ಮದ್ದೂರನ್ನು ಮಾದರಿ ಕ್ಷೇತ್ರವಾಗಿ ರೂಪಿಸಲು ಕನಸು ಕಂಡಿರುವೆ: ಶಾಸಕ ಕೆ.ಎಂ.ಉದಯ್

| Published : Feb 28 2025, 12:45 AM IST

ಮದ್ದೂರನ್ನು ಮಾದರಿ ಕ್ಷೇತ್ರವಾಗಿ ರೂಪಿಸಲು ಕನಸು ಕಂಡಿರುವೆ: ಶಾಸಕ ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಒಂದು ವರ್ಷಗಳಲ್ಲಿ ಪ್ರತಿಯೊಂದು ಗ್ರಾಮಗಳಿಗೂ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿ ಅಹವಾಲು ಸ್ವೀಕರಿಸಲಾಗಿತ್ತು. ಈ ವೇಳೆ ಮೂಲ ಸೌಕರ್ಯ, ರೈತರ ಸಮಸ್ಯೆಗಳಾದ ನಾಲೆ ಆಧುನೀಕರಣ, ಕಾಲುವೆಗಳನ್ನು ನಿರ್ಮಾಣ ತೂಬುಗಳ ನಿರ್ಮಾಣದಂತಹ ಹಲವು ವಿಚಾರಗಳ ಬಗ್ಗೆ ಪಟ್ಟಿ ಮಾಡಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮದ್ದೂರನ್ನು ಮಾದರಿ ಕ್ಷೇತ್ರವಾಗಿ ರೂಪಿಸಲು ಕನಸು ಕಂಡಿರುವೆ. ತಾಲೂಕಿನ ಜನತೆ ಹಾಗೂ ರೈತರ ಕಲ್ಯಾಣಕ್ಕಾಗಿ ಸರ್ಕಾರದಿಂದ ವಿಶೇಷ ಅನುದಾನ ತಂದು ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಕೆ.ಶೆಟ್ಟಹಳ್ಳಿ ವೇ ಬ್ರಿಡ್ಜ್ ಹತ್ತಿರ ಕಾವೇರಿ ನೀರಾವರಿ ನಿಗಮದಿಂದ ಲೋಕಸರ ಶಾಖಾ ನಾಲೆಯ ಕೆ.ಶೆಟ್ಟಹಳ್ಳಿ, ಹರಳಹಳ್ಳಿ ಹಾಗೂ ಕರಡಕೆರೆ ಗ್ರಾಮಗಳ ಅಚ್ಚುಕಟ್ಟು ನಾಲಾ ಅಭಿವೃದ್ಧಿಗೆ ಸುಮಾರು 5 ಕೋಟಿ ರು.ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕಳೆದ ಒಂದು ವರ್ಷಗಳಲ್ಲಿ ಪ್ರತಿಯೊಂದು ಗ್ರಾಮಗಳಿಗೂ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿ ಅಹವಾಲು ಸ್ವೀಕರಿಸಲಾಗಿತ್ತು. ಈ ವೇಳೆ ಮೂಲ ಸೌಕರ್ಯ, ರೈತರ ಸಮಸ್ಯೆಗಳಾದ ನಾಲೆ ಆಧುನೀಕರಣ, ಕಾಲುವೆಗಳನ್ನು ನಿರ್ಮಾಣ ತೂಬುಗಳ ನಿರ್ಮಾಣದಂತಹ ಹಲವು ವಿಚಾರಗಳ ಬಗ್ಗೆ ಪಟ್ಟಿ ಮಾಡಿ ನೀಡಿದ್ದಾರೆ ಎಂದರು.

ಸಮಸ್ಯೆಗಳಿಗೆ ಪರಿಹಾರ ರೂಪಿಸಿ ಅನುಷ್ಠಾನಕ್ಕೆ ತರಲು ಇಲಾಖಾವಾರು ಚರ್ಚೆ ನಡೆಸಿ ಕಳೆದ ವರ್ಷದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಸುಮಾರು 300 ಕೋಟಿಗೂ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೇನೆ ಎಂದರು.

ಮಾಜಿ ಶಾಸಕರ ವಿರುದ್ಧ ಕಿಡಿ:

ಈ ಹಿಂದಿನ ಶಾಸಕರು ಕ್ಷೇತ್ರದ ಹಲವು ಗ್ರಾಮಗಳಲ್ಲಿ ಒಂದೇ ಕಾಮಗಾರಿಗೆ 3 ಬಾರಿ ಪೂಜೆ ಮಾಡಿ ಅಭಿವೃದ್ಧಿ ಹೆಸರಿನಲ್ಲಿ ಜನರನ್ನು ಕಣ್ಣೊರುಸುವ ತಂತ್ರವನ್ನು ಮಾಡಿದ್ದರು. ಅನುದಾನಕ್ಕೆ ಅನುಮತಿ ಅನುಮೋದನೆ ಇಲ್ಲದೆ ಸಾಕಷ್ಟು ಬಾರಿ ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಆದರೆ, ನಾನು ಯಾವ ಕಾಮಗಾರಿಗೆ ಪೂಜೆ ಮಾಡಿದರೂ ಮೂರ್ನಾಲ್ಕು ದಿನಗಳಲ್ಲಿ ಕಾಮಗಾರಿ ಕೆಲಸಕ್ಕೆ ಚಾಲನೆ ನೀಡಿದ ಎರಡು ಮೂರು ತಿಂಗಳಲ್ಲಿ ಕಾಮಗಾರಿ ಕಾರ್ಯ ಪೂರ್ಣಗೊಳ್ಳುತ್ತದೆ ಎಂದರು.

ಶೀಘ್ರವಾಗಿ ಆಗಬೇಕಿರುವ ಸುಮಾರು 30 ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗಳಿಗೆ, ಹೆಬ್ಬಕವಾಡಿ ನಾಲೆಗಳಿಗೆ ಸಂಬಂಧಿತ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು. ಕಾಡುಕೊತ್ತನಹಳ್ಳಿ ಹಾಗೂ ಇತರೆ ಗ್ರಾಮಗಳಲ್ಲಿ ಗ್ರಾಮ ಪರಿಮಿತಿ ರಸ್ತೆಗಳ ಕಾಮಗಾರಿಗಳಿಗೆ ಟೆಂಡರ್ ಕರೆದು ಅನುಮೋದನೆ ಪಡೆದು ಶೀಘ್ರವೇ ಚಾಲನೆ ನೀಡಲಾಡುವುದು. ಅಲ್ಲದೇ, ಗ್ರಾಮಗಳ ಸಂಕೀರ್ಣದಲ್ಲಿ ಚರಂಡಿ ರಸ್ತೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.

ಯಾವುದೇ ರಾಜಕೀಯ ಹಿನ್ನೆಲೆ ಇರದ ಒಬ್ಬ ಸಾಮಾನ್ಯ ರೈತನ ಮಗನನ್ನು ಶಾಸಕನನ್ನಾಗಿ ಮಾಡಿದೀರಿ. ಕ್ಷೇತ್ರದ ಜನರ ಋಣ ತೀರಿಸಲು ಪ್ರಾಮಾಣಿಕವಾಗಿ ಶಕ್ತಿಮೀರಿ ದುಡಿದು ಅಭಿವೃದ್ಧಿ ಪಡಿಸುತ್ತೇನೆ. ಜನತೆಯ ಕಷ್ಟಸುಖಗಳ ಜತೆಗಿದ್ದು ಕೊಟ್ಟ ಮಾತಿಗೆ ತಪ್ಪದೆ ನುಡಿದಂತೆ ನಡೆಯುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಮನ್ಮುಲ್ ನಿರ್ದೇಶಕ ಹರೀಶ್‌ಗೌಡ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಸವರಾಜು, ಮಾಜಿ ಸದಸ್ಯ ಎ.ಎಸ್.ರಾಜೀವ್, ಯುವ ಮುಖಂಡ ಶೆಟ್ಟಹಳ್ಳಿ ರಘು, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಗೋಪನಹಳ್ಳಿ ನಂಜುಂಡೇಗೌಡ, ಎಇಇ ರಾಜೇಶ್, ಗುತ್ತಿಗೆದಾರ ತ್ಯಾಗರಾಜು, ಕಡಕೆರೆ ಗ್ರಾಮದ ಮೊಳ್ಳೆನಿಂಗೇಗೌಡ, ಹನುಮಂತೇಗೌಡ, ಮನು, ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.