹೋತ್ಸವದಂತಹ ಕಾರ್ಯಕ್ರಮಗಳಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ. ಇತ್ತೀಚಿನ ದಿನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ. ನಾಟಕ ಹೆಚ್ಚೆಚ್ಚು ನೋಡುವುದರ ಮೂಲಕ ನಾಟಕ ಕಲೆ ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು.ಬಸವನಗರದ ಎಲ್ಲ ಹಿರಿಯರು-ಕಿರಿಯರು ಸೇರಿಕೊಂಡು ರೇಣುಕಾ ಯಲ್ಲಮ್ಮದೇವಿ ಜಾತ್ರಾಮಹೋತ್ಸವದಂಗವಾಗಿ ಪ್ರತಿವರ್ಷ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ. ಬಸವನಗರದ ಎಲ್ಲ ಸಮಾಜ ಬಾಂಧವರು ಕೂಡಿಕೊಂಡು ಉತ್ತಮ ಜಾತ್ರಾಮಹೋತ್ಸವ ಮಾಡುತ್ತಿರುವುದು ಬಸವನಗರದ ಜನರ ಒಗ್ಗಟ್ಟನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಇದು ಮುಂದುವರಿದು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತಾಗಲಿ ಎಂದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ನಾಟಕಗಳು ಕೇವಲ ಮನರಂಜನೆಯಲ್ಲ. ಅವುಗಳು ಪ್ರಸ್ತುತ ಸಮಾಜದ ಅಭಿವ್ಯಕ್ತಿಯಾಗಿ ಕೆಲಸ ಮಾಡುತ್ತವೆ. ಚಿಂತನಪರ ನಾಟಕಗಳನ್ನು ನೋಡಿದರೆ ಜೀವನದಲ್ಲಿ ಬದಲಾವಣೆ ಹೊಂದಲು ಸಾಧ್ಯ. ರಂಗಭೂಮಿ ಕಲಾವಿದರನ್ನು ಪೋಷಿಸಲು ನಾಟಕ ಪ್ರದರ್ಶನಗಳನ್ನು ಆಯೋಜನೆ ಮಾಡುವುದು ಉತ್ತಮ. ರಂಗಭೂಮಿಯನ್ನು ಇಂದಿನ ಆಧುನಿಕ ಕಾಲದಲ್ಲಿ ಸಂರಕ್ಷಣೆ ಮಾಡುವುದು ತುಂಬಾ ಅಗತ್ಯವಿದೆ ಎಂದ ಅವರು, ಜಾತ್ರಾಮಹೋತ್ಸವದಂಗವಾಗಿ ಇಲ್ಲಿನ ಜನರು ನಾಟಕ ಪ್ರದರ್ಶನ ಹಮ್ಮಿಕೊಂಡಿರುವುದು ಉತ್ತಮ. ಮುಂದಿನ ದಿನಗಳಲ್ಲಿ ಪುರಾಣ-ಪ್ರವಚನ ಕಾರ್ಯಕ್ರಮ ಆಯೋಜನೆ ಮಾಡುವ ಕಡೆಗೆ ಗಮನ ಹರಿಸಬೇಕೆಂದರು.

ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ, ಸದಸ್ಯೆ ಲಕ್ಷ್ಮೀಬಾಯಿ ಶರಣಪ್ಪ ಬೆಲ್ಲದ, ಬಸವರಾಜ ಟಕ್ಕಳಕಿ, ಬಸವರಾಜ ಕಾಮನಕೇರಿ, ಹನುಮಂತ ಹತ್ತಿ, ಭೀಮಶಿ ಮದ್ದರಕ್ಕಿ, ರಮೇಶ ಪವಾರ, ಸಂಗಮೇಶ ದೊಡ್ಡಮನಿ ಇತರರು ಇದ್ದರು. ರಾಜು ಕುಂಬಾರ ಸ್ವಾಗತಿಸಿ, ನಿರೂಪಿಸಿದರು.