ಸಾರಾಂಶ
ಮಳೆಗಾಗಿ ವಿಚಿತ್ರ ಪ್ರಾರ್ಥನೆಗಳು, ಆಚರಣೆಗಳು ನಡೆಯುತ್ತವೆ. ಆದರೆ ಇಲ್ಲೊಂದು ವಿಚಿತ್ರ ಪ್ರಾರ್ಥನೆಯನ್ನು ಗ್ರಾಮಸ್ಥರು ಮಾಡಿದ್ದಾರೆ. ಎಲ್ಲೆಡೆ ಮಳೆ ಆವರಿಸಿಕೊಂಡಿದ್ದರೇ, ಇಲ್ಲಿ ಮಾತ್ರ ಮಳೆಯಾಗಿಲ್ಲ ಎಂಬ ಕಾರಣಕ್ಕೆ ಗೋರಿಗೆ ಟ್ಯಾಂಕರ್ ಮೂಲಕ ನೀರು ಹಾಯಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.!
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಮಳೆಗಾಗಿ ವಿಚಿತ್ರ ಪ್ರಾರ್ಥನೆಗಳು, ಆಚರಣೆಗಳು ನಡೆಯುತ್ತವೆ. ಆದರೆ ಇಲ್ಲೊಂದು ವಿಚಿತ್ರ ಪ್ರಾರ್ಥನೆಯನ್ನು ಗ್ರಾಮಸ್ಥರು ಮಾಡಿದ್ದಾರೆ. ಎಲ್ಲೆಡೆ ಮಳೆ ಆವರಿಸಿಕೊಂಡಿದ್ದರೇ, ಇಲ್ಲಿ ಮಾತ್ರ ಮಳೆಯಾಗಿಲ್ಲ ಎಂಬ ಕಾರಣಕ್ಕೆ ಗೋರಿಗೆ ಟ್ಯಾಂಕರ್ ಮೂಲಕ ನೀರು ಹಾಯಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.!ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಕಲಕೇರಿ ಗ್ರಾಮದಲ್ಲಿ ಇಂತಹ ವಿಚಿತ್ರ ಸಂಗತಿಯೊಂದು ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ಮಳೆಗಾಗಿ ಗೋರಿಯಲ್ಲಿರುವ ಶವದ ಬಾಯಿಗೆ ಟ್ಯಾಂಕರ್ ಮೂಲಕ ನೀರು ಹಾಕಿ ಮಳೆಗಾಗಿ ಗ್ರಾಮಸ್ಥರು ಪ್ರಾರ್ಥನೆ ಮಾಡಿದ್ದಾರೆ. ಕಾಕತಾಳಿಯ ಎನ್ನುವಂತೆ ಸಂಜೆ 5ರ ವೇಳೆಗೆ ಜಿಟಿ ಜಿಟಿ ಮಳೆ ಪ್ರಾರಂಭವಾಯಿತು.ಗೋರಿಗೆ ನೀರು ಹಾಕಿದ ಗ್ರಾಮಸ್ಥರು:
ಮಳೆ ಇಲ್ಲದೆ ಕಂಗೆಟ್ಟಿರುವ ಕಲಕೇರಿ ಗ್ರಾಮಸ್ಥರು ಇಂತಹ ವಿಚಿತ್ರ ಆಚರಣೆ ಮುಂದಾಗಿದ್ದಾರೆ. ಮಳೆಗಾಗಿ ಟ್ಯಾಂಕರ್ ಮೂಲಕ ಗ್ರಾಮದ ಸ್ಮಶಾನಕ್ಕೆ ತೆರಳಿದ ಯುವಕರು, ಗ್ರಾಮದ ಮುಖಂಡರು ಗೋರಿಯೊಂದರ ಮೇಲೆ ಹಾರಿಯಿಂದ ರಂಧ್ರ ಕೊರೆದಿದ್ದಾರೆ. ಬಳಿಕ ಅದರಲ್ಲಿ ಟ್ಯಾಂಕರ್ ಪೈಪ್ ಮೂಲಕ ನೀರು ಹಾಕಿದ್ದಾರೆ. ಪೈಪ್ ಮೂಲಕ ಹಾಕುವ ನೀರು ಶವದ ಬಾಯಿ ತಲುಪುತ್ತಂತೆ. ಗೋರಿಯಲ್ಲಿರುವ ಶವದ ಬಾಯಿಗೆ ಹೀಗೆ ನೀರು ಹಾಕಿದರೆ ಮಳೆಯಾಗುತ್ತೆ ಎನ್ನುವುದು ಈ ಗ್ರಾಮದ ಜನರ ನಂಬಿಕೆ.ಶವದ ಬಾಯಿಗೆ ನೀರು ಹಾಕಿದ ನಂತರ ಶವ ಹೂತಿರುವ ಗೋರಿಯ ಮೇಲೆ ಕುಳಿತು ಜನರು ಪ್ರಾರ್ಥನೆ ಮಾಡುತ್ತಾರೆ. ನಿನಗೆ ನೀರುಣಿಸಲಾಗಿದ್ದು, ನೀನು ಕೂಡ ಗ್ರಾಮಕ್ಕೆ ಮಳೆಯಾಗುವಂತೆ ಪ್ರಾರ್ಥಿಸು ಎಂದು ಶವಗಳ ಆತ್ಮಗಳಿಗೆ ಸೂಚನೆ ನೀಡಲಾಗುತ್ತದೆ ಎಂಬುವುದು ಇದರ ಆಚರಣೆ ಹಿಂದಿನ ಉದ್ದೇಶ. ಇದಾದ ಕೆಲವೇ ದಿನಗಳಲ್ಲಿ ಮಳೆ ಆಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರದ್ದು.ಇದು ವಿಚಿತ್ರವೋ, ಮೂಢನಂಬಿಕೆಯೊ ಗೊತ್ತಿಲ್ಲ. ಕಲಕೇರಿ ಗ್ರಾಮದ ಯುವಕರು ಗೋರಿಯಲ್ಲಿರುವ ಶವಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಿದ್ದಾರೆ. ಹೀಗೆ ಮಾಡಿದ ಬಳಿಕ ಸಂಜೆ 5 ಗಂಟೆ ಸುಮಾರಿಗೆ ಜಿಟಿಜಿಟಿ ಮಳೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಬಹಳ ವರ್ಷಗಳಿಂದ ನಮ್ಮ ಹಿರಿಯರು ಇಂತಹ ಆಚರಣೆ ಮಾಡುತ್ತಾ ಬಂದಿದ್ದಾರೆ. ಸಕಾಲದಲ್ಲಿ ಮಳೆಯಾಗದೆ ಇದ್ದಾಗ ಗುರ್ಜಿಪೂಜೆ, ಕತ್ತೆಗಳ ಮದುವೆಯಂತಹ ವಿಶಿಷ್ಟ ಆಚರಣೆ ಸರ್ವೆ ಸಾಮಾನ್ಯ. ಕಳೆದ ವರ್ಷ ಮಳೆ ಬಾರದಿದ್ದಾಗ ಎಲ್ಲಾ ಪ್ರಯತ್ನ ಮಾಡಿದ್ದರೂ ಮಳೆ ಬಾರದಿದ್ದಾಗ ಗ್ರಾಮದ ಹಿರಿಯರು ಸ್ಮಶಾನದಲ್ಲಿರುವ ಗೋರಿಗಳಿಗೆ ನೀರುಣಿಸಲು ಹೇಳಿದಾಗ ಕಳೆದ ವರ್ಷ ನೀರುಣಿಸಿದ ಕೆಲ ದಿನಗಳಲ್ಲೇ ಮಳೆಯಾಗಿದೆ. ಅಂದಿನಿಂದ ಇಂತಹ ಆಚರಣೆ ನಡೆಯುತ್ತಿದೆ..-ವಾಗೀಶ ಹಿರೇಮಠ,
ಕಲಕೇರಿ, ಗ್ರಾಮಸ್ಥ.