ಸಾರಾಂಶ
ಗದಗ: ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಕುಡಿವ ನೀರಿಗಾಗಿ ಉಂಟಾಗಿರುವ ಸಮಸ್ಯೆ ಇತ್ಯರ್ಥಪಡಿಸಲು ಸೋಮವಾರ ಗದಗ ತಹಸೀಲ್ದಾರ್ ಹಾಗೂ ತಾಪಂ ಇಓ ಸೇರಿದಂತೆ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ,ಗ್ರಾಪಂ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿ ಅಗತ್ಯ ಸಲಹೆ ಸೂಚನೆ ನೀಡಿದರು.
ಗ್ರಾಮದಲ್ಲಿ ಸದ್ಯ ಪೂರೈಕೆ ಮಾಡುತ್ತಿರುವ ಟ್ಯಾಂಕರ್ ನೀರು ಕುಡಿಯಲು ಯೋಗ್ಯವಾಗಿಲ್ಲ ಎನ್ನುವ ಗ್ರಾಮಸ್ಥರ ಆರೋಪದ ಆಧಾರದಲ್ಲಿ ಕನ್ನಡಪ್ರಭ ಸೋಮವಾರ ವರದಿ ಪ್ರಕಟಿಸಿದ ಬೆನ್ನಲ್ಲಿಯೇ ಎಚ್ಚೆತ್ತ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿ ಗ್ರಾಪಂ ಕಚೇರಿಯಲ್ಲಿ ಸಭೆ ನಡೆಸಿ ಪರಿಹಾರಕ್ಕೆ ಮುಂದಡಿ ಇಟ್ಟಿದ್ದಾರೆ.ಅಧಿಕಾರಿಗಳು ತರಾಟೆಗೆ: ಗ್ರಾಪಂ ಆವರಣದಲ್ಲಿ ಸಭೆ ನಡೆಸಿದ ಅಧಿಕಾರಿಗಳನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನಾವು ನಮ್ಮ ಗ್ರಾಮದಲ್ಲಿನ ಸಮಸ್ಯೆಯನ್ನು ಈಗಾಗಲೇ ಹಲವಾರು ಬಾರಿ ನಿಮಗೆ ತಿಳಿಸಿದರೂ ಯಾರೊಬ್ಬರೂ ಇತ್ತ ಸುಳಿಯಲಿಲ್ಲ, ಇಂದು ಕನ್ನಡಪ್ರಭ ವರದಿ ಪ್ರಕಟಿಸಿದ ನಂತರ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ನೀವು ಪೂರೈಕೆ ಮಾಡುತ್ತಿರುವ ನೀರನ್ನು ನಾವು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದೇವೆ ಬಂದು ನೀವೇ ಕುಡಿದು ನೋಡಿ, ಅದು ಕುಡಿಯಲು ಯೋಗ್ಯವಾಗಿದೆ ಎನ್ನುವುದಾದರೆ ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಇಷ್ಟೊಂದು ದೊಡ್ಡ ಗ್ರಾಮಕ್ಕೆ ಕೇವಲ 2 ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದರೆ ಒಂದು ಓಣಿಗೆ ನೀರು ತಲುಪಬೇಕಾದರೆ ನಾಲ್ಕೈದು ದಿನ ಬೇಕು, ಅಷ್ಟೊಂದು ದಿನ ಗ್ರಾಮಸ್ಥರು ನೀರಿಲ್ಲದೇ ಇರಬೇಕೇ? ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ನೀರು ಪೂರೈಕೆ ಮಾಡುವ ಗುತ್ತಿಗೆ ಪಡೆದಿರುವ ವ್ಯಕ್ತಿ ಮಧ್ಯಪ್ರವೇಶಿಸಿ ಮಾತನಾಡಲು ಮುಂದಾದ ವೇಳೆ ಗ್ರಾಮಸ್ಥರು ನೀವೇನು ಅಧಿಕಾರಿಗಳೇ? ನಾವು ನಮ್ಮ ಸಮಸ್ಯೆ ಅಧಿಕಾರಿಗಳ ಬಳಿ ಹೇಳುತ್ತೇವೆ ಸುಮ್ಮನ್ನಿರಿ ಎಂದು ತರಾಟೆಗೆ ತೆಗೆದುಕೊಂಡರು.ಆರೋಗ್ಯ ತಪಾಸಣೆ ಪ್ರಾರಂಭ: ತಿಮ್ಮಾಪುರ ಗ್ರಾಮದಲ್ಲಿ ಪೂರೈಕೆಯಾಗುತ್ತಿರುವ ಕುಡಿವ ನೀರಿನ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಆರೋಗ್ಯ ಇಲಾಖೆ ಸೋಮವಾರವೇ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಪ್ರಾರಂಭಿಸಿದ್ದು, ಅಗತ್ಯವಿರುವವರ ರಕ್ತದ ಮಾದರಿ ಸಂಗ್ರಹಿಸಿದ್ದು, ಜನರಲ್ಲಿ ಆರೋಗ್ಯ ಜಾಗೃತಿ ಕೂಡಾ ಮೂಡಿಸುತ್ತಿದ್ದಾರೆ.
ತಿಮ್ಮಾಪುರ ಗ್ರಾಮದ ಜನರಿಗೆ ಪೂರೈಕೆ ಮಾಡುತ್ತಿರುವ ನೀರನ್ನು ಈಗಾಗಲೇ ತಪಾಸಣೆ ಮಾಡಿಸಿಯೇ ಪೂರೈಕೆ ಮಾಡಲಾಗಿದೆ. ಯಾವುದೇ ರೀತಿಯ ಪ್ಲೋರೈಡ್ ಅಂಶಗಳಿಲ್ಲ, ಇನ್ನು ಸೋಮವಾರ ನಾನು, ತಾಪಂ ಇಓ ಅವರು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚಿಸಿದ್ದೇವೆ. ಪೂರೈಕೆ ಆಗುತ್ತಿರುವ ನೀರಿನ ಮಾದರಿ ಸಂಗ್ರಹಿಸಿ ಮತ್ತೊಮ್ಮೆ ತಪಾಸಣೆ ಮಾಡಿಸಲು ಸೂಚಿಸಲಾಗಿದೆ. ಟ್ಯಾಂಕರ್ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹೇಳಿದರು.ನಮ್ಮ ಗ್ರಾಮದಲ್ಲಿನ ನೀರಿನ ಸಮಸ್ಯೆ ಕುರಿತು ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾರೂ ಗಮನ ನೀಡಲಿಲ್ಲ, ಸೋಮವಾರ ಕನ್ನಡಪ್ರಭ ವರದಿ ಪ್ರಕಟಿಸಿದ ಬೆನ್ನಲ್ಲಿಯೇ ತಹಸೀಲ್ದಾರ, ತಾಪಂ ಇಓ, ಪಿಡಿಓ ಸೇರಿದಂತೆ ಕೆಲ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಸಭೆ ನಡೆಸಿದ್ದಾರೆ. ಪೂರೈಕೆ ಮಾಡುತ್ತಿರುವ ನೀರು ಯೋಗ್ಯವಾಗಿದೆ ಎಂದು ವಾದ ಮಾಡುತ್ತಿದ್ದಾರೆ. ಅದಕ್ಕಾಗಿಯೇ ನೀವು ಪೂರೈಸಿದ ನೀರನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದೇವೆ ಬನ್ನಿ ಕುಡಿದು ನೋಡಿ, ಎಂದರೆ ಅಧಿಕಾರಿಗಳು ಬರಲಿಲ್ಲ, ಆದರೆ ಟ್ಯಾಂಕರ್ ಮೂಲಕ ಪೂರೈಕೆ ಆಗುವ ನೀರನ್ನು ಅಧಿಕಾರಿಗಳಿಗೆ ಸೋಮವಾರ ಕುಡಿಸಿದ್ದೇವೆ. ಇನ್ನು ಹೆಚ್ಚುವರಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತೆ ವಿನಂತಿಸಿದ್ದೇವೆ ಎಂದು ತಿಮ್ಮಾಪುರ ಗ್ರಾಮಸ್ಥ ಯಲ್ಲಪ್ಪ ಬಾಬರಿ ಹೇಳಿದರು.