ನಾಟಕಗಳಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ

| Published : Jun 07 2024, 12:31 AM IST

ನಾಟಕಗಳಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ನಿಟ್ಟಿನಲ್ಲಿ ಹಾಗೂ ಸಮಾಜದ ಪರಿವರ್ತನೆಗಾಗಿ ನಾಟಕ ಜನ್ಮತಾಳಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ವಕೀಲ ಮಲ್ಲಿಕಾರ್ಜುನ ದೇವರಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೋಲ್ಹಾರ

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ನಿಟ್ಟಿನಲ್ಲಿ ಹಾಗೂ ಸಮಾಜದ ಪರಿವರ್ತನೆಗಾಗಿ ನಾಟಕ ಜನ್ಮತಾಳಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ವಕೀಲ ಮಲ್ಲಿಕಾರ್ಜುನ ದೇವರಮನಿ ಹೇಳಿದರು.

ತಾಲೂಕಿನ ಹಣಮಾಪೂರ ಗ್ರಾಮದಲ್ಲಿ ಶ್ರೀದುರ್ಗಾದೇವಿ, ಶ್ರೀ ಚಂದ್ರಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಚಿಕ್ಕಾಲಗುಂಡಿ ಅಂಜನಿಪುತ್ರ ಕಲಾಬಳಗ ಅರ್ಪಿಸುವ ತಾಯಿಯ ಋಣ-ಮಣ್ಣಿನ ಗುಣ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಹಿರಿಯರು ಉದಾತ್ ಚಿಂತನೆಯೊಂದಿಗೆ ನಾಟಕಗಳನ್ನು ಆರಂಭಿಸಿದ್ದಾರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಜನ್ಮತಾಳಿದ ದುರ್ಗಾದೇವಿ ಕೂಡಾ ಧರ್ಮದ ರಕ್ಷಣೆ ಮಾಡುತ್ತಿದ್ದಾಳೆ. ನಾವೆಲ್ಲರೂ ಉದಾತ ಚಿಂತನೆಗಳೊಂದಿಗೆ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳಿದರು.

ನಾಟಕಗಳು ಕೇವಲ ಕಲೆಗೆ ಸೀಮಿತವಾದಗೇ ಸಮಾಜದ ಆರೋಗ್ಯಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿವೆ. ನಾಟಕಗಳು ಎಲ್ಲರನ್ನೂ ಒಂದು ಗೂಡಿಸುವ ಶಕ್ತಿ ಹೊಂದಿವೆ. ಆದರೆ, ಟಿವಿಗಳು ಕುಟುಂಬಗಳಲ್ಲಿ ವಿಘಟನೆಗಳನ್ನು ಸಾಕ್ಷಿಕರಿಸುತ್ತಿವೆ. ನಾಟಕ ನೋಡುವ ವ್ಯಕ್ತಿ ನಾಟಕ ನೋಡುತ್ತಿದ್ದಂತೆ ತನ್ನನ್ನು ತಾನು ಮರೆತು ಎಲ್ಲರೊಂದಿಗೆ ಒಂದಾಗುತ್ತಾನೆ. ನಾಟಕಗಳು ಸಮಾಜದ ಪ್ರತಿಬಿಂಬವಾಗಿ ತಿದ್ದುವ ಕಾರ್ಯದೊಂದಿಗೆ ಸಮಾಜದ ಪರಿವರ್ತನೆಗೆ ಸದ್ದಿಲ್ಲದೆ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.

ಕಲಬುರ್ಗಿ ಕೇಂದ್ರಿಯ ವಿವಿ ಉಪನ್ಯಾಸಕ ಬಸವರಾಜ ಕುಬಕಡ್ಡಿ ಮಾತನಾಡಿದರು. ಶಿಕ್ಷಕ ಸಲೀಂ ಗಡೇದ ಮಾತನಾಡಿದರು. ವೇದಮೂರ್ತಿ ಶಿವಾನಂದ ಹಿರೇಮಠ ಸಾನ್ನಿಧ್ಯವಹಿಸಿದ್ದರು. ಗಣ್ಯರಾದ ನಾಗನಗೌಡ ಬಿರಾದಾರ, ಗ್ರಾಪಂ ಮಾಜಿ ಅಧ್ಯಕ್ಷ ಸಗರಪ್ಪ ಮುರನಾಳ, ಮಲ್ಲಮ್ಮ ಪೂಜಾರಿ, ಕೋಲ್ಹಾರ ಪಪಂ ಸದಸ್ಯೆ ಮಹಾದೇವಿ ಈಟಿ, ಗ್ರಾಪಂ ಸದಸ್ಯರಾದ ಮಹೇಶ ತೊಟಗೇರಿ, ಕವಿತಾ ಮಾದರ, ಗ್ರಾಪಂ ಮಾಜಿ ಸದಸ್ಯ ಬಾಬು ನರಿಯವರ, ಶಿಕ್ಷಕ ಕಾಂತೇಶ ಹೊಸಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು, ಹಣಮಂತ ಚಬ್ಬಿ ಸ್ವಾಗತಿಸಿದರು. ಶಿಕ್ಷಕ ಕಲ್ಲಪ್ಪ ಜಿಂಗಾಟೆ ನಿರೂಪಿಸಿ, ವಂದಿಸಿದರು.

---