ಸಾರಾಂಶ
ಬೆಂಗಳೂರು : ದುಬೈನಿಂದ ಕೆ.ಜಿ.ಗಟ್ಟಲೆ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು, ಆರೋಪಿ ರನ್ಯಾ ರಾವ್ ಜತೆಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.
ನಟಿಯಾಗಿರುವ ರನ್ಯಾ ಹಲವು ರಾಜಕಾರಣಿಗಳು, ಚಿನ್ನಾಭರಣ ವ್ಯಾಪಾರಿಗಳು, ಸರ್ಕಾರಿ ಅಧಿಕಾರಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆಗೆ ನಂಟು ಹೊಂದಿರುವುದು ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದುಬೈನಲ್ಲಿ ಕೆ.ಜಿ.ಗಟ್ಟಲೆ ಚಿನ್ನ ಖರೀದಿಗೆ ಹಣ ನೀಡಿದವರ ಬಗ್ಗೆ ರನ್ಯಾ ಈವರೆಗೂ ಬಾಯ್ಬಿಟ್ಟಿಲ್ಲ. ತಾನು ಟ್ರ್ಯಾಪ್‌ಗೆ ಒಳಗಾಗಿರುವುದಾಗಿ ತನಿಖೆ ಆರಂಭದಲ್ಲಿ ಹೇಳಿಕೆ ನೀಡಿದ್ದ ರನ್ಯಾ, ಆ ಟ್ರ್ಯಾಪ್ ಮಾಡಿದವರು ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಡಿಆರ್‌ಐ ಅಧಿಕಾರಿಗಳಿಗೆ ರನ್ಯಾ ಹೇಳಿಕೆ ಬಗ್ಗೆಯೇ ಅನುಮಾನ ಮೂಡಿದೆ.
ಸಂಪರ್ಕದಲ್ಲಿದ್ದ ವ್ಯಕ್ತಿಗಳ ವಿಚಾರಣೆ?: ರನ್ಯಾ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಜಪ್ತಿ ಮಾಡಿರುವ ಡಿಆರ್‌ಐ ಅಧಿಕಾರಿಗಳು, ರನ್ಯಾ ಜತೆಗೆ ಯಾರೆಲ್ಲ ಸಂಪರ್ಕದಲ್ಲಿದ್ದರು ಎಂಬುದನ್ನು ಪಟ್ಟಿ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಆ ವ್ಯಕ್ತಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಲಿದ್ದಾರೆ. ಮತ್ತೊಂದೆಡೆ ರನ್ಯಾ ಬಂಧನದ ಬೆನ್ನಲ್ಲೇ ಆಕೆ ಜತೆಗೆ ಸಂಪರ್ಕದಲ್ಲಿದ್ದ ಕೆಲ ವ್ಯಕ್ತಿಗಳು ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ. ದುಬೈನಿಂದ ಚಿನ್ನ ಕಳ್ಳಸಾಗಣೆ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡಿರುವ ಬಗ್ಗೆ ಡಿಆರ್‌ಐ ಅಧಿಕಾರಿಗಳು ಶಂಕಿಸಿದ್ದಾರೆ. ಈ ಜಾಲ ಭೇದಿಸುವ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಇಂದು ನ್ಯಾಯಾಲಯಕ್ಕೆ ಹಾಜರು: ಡಿಆರ್‌ಐ ಅಧಿಕಾರಿಗಳು ಆರೋಪಿ ರನ್ಯಾ ರಾವ್ ಬಂಧನದ ಬಳಿಕ ಆಕೆಯನ್ನು ಆರ್ಥಿಕ ಅಪರಾಧಗಳ ತಡೆ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ವಶಕ್ಕೆ ಪಡೆದಿದ್ದರು. ಕಸ್ಟಡಿ ಅವಧಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಸೋಮವಾರ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಮತ್ತಷ್ಟು ವಿಚಾರಣೆ ಸಂಬಂಧ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ.
ಸಿಬಿಐ ಕಸ್ಟಡಿಗೆ ಪಡೆಯುವ ಸಾಧ್ಯತೆ: ಮತ್ತೊಂದೆಡೆ ಈ ಚಿನ್ನ ಕಳ್ಳ ಸಾಗಣೆ ಸಂಬಂಧ ನಟಿ ರನ್ಯಾ ವಿರುದ್ಧ ಸಿಬಿಐ ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದು, ಈಗಾಗಲೇ ತನಿಖೆ ಆರಂಭಿಸಿದೆ. ಸಿಬಿಐ ಅಧಿಕಾರಿಗಳ ತಂಡವೊಂದು ಬೆಂಗಳೂರಿನ ಡಿಆರ್‌ಐ ಅಧಿಕಾರಿಗಳನ್ನು ಭೇಟಿಯಾಗಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. ಹೀಗಾಗಿ ನಟ ರನ್ಯಾ ಅವರನ್ನು ವಿಚಾರಣೆಗೆ ಒಳಪಡಿಸುವ ಸಲುವಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಒಂದು ವೇಳೆ ಸೋಮವಾರ ಡಿಆರ್‌ಐ ಅಧಿಕಾರಿಗಳು ಮತ್ತೆ ರನ್ಯಾಳನ್ನು ವಶಕ್ಕೆ ಪಡೆಯದಿದ್ದಲ್ಲಿ ಸಿಬಿಐ ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ದಟ್ಟವಾಗಿದೆ.