ಸಾರಾಂಶ
ಕಟಪಾಡಿ ವನಸುಮ ವೇದಿಕೆ ಹಾಗೂ ವನಸುಮ ಟ್ರಸ್ಟ್ ವತಿಯಿಂದ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಟಪಾಡಿ ಎಸ್‌ವಿಎಸ್ ಹೈಸ್ಕೂಲ್ ಒಳಾಂಗಣದಲ್ಲಿ ಎರಡು ದಿನಗಳ ‘ವನಸುಮ ರಂಗೋತ್ಸವ’ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕಾಪು
ನಾಟಕಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗುವ ಗುಣ ಹೊಂದಿರುತ್ತವೆ. ಒಂದು ನಾಟಕವನ್ನು ಮುರಿದುಕಟ್ಟುವ ಮೂಲಕ ಪ್ರದರ್ಶನದಲ್ಲಿ ಸಮಕಾಲೀನತೆಯನ್ನು ತರಲು ಸಾಧ್ಯವಿದೆ. ಇತರ ಪ್ರದರ್ಶನ ಕಲೆಗಳಿಗೆ ಹೋಲಿಸಿದರೆ ನಾಟಕಗಳು ಸಮಾಜದ ಮೇಲೆ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದರು.ಅವರು ಶನಿವಾರ ಕಟಪಾಡಿ ವನಸುಮ ವೇದಿಕೆ ಹಾಗೂ ವನಸುಮ ಟ್ರಸ್ಟ್ ವತಿಯಿಂದ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಟಪಾಡಿ ಎಸ್‌ವಿಎಸ್ ಹೈಸ್ಕೂಲ್ ಒಳಾಂಗಣದಲ್ಲಿ ಆರಂಭಗೊಂಡ ಎರಡು ದಿನಗಳ ‘ವನಸುಮ ರಂಗೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಉಡುಪಿ ಜಿಲ್ಲೆಗಳಲ್ಲಿ ಪ್ರತೀ ವರ್ಷ ಹಲವಾರು ನಾಟಕಗಳು ಪ್ರದರ್ಶಗೊಳ್ಳುತ್ತಿದ್ದರೂ ಬಹುತೇಕ ನಾಟಕಗಳು ಹೊರಗಿನ ವಸ್ತು ವಿಷಯವನ್ನು ಹೊಂದಿರುವುದೇ ಹೆಚ್ಚು. ಆದರೆ ಇಂದು ಶಿವರಾಮ ಕಾರಂತರ ಈ ನೆಲದ ಕೃತಿಯನ್ನು ನಾಟಕವಾಗಿಸಿರುವುದು ಶ್ಲಾಘನೀಯ ಎಂದರು.ಚಲನಚಿತ್ರ ನಟ ಪ್ರಕಾಶ್ ತೂಮಿನಾಡು ಶುಭ ಹಾರೈಸಿದರು. ಕಾರ್ಯದರ್ಶಿ ವಿನಯ್ ಮುಳ್ಳೂರು ವೇದಿಕೆಯಲ್ಲಿದ್ದರು.ಈ ಸಂದರ್ಭ ರಂಗಭೂಮಿ ಉಡುಪಿಯ ರಂಗನಟ, ನಿರ್ದೇಶಕ ಪ್ರದೀಪ್‌ಚಂದ್ರ ಕುತ್ಪಾಡಿ ಅವರಿಗೆ ‘ವನಸುಮ ರಂಗಸಮ್ಮಾನ್’ ಪ್ರದಾನ ಮಾಡಲಾಯಿತು. ಸಂಘಟನೆ ಮತ್ತು ಸಮುದಾಯ ಅಭಿವೃದ್ಧಿಯಲ್ಲಿ ಸೇವೆ ನೀಡಿರುವ ಶ್ರೀಕಾಂತ್ ಬಿ. ಆಚಾರ್ಯ ಕಾಪು ಮತ್ತು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಾಧನೆಗಾಗಿ ಪಲ್ಲವಿ ಕೊಡಗು ಅವರನ್ನು ಅಭಿನಂದಿಸಲಾಯಿತು.ಬಾಸುಮ ಕೊಡಗು ವಿರಚಿತ ‘ನಡುರಾತ್ರಿಯ ಸ್ವಾತಂತ್ರ್ಯ’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.ವನಸುಮ ಸಂಸ್ಥೆ ಅಧ್ಯಕ್ಷ ಬಾಸುಮ ಕೊಡಗು ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಕಾವ್ಯವಾಣಿ ಕೊಡಗು ಸನ್ಮಾನ ಪತ್ರ ವಾಚಿಸಿದರು. ಸಂಸ್ಥೆಯ ಸದಸ್ಯೆ ರಮ್ಯಾ ಕಾಮತ್ ವಂದಿಸಿದರು. ಸೋನಿ ಪ್ರಭುಧನ್ ನಿರೂಪಿಸಿದರು.ಬಳಿಕ ಸುರಭಿ ಬೈಂದೂರು ತಂಡದಿಂದ ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ಡಾ.ಕೆ.ಶಿವರಾಮ ಕಾರಂತರ ಕಾದಂಬರಿ ಆಧಾರಿತ ‘ಚೋಮನ ದುಡಿ’ ನಾಟಕ ಪ್ರದರ್ಶನಗೊಂಡಿತು.