ಸಾರಾಂಶ
ಚನ್ನಪಟ್ಟಣ: ನಗರ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವ ಸ್ಥಳಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ, ಹೂ ಚೆಲ್ಲಿವ ಮೂಲಕ ಜಾಗೃತಿ ಮೂಡಿಸುವ ಕೆಲಸಕ್ಕೆ ನಗರಸಭೆ ಮುಂದಾಗಿದೆ.
ಬುಧವಾರ ಬೆಳ್ಳಂಬೆಳ್ಳಗೆ ನಗರ ಪ್ರದೇಶದ ಸಾರ್ವಜನಿಕರ ಸ್ಥಳಗಳಲ್ಲಿ ಕಸ ಸುರಿಯುವ ಸ್ಥಳಗಳಿಗೆ ಪೌರಾಯುಕ್ತ ಸಿ.ಪುಟ್ಟಸ್ವಾಮಿ ನೇತೃತ್ವದಲ್ಲಿ ಭೇಟಿ ನೀಡಿದ ನಗರಸಭೆ ಆರೋಗ್ಯ ಶಾಖೆ ಅಧಿಕಾರಿಗಳು ಹಾಗೂ ನಗರಸಭೆ ಸಿಬ್ಬಂದಿ ಕಸ ಸುರಿಯುವ ಸ್ಥಳವನ್ನು ಸ್ವಚ್ಛಗೊಳಿಸಿ, ಆ ಜಾಗದಲ್ಲಿ ರಂಗೋಲಿ ಬಿಡಿಸಿ, ಹೂವ ಚೆಲ್ಲಿ, ಸ್ವಚ್ಛತೆ ಕಾಪಾಡಿ ಎಂಬ ಸಂದೇಶ ಬರೆಸುವ ಮೂಲಕ ನಗರದ ಅಂದ ಕಾಪಾಡುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು.ನಗರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕಸದ ಸಮಸ್ಯೆ ಉಲ್ಭಣಗೊಳ್ಳುತ್ತಿದ್ದು, ಜನ ಸಾರ್ವಜನಿಕ ಸ್ಥಳಗಳಲ್ಲಿ ಕಸ ತಂದು ಸುರಿಯುವುದು ಸಾಮಾನ್ಯ ಎಂಬಂತಾಗಿದೆ. ಇದರಿಂದ ನಗರದ ಅಂದ ಹಾಳಾಗುವ ಜತೆಗೆ, ಜನರ ಆರೋಗ್ಯ ಸಹ ಹಾಳಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ತಂದು ಸುರಿಯುವುದರಿಂದ ರಸ್ತೆಗಳಲ್ಲಿ ಓಡಾಡುವುದು ಸಾರ್ವಜನಿಕರಿಗೂ ಕಿರಿಕಿರಿ ಉಂಟು ಮಾಡುತ್ತಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಕಸ ತಂದು ಸುರಿಯದಂತೆ ಎಷ್ಟು ಮನವಿ ಮಾಡಿದರೂ ಸಹ ಕಸ ಹಾಕುವುದು ನಿಲ್ಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಗರಸಭೆ ಆರೋಗ್ಯ ಶಾಖೆಯ ಸಿಬ್ಬಂದಿ ಹಾಗೂ ನಗರಸಭೆ ಸಿಬ್ಬಂದಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಕಸ ತಂದು ಸುರಿಯುವ ಕೆಲ ಸ್ಥಳಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ, ಹೂ ಚೆಲ್ಲಿ, ಸ್ವಚ್ಛತೆ ಕಾಪಾಡಿ ಎಂಬ ಗೋಡೆ ಬರಹ ಬರೆಸುವ ಮೂಲಕ ನಗರದ ಅಂದ ಕಾಪಾಡುವ ವಿನೂತನ ಪ್ರಯತ್ನ ಕೈಗೊಂಡಿದೆ.ಈ ವೇಳೆ ಪೌರಾಯುಕ್ತ ಸಿ.ಪುಟ್ಟಸ್ವಾಮಿ ಮಾತನಾಡಿ, ನಗರದ ಸ್ವಚ್ಛತೆ ಕಾಪಾಡಲು ನಾಗರೀಕರ ಸಹಕಾರ ಸಹ ಮುಖ್ಯ. ಸಾರ್ವನಿಕರು ಮನೆ ಹಾಗೂ ಅಂಗಡಿಯಲ್ಲಿ ಸಂಗ್ರಹವಾಗುವ ಕಸವನ್ನು ಹಸಿ ಹಾಗೂ ಒಣ ಕಸ ಎಂದು ವಿಂಗಡಿಸಿ ನಗರಸಭೆ ಕಸ ಸಂಗ್ರಹ ವಾಹನಕ್ಕೆ ನೀಡುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಎಲ್ಲೆಂದರಲ್ಲಿ ಕಸ ತಂದು ಸುರಿಯುವುದರಿಂದ ಜನರ ಆರೋಗ್ಯ ಹಾಳಾಗುವ ಜತೆಗೆ ನಗರದ ಅಂದ ಸಹ ಹಾಳಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಆರೋಗ್ಯ ಶಾಖೆಯ ಕುಸುಮಾ, ಶಿವಕುಮಾರ್, ಮಧು ಇತರರಿದ್ದರು.ಪೊಟೊ೯ಸಿಪಿಟಿ೩: ಚನ್ನಪಟ್ಟಣ ನಗರದ ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿಯುವ ಸ್ಥಳ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ, ಹೂ ಚೆಲ್ಲುವ ಮೂಲಕ ನಗರಸಭೆ ಅಧಿಕಾರಿಗಳು ಜಾಗೃತಿ ಮೂಡಿಸಿದರು.