ಮಾನಸಿಕ ರೋಗಿಗಳಿಗೆ ಪ್ರೀತಿಯ ಆರೈಕೆ ಅಗತ್ಯ

| Published : May 26 2024, 01:30 AM IST

ಸಾರಾಂಶ

ಮಾನಸಿಕ ರೋಗಿಗಳಿಗೆ ಮನೋಚೈತನ್ಯ ತುಂಬಿ ಸಮಾಜಮುಖಿ ಆಗಿಸಲು ಸಮುದಾಯ, ಕುಟುಂಬದ ಪ್ರೀತಿ, ವಿಶ್ವಾಸ, ಆರೈಕೆ, ಬೆಂಬಲ ಅವಶ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾದ ಬಿ.ಎಎಸ್. ಭಾರತಿ ಅವರು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಾನಸಿಕ ರೋಗಿಗಳಿಗೆ ಮನೋಚೈತನ್ಯ ತುಂಬಿ ಸಮಾಜಮುಖಿ ಆಗಿಸಲು ಸಮುದಾಯ, ಕುಟುಂಬದ ಪ್ರೀತಿ, ವಿಶ್ವಾಸ, ಆರೈಕೆ, ಬೆಂಬಲ ಅವಶ್ಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾದ ಬಿ.ಎಎಸ್. ಭಾರತಿ ಅವರು ಸಲಹೆ ನೀಡಿದರು.

ನಗರದ ಹಳೇ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ’ವಿಶ್ವ ಸ್ಕೀಜೋಫ್ರೀನಿಯಾ (ಚಿತ್ತ ವಿಕಲತೆ) ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭ್ರಮೆ, ಭ್ರಾಂತಿಗೆ ಒಳಗಾಗಿದ್ದ ಮಾನಸಿಕ ರೋಗಿಗಳನ್ನು ಹಿಂದೆ ಸಮಾಜಕ್ಕೆ ಕಳಂಕವೆಂದು ಭಾವಿಸಿ ಮನೆಯಲ್ಲಿ ಕೂಡಿಹಾಕುವ ಪರಿಸ್ಥಿತಿ ಇತ್ತು. ಈಗ ಎಲ್ಲವೂ ಬದಲಾಗಿದೆ. ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗಲು ಕೇವಲ ಆರು ತಿಂಗಳು ಉತ್ತಮ ಔಷಧಿ, ಮಾತ್ರೆಗಳನ್ನು ಬಳಸಿದರೆ ಸಾಕಾಗಿದೆ. ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ರೋಗಿಗಳನ್ನು ಗುರುತಿಸಿ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಚಿಕಿತ್ಸೆ ಕೊಡಿಸಲು ನೆರವಾಗಬೇಕು. ಯುವಕರು, ವಿದ್ಯಾರ್ಥಿಗಳು ಸಹ ಇಡೀ ಸಮುದಾಯಕ್ಕೆ ಅರಿವು ಮೂಡಿಸಿ ಆಸರೆಯಾಗಬೇಕು ಎಂದು ನ್ಯಾ. ಭಾರತಿ ಅವರು ತಿಳಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನಸಿಕ ಆರೋಗ್ಯ ಪ್ರತಿಯೊಬ್ಬರಿಗೂ ಮುಖ್ಯವಾಗಿದೆ. ಸ್ಕೀಜೋಫ್ರೀನಿಯಾ ಮೆದುಳಿನ ಕಾಯಿಲೆಯಾಗಿದ್ದು, ಇದು ವ್ಯಕ್ತಿಯ ಯೋಚನೆ, ವರ್ತನೆ ಹಾಗೂ ನಡವಳಿಕೆಯ ಮೇಲೆ ಗಂಭೀರ ಪರಿಣಾಮ ಬೀರಿ ಮಾನಸಿಕ ಅಸ್ವಸ್ಥತೆ ಉಂಟು ಮಾಡುತ್ತದೆ. ಕಾಯಿಲೆ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ಮೇ ೨೪ರಂದು ವಿಶ್ವ ಸ್ಕೀಜೋಫ್ರೀನಿಯಾ ದಿನವನ್ನು ಹಮ್ಮಿಕೊಳ್ಳಲಾಗುತ್ತದೆ. ಮಾನಸಿಕ ರೋಗಿಗಳ ಉಚಿತ ಚಿಕಿತ್ಸೆಗಾಗಿ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಮನೋಚೈತನ್ಯ ಕ್ಲಿನಿಕ್ ತೆರೆಯಲಾಗಿದೆ ಎಂದರು.

ಜಿಲ್ಲಾಸ್ಪತ್ರೆಯ ಮನೋವೈದ್ಯ ಡಾ.ರಾಜೇಶ್ ಮಾತನಾಡಿ, ಸ್ಕೀಜೋಫ್ರೀನಿಯಾ ವ್ಯಕ್ತಿಯು ಪಂಚೇಂದ್ರಿಯಗಳ ಮೂಲಕ ಸುತ್ತಲಿನ ಪರಿಸರವನ್ನು ಅರ್ಥ ಮಾಡಿಕೊಳ್ಳುವ ಸಂವೇದನೆಯಲ್ಲಿ ಏರುಪೇರಾಗಲಿದೆ. ಅಸ್ಪಷ್ಟ ಆಲೋಚನೆಗಳು, ಭಾವನೆಗಳು, ಅಸಹಜ, ವಿಚಿತ್ರ ಅನುಭವಗಳನ್ನು ವ್ಯಕ್ತಪಡಿಸುವಿಕೆ ಹಾಗೂ ಸಂಶಯ ಪ್ರವೃತ್ತಿ ಈ ಕಾಯಿಲೆಯ ಲಕ್ಷಣಗಳಾಗಿವೆ. ಉತ್ತಮ ಚಿಕಿತ್ಸೆಯಿಂದ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ರೋಗಿಗಳಲ್ಲಿ ನಕಾರಾತ್ಮಕ ಅಂಶಗಳನ್ನು ಹೋಗಲಾಡಿಸಿ ಸಕಾರಾತ್ಮಕ ಫಲಿತಾಂಶವನ್ನು ಕಾಣಬಹುದಾಗಿದೆ ಎಂದರು.

ಅಬಕಾರಿ ಉಪ ಆಯುಕ್ತ ನಾಗಶಯನ ಮಾತನಾಡಿ, ಮದ್ಯಪಾನದಿಂದ ಸಹ ವ್ಯಕ್ತಿಯಲ್ಲಿ ಮಾನಸಿಕ ಅಸ್ವಸ್ಥತೆ ಉಂಟಾಗಲಿದೆ. ಜಿಲ್ಲೆಯಲ್ಲಿ ಮದ್ಯಪಾನಿಗಳ ಸಂಖ್ಯೆ ಹೆಚ್ಚಾಗಿದ್ದು, ಆರೋಗ್ಯ ಇಲಾಖೆ ಕುಡಿತದ ದುಶ್ಚಟಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಿ ಉತ್ತಮ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಮಾತನಾಡಿ, ಸ್ಕೀಜೋಫ್ರೀನಿಯಾ ಕಾಯಿಲೆಯು ವ್ಯಕ್ತಿಯ ವಂಶವಾಹಿ ಪರಿಸರದಲ್ಲಿ ಕಾಣಿಸಿಕೊಳ್ಳಲಿದೆ. ಸಾಮಾನ್ಯವಾಗಿ ೧೩ರಿಂದ ೨೫ರ ವಯೋಮಿತಿಯಲ್ಲಿ ಕಾಣಸಿಗುವ ಈ ಕಾಯಿಲೆಯು ಪದೆಪದೇ ತೀವ್ರತರ ಸಂಕಷ್ಟಗಳಿಗೆ ವ್ಯಕ್ತಿ ಸಿಲುಕಿದಾಗ ಮನೋರೋಗವಾಗಿ ಬದಲಾಗಬಹುದು. ಕಾಯಿಲೆಯನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದರೆ ಬೇಗ ಗುಣಮುಖರಾಗಲಿದ್ದಾರೆ. ಮನೆಯಲ್ಲಿ ಮಾನಸಿಕ ರೋಗಿ ಇದ್ದರೆ ಮೊದಲು ಕುಟುಂಬಸ್ಥರು ಸಾಮಾಜಿಕವಾಗಿ ತಮ್ಮಲ್ಲಿರುವ ಕೀಳಿರಿಮೆಯನ್ನು ಬಿಡಬೇಕು ಎಂದರು.

ಇದಕ್ಕಾಗಿ ಯಾರು ಸಹ ಅತಂಕಪಡುವ ಅಗತ್ಯವಿಲ್ಲ. ಅಪನಂಬಿಕೆ, ಮೌಢ್ಯಗಳಿಗೆ ಒಳಗಾಗದೇ ಹತ್ತಿರದ ಆಸ್ಪತ್ರೆಗೆ ಸೇರಿಸಿ, ಮನೋವೈದ್ಯರ ಜೊತೆ ಸಮಾಲೋಚಿಸಿ ಅವಶ್ಯ ಚಿಕಿತ್ಸೆ ಕೊಡಿಸಬೇಕು. ರೋಗಲಕ್ಷಣ ಕಂಡುಬಂದ ಕೆಲವೇ ವಾರದೊಳಗೆ ಔಷಧೋಪಚಾರ ಮಾಡಿದರೆ ಕಾಯಿಲೆ ಆದಷ್ಟು ಬೇಗ ಹತೋಟಿಗೆ ಬರಲಿದೆ. ವೈದ್ಯರನ್ನು ಆಗಾಗ್ಗೆ ಭೇಟಿ ಮಾಡಿ ಸಲಹೆ, ಮಾರ್ಗದರ್ಶನ ಪಡೆಯಬೇಕು ಎಂದು ತಿಳಿಸಿದರು.

ಕುಟುಂಬ ಕಲ್ಯಾಣಧಿಕಾರಿ ಡಾ. ಅಂಕಪ್ಪ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ರವಿಕುಮಾರ್, ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಸರ್ಕಾರಿ ನರ್ಸಿಂಗ್ ಶಾಲೆಯ ಪ್ರಾಂಶುಪಾಲ ಖುದರತ್, ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು, ಇತರರು ಕಾರ್ಯಕ್ರಮದಲ್ಲಿ ಇದ್ದರು.