ಪೊಲೀಸರ ಎದುರೇ ವನ್ಯಪ್ರಾಣಿಯ ಚರ್ಮ ಧರಿಸಿ ಕುಣಿತ !

| Published : Nov 12 2023, 01:00 AM IST

ಸಾರಾಂಶ

ಕಾಜುಬಾಗದ ಆಂಜನೇಯ ದೇವಾಲಯದ ಕಳಸ ಪ್ರತಿಷ್ಠಾಪನೆ ಅಂಗವಾಗಿ ಪೊಲೀಸ್ ಬಳಗದವರು ಶುಕ್ರವಾರ ರಾತ್ರಿ ಪೊಲೀಸ್ ಮೈದಾನದಲ್ಲಿ ವೀರಮಣಿ ಕಾಳಗ ಯಕ್ಷಗಾನ ಏರ್ಪಡಿಸಿದ್ದರು.

ಕಾರವಾರ:

ರಾಜ್ಯಾದ್ಯಂತ ವನ್ಯಪ್ರಾಣಿ ಚರ್ಮ, ಉಗುರು, ಕೋಡು ಇಟ್ಟುಕೊಂಡವರು ಕಂಗಾಲಾಗಿರುವಾಗಲೆ ಇಲ್ಲಿ ವನ್ಯಪ್ರಾಣಿಯ ಚರ್ಮ ಧರಿಸಿ ನೂರಾರು ಜನರ ಎದುರೇ ಕುಣಿಯುತ್ತಿದ್ದರೂ ಎದುರುಗಡೆ ಇದ್ದ ಪೊಲೀಸರು ಮಾತ್ರ ಮೂಕಪ್ರೇಕ್ಷಕರಾಗಿದ್ದರು. ಕೆಲವೊಮ್ಮೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದೂ ಕಂಡಬಂತು.

ಓಹ್. ಇದೆಲ್ಲ ಆಗಿದ್ದು ಪೊಲೀಸ್ ಬಳಗದವರೇ ಏರ್ಪಡಿಸಿದ್ದ ಯಕ್ಷಗಾನದಲ್ಲಿ. ಇಲ್ಲಿ ವನ್ಯಪ್ರಾಣಿಯ ಚರ್ಮವೂ ಅಸಲಿಯದ್ದಾಗಿರಲಿಲ್ಲ. ಗಜ ಚರ್ಮಾಂಬರಧಾರಿಯಾಗಿ ಈಶ್ವರನ ಪ್ರವೇಶವಾದಾಗ ಪ್ರಾಣಿ ಚರ್ಮ ಧರಿಸುವ ಬಗ್ಗೆಯೂ ಮಾತುಕತೆ ನಡೆದಿದ್ದು ವಿಶೇಷವಾಗಿತ್ತು.ಕಾಜುಬಾಗದ ಆಂಜನೇಯ ದೇವಾಲಯದ ಕಳಸ ಪ್ರತಿಷ್ಠಾಪನೆ ಅಂಗವಾಗಿ ಪೊಲೀಸ್ ಬಳಗದವರು ಶುಕ್ರವಾರ ರಾತ್ರಿ ಪೊಲೀಸ್ ಮೈದಾನದಲ್ಲಿ ವೀರಮಣಿ ಕಾಳಗ ಯಕ್ಷಗಾನ ಏರ್ಪಡಿಸಿದ್ದರು. ಡ್ಯೂಟಿಯಲ್ಲಿ ಗನ್, ಲಾಠಿ ಹಿಡಿಯುವ ಪೊಲೀಸರು ಗದೆ, ತ್ರಿಶೂಲ, ಬಿಲ್ಲು ಬಾಣಗಳನ್ನು ಹಿಡಿದು ಯಕ್ಷಗಾನ ಪ್ರದರ್ಶನ ನೀಡಿ ರಂಜಿಸಿದರು.

ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ಸಂಪ ಲಕ್ಷ್ಮೀನಾರಾಯಣ, ವಿನಯ ಬೇರೊಳ್ಳಿ, ಮೋಹನ ನಾಯ್ಕ ಕೂಜಳ್ಳಿ, ವೆಂಕಟೇಶ ಹೆಗಡೆ, ದೇವರಾಯ ನಾಯ್ಕ ಮತ್ತಿತರ ಕಲಾವಿದರು ಪ್ರದರ್ಶನ ನೀಡಿದರು.

ಇದಕ್ಕೂ ಮುನ್ನ ಯಕ್ಷಗಾನ ಕಲಾವಿದರನ್ನು ಸತ್ಕರಿಸಲಾಯಿತು.