ಹೂವಿನಹಡಗಲಿ: ದೇಶದ ಜನತೆ ಅಭಿವೃದ್ಧಿಯ ಕನಸು ಕಾಣುತ್ತಿದ್ದಾರೆ. ಆದರೀಗ ಭಾರತದಲ್ಲಿ ಆರ್ಥಿಕ ಅರಾಜಕತೆ ಸೃಷ್ಟಿಯಾಗಿ ನಮ್ಮ ಕನಸುಗಳು, ಕಮರಿ ಹೋಗುತ್ತಿವೆ ಎಂದು ಸಂಸದ ಈ. ತುಕಾರಾಂ ದೂರಿದರು.

ತಾಲೂಕಿನ ಹೊಳಲು ಗ್ರಾಮದಲ್ಲಿ ಕಾಂಗ್ರೆಸ್‌ ತಾಲೂಕ ಘಟಕ, ಕೇಂದ್ರದ ವಿಬಿ ಜಿ ರಾಮ್ ಜಿ ವಿರೋಧಿಸಿ ಹಮ್ಮಿಕೊಂಡಿದ್ದ, ಪಾದಯಾತ್ರೆಯ ನಂತರ ಬಹಿರಂಗ ಸಭೆಯಲ್ಲಿ ಮಾತನಾಡಿದರು.ಈ ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ಸಿಗರು ಶ್ರಮಿಸಿದ್ದರೆ, ಈ ಬಿಜೆಪಿಗರು ಆರ್‌ಎಸ್‌ಎಸ್ ಅಣತಿಯಂತೆ ನಡೆದುಕೊಳ್ಳುತ್ತಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿಗೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾಭಿಮಾನದಿಂದ ಬದುಕಲು ಸಹಕಾರಿಯಾಗಿದ್ದ, ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದು ಹಾಕಿ ಜನರನ್ನು ಗುಲಾಮರನ್ನಾಗಿ ಮಾಡುವ ಜತೆಗೆ ದೈನಂದಿನ ಬಳಕೆ ವಸ್ತುಗಳ ಬೆಲೆ ಏರಿಸಿ ಜನರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ರಾಜ್ಯದ ತೆರಿಗೆ ಹಣ ಪಾವತಿ ಮಾಡುವಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ, ಆದರೆ ನಮ್ಮ ಪಾಲಿನ ತೆರಿಗೆ ಹಣವನ್ನು ನೀಡುತ್ತಿಲ್ಲ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತಿದೆ. ದೇಶದಲ್ಲಿ ಜಾತಿ, ಧರ್ಮ, ರಾಜ್ಯಗಳ ಆಧಾರದ ಮೇಲೆ ನಮ್ಮನ್ನು ವಿಂಗಡಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ಸಿನ ಜನಪರ ಯೋಜನೆಗಳನ್ನು ಕಿತ್ತುಹಾಕಿದ, ಬಿಜೆಪಿಗರು ಖಾಸಗೀಕರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ದೂರಿದರು.

ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೆ ತಂದು, ರಾಜ್ಯದ ಲಕ್ಷಾಂತರ ಕೂಲಿ ಕಾರ್ಮಿಕರನ್ನು ಬೀದಿಗೆ ತಳ್ಳುವ ಹುನ್ನಾರ ನಡೆಸಿದ್ದಾರೆ. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆಯಲ್ಲಿ ಅಕುಶಲ ಕೂಲಿ ಕಾರ್ಮಿಕರಿಗೆ ಸಕಾಲದಲ್ಲಿ ಕೆಲಸ ಮತ್ತು ಕೂಲಿ ನೀಡುತ್ತಿದ್ದ ಯೋಜನೆಯನ್ನು ಬದಲಾವಣೆ ತಂದಿರುವುದು ಸರಿಯಲ್ಲ. ಜತೆಗೆ ರಸಗೊಬ್ಬರದ ಬೆಲೆ ಏರಿಕೆ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.


ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರಸ್ತೆ ಗುಂಡಿಗಳಿಗೆ ಮಣ್ಣು ಹಾಕುವ ಕೆಲಸ ಕೂಡಾ ಆಗಿಲ್ಲ. ಬೆಂಗಳೂರು ಮೂಲದ ಖಾಸಗಿ ಏಜೆನ್ಸಿಯಿಂದ ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಕ್ರಿಯಾ ಯೋಜನೆ ಅವರೇ ಮಾಡುತ್ತಾರೆ, ಬಿಲ್‌ ಅವರೇ ಬರೆದುಕೊಳ್ಳುತ್ತಾರೆ. ಒಟ್ಟಾರೆ ಕ್ಷೇತ್ರದಲ್ಲಿ ಅಭಿವೃದ್ಧಿ ತೀರಾ ಹಿನ್ನಡೆಯಾಗಿದೆ ಎಂದರು.

ಬಳ್ಳಾರಿ ಗ್ರಾಮೀಣ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ, ಬಿ. ಹನುಮಂತಪ್ಪ, ಜಿಪಂ ಮಾಜಿ ಸದಸ್ಯ ವಿಜಯಕುಮಾರ, ಶೋಭಾ ಬೆಂಡಿಗೇರಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್‌. ಶಾಂತನಗೌಡ, ಕಾಂಗ್ರೆಸ್‌ ಎಸ್ಸಿ ಘಟಕ ಅಧ್ಯಕ್ಷ ಎಂ. ಗುಡುದಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಸೋಗಿ ಹಾಲೇಶ, ಮುಖಂಡರಾದ ಅರವಳ್ಳಿ ವೀರಣ್ಣ, ಬಸವನಗೌಡ ಪಾಟೀಲ್‌, ಜ್ಯೋತಿ ಮಲ್ಲಣ್ಣ, ಎಚ್‌.ಡಿ. ಜಗ್ಗೀನ್‌, ಎಚ್‌. ಮಂಜುನಾಥ, ಚನ್ನವೀರಗೌಡ, ಜಿ. ಜಯಣ್ಣ, ವೀರಣ್ಣ ಬೆಂಡಿಗೇರಿ, ಸಿ. ಹನುಮಂತಪ್ಪ, ವೀರಭದ್ರಗೌಡ ಸೇರಿದಂತೆ ಇತರರಿದ್ದರು.