ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಸೇವಿಸಿ: ಜಿಲ್ಲಾಧಿಕಾರಿ ನಿತೇಶ್

| Published : Apr 17 2024, 01:16 AM IST

ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಸೇವಿಸಿ: ಜಿಲ್ಲಾಧಿಕಾರಿ ನಿತೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಬಿಸಿಲಿನ ಬೇಗೆ ತೀವ್ರವಾಗಿರುವುದರಿಂದ ಶರೀರದ ದಾಹ ಹಾಗೂ ಬಾಯಾರಿಕೆ ನೀಗಿಸಲು ಆಯುಷ್ ಇಲಾಖೆ ಪರಿಚಯಿಸಿರುವ ಚಿಂಚಾ ಪಾನಕ (ಹುಣಸೆ ಹಣ್ಣಿನ ಪಾನಕ)ವನ್ನು ಸಾರ್ವಜನಿಕರು ಸೇವಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಿಸಿಲಿನ ಬೇಗೆ ತೀವ್ರವಾಗಿರುವುದರಿಂದ ಶರೀರದ ದಾಹ ಹಾಗೂ ಬಾಯಾರಿಕೆ ನೀಗಿಸಲು ಆಯುಷ್ ಇಲಾಖೆ ಪರಿಚಯಿಸಿರುವ ಚಿಂಚಾ ಪಾನಕ (ಹುಣಸೆ ಹಣ್ಣಿನ ಪಾನಕ)ವನ್ನು ಸಾರ್ವಜನಿಕರು ಸೇವಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಆಯುಷ್ ಇಲಾಖೆ ವತಿಯಿಂದ ಆರೋಗ್ಯಕರ ಚಿಂಚಾ ಪಾನಕ(ಹುಣಸೆ ಹಣ್ಣಿನ ಪಾನಕ)ವನ್ನು ಸಾರ್ವಜನಿಕರು ಹಾಗೂ ಕರ್ತವ್ಯನಿರತ ಕಚೇರಿಯ ಸಿಬ್ಬಂದಿಗೆ ವಿತರಿಸಿ ಮಾತನಾಡಿದರು. ಎಲ್ಲೆಡೆ ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ಆರೋಗ್ಯ ರಕ್ಷಣೆಗೆ ದೇಹವನ್ನು ತಂಪಾಗಿಟ್ಟುಕೊಳ್ಳುವುದು ಅಗತ್ಯವಾಗಿದೆ. ಆದ್ದರಿಂದ ಹೆಚ್ಚು ಹೆಚ್ಚು ನೀರು ಕುಡಿಯುವುದರ ಜೊತೆಗೆ ಆಯುಷ್ ಇಲಾಖೆಯಿಂದ ಪರಿಚಯಿಸಲಾಗುವ ಪಾನಕ ಮತ್ತಿತರರ ಪಾನೀಯ ಸೇವಿಸುವಂತೆ ತಿಳಿಸಿದರು.

ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ ಮಾತನಾಡಿ, ಹುಣಸೆ ಹಣ್ಣಿನ ಪಾನಕ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದರ ಜತೆಗೆ ಬಾಯಾರಿಕೆ ನಿವಾರಿಸಲಿದೆ ಎಂದರು.

ಚುನಾವಣೆ ತರಬೇತಿ ನೋಡಲ್ ಅಧಿಕಾರಿ ಶಂಕರಾನಂದ‌ ಬನಶಂಕರಿ, ಆಯುಷ್ ಇಲಾಖೆಯ ಡಾ.ಚಂದ್ರಶೇಖರ ಸಿದ್ದಾಪುರ, ಡಾ.ಸುಚೇತಾ ದೇಸಾಯಿ, ವಾರ್ತಾ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

ಪಾನಕ ತಯಾರಿಸುವ ವಿಧಾನ:

ಹುಣಸೆ ಹಣ್ಣು (100 ಗ್ರಾಂ), ಬೆಲ್ಲದ‌ ಪುಡಿ (400 ಗ್ರಾಂ), ಜೀರಿಗೆ ಪುಡಿ (10 ಗ್ರಾಂ), ಕಾಳು ಮೆಣಸಿನ‌ಪುಡಿ (5 ಗ್ರಾಂ) ಹಾಗೂ ಸೈಂದವ ಲವಣ (5 ಗ್ರಾಂ) ಬಳಸಿಕೊಂಡು ಪಾನಕ ತಯಾರಿಸಬಹುದು.

ಹುಣಸೆ ಹಣ್ಣು ರಾತ್ರಿಯಿಡೀ ನೆನೆಸಿಡಬೇಕು; ಮರುದಿನ ಬೆಳಗ್ಗೆ ಕೈಯಿಂದ ಹಿಸುಕಿ ಬಾಟಲಿಗಳಲ್ಲಿ ಸೋಸಿಟ್ಟುಕೊಳ್ಳಬೇಕು. ಅಗತ್ಯ ಪ್ರಮಾಣದ ನೀರನ್ನು ಪಾತ್ರೆಗೆ ಹಾಕಿ ಹುಣಸೆ ಹಣ್ಣು ಮಿಶ್ರಣವನ್ನು ಬೆರೆಸಿ ಇದರೊಂದಿಗೆ ಬೆಲ್ಲದ ಪುಡಿಯನ್ನು ಹಾಕಿ ಕರಗಿಸಬೇಕು. ಕೊನೆಯಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಜೀರಿಗೆ ಪುಡಿ, ಕಾಳು‌ಮೆಣಸಿನ ಪುಡಿ ಮತ್ತು ಸೈಂದವ ಲವಣವನ್ನು ಸೇರಿಸಿದರೆ ಪಾನಕ ಸಿದ್ಧವಾಗುತ್ತದೆ. ಪ್ರತಿದಿನ 50 ರಿಂದ 100 ಮಿ.ಲೀ. ಪಾನಕ ಸೇವಿಸಬಹುದು.