ಸಾರಾಂಶ
ಕವಿವಿ ಕ್ಯಾಂಪಸ್‌ನಲ್ಲಿ 128 ವಿವಿಧ ಪಕ್ಷಿಗಳು ಇರುವುದನ್ನು ಗುರುತಿಸಿದ್ದು, ಬೇಸಿಗೆಯ ಬಿಸಿಲಿನಲ್ಲಿ ಅವುಗಳಿಗೆ ಕುಡಿಯುವ ನೀರು ಪೂರೈಸಲು ಈ ರೀತಿಯ ತೊಟ್ಟಿಗಳನ್ನು ಇಡುವ ಮೂಲಕ ಪ್ರತಿಯೊಬ್ಬರು ಪಕ್ಷಿ ಸಂಕುಲಕ್ಕೆ ನೆರವಾಗಬೇಕು.
ಧಾರವಾಡ:
ಬಿರು ಬಿಸಿಲು, ತಾಪಮಾನದಿಂದ ಮನುಷ್ಯನಂತೆ ಪ್ರಾಣಿ-ಪಕ್ಷಿಗಳು ಸಹ ಪರದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಪಕ್ಷಿಗಳಿಗೆ ಕುಡಿಯುವ ನೀರು ಹಾಗೂ ದವಸ ಧಾನ್ಯ ಇಡುವ ಮೂಲಕ ಮಾನವೀಯತೆ ಮೆರೆದಿದೆ.ವಿವಿ ಉದ್ಯಾನವನ ವಿಭಾಗದ ಸಹಯೋಗದಲ್ಲಿ ವಿವಿಯ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ನೆರವಿನೊಂದಿಗೆ ನೀರು ಹಾಕುವ ತೊಟ್ಟಿಗಳನ್ನು ಗ್ರೀನ್ ಗಾರ್ಡನ್, ಬೋಟೋನಿಕಲ್ ಗಾರ್ಡನ್ ಹಾಗೂ ವಿವಿಧ ಸ್ನಾತಕೋತ್ತರ ವಿಭಾಗಗಳ ಮುಂದೆ ನೀರು ಮತ್ತು ಪಕ್ಷಿಗಳ ಆಹಾರ ಧಾನ್ಯಗಳನ್ನು ಇಡುವ ಕಾರ್ಯಕ್ಕೆ ಕುಲಪತಿ ಪ್ರೊ. ಕೆ.ಬಿ. ಗುಡಸಿ ಭಾನುವಾರ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕವಿವಿ ಕ್ಯಾಂಪಸ್‌ನಲ್ಲಿ 128 ವಿವಿಧ ಪಕ್ಷಿಗಳು ಇರುವುದನ್ನು ಗುರುತಿಸಿದ್ದು, ಬೇಸಿಗೆಯ ಬಿಸಿಲಿನಲ್ಲಿ ಅವುಗಳಿಗೆ ಕುಡಿಯುವ ನೀರು ಪೂರೈಸಲು ಈ ರೀತಿಯ ತೊಟ್ಟಿಗಳನ್ನು ಇಡುವ ಮೂಲಕ ಪ್ರತಿಯೊಬ್ಬರು ಪಕ್ಷಿ ಸಂಕುಲಕ್ಕೆ ನೆರವಾಗಬೇಕು. ಮನುಷ್ಯರಿಗೆ ಬೇಕಾದ ಅಗತ್ಯಗಳನ್ನು ಈಡೇರಿಸಿಕೊಳ್ಳುತ್ತಾನೆ. ಆದರೆ, ಪ್ರಾಣಿ-ಪಕ್ಷಿಗಳಿಗೆ ಅದು ಸಾಧ್ಯವಿಲ್ಲ. ಆದ್ದರಿಂದ ಮನುಷ್ಯರು ಪ್ರಾಣಿ-ಪಕ್ಷಿಗಳಿಗೆ ಆಹಾರ, ನೀರು ಕೊಡುವ ಕಾರ್ಯ ಮಾಡಬೇಕಿದೆ ಎಂದರು.ಕುಲಸಚಿವ ಡಾ. ಎ. ಚೆನ್ನಪ್ಪ ಮಾತನಾಡಿ, ಹಳ್ಳಿಗಳಲ್ಲಿ ಕೆರೆ ನಿರ್ಮಿಸುವ ಮೂಲಕ ಮನುಷ್ಯರು ಜತೆಗೆ ಪ್ರಾಣಿ-ಪಕ್ಷಿ, ಜೀವ ಸಂಕುಲನಕ್ಕೆ ಬೇಸಿಗೆಯಲ್ಲಿ ನೀರು ಸಿಗುವಂತೆ ಪೂರ್ವಜರು ಮಾಡಿದ್ದಾರೆ. ಅದನ್ನು ಉಳಿಸಿಕೊಂಡು ನಾವು ಪರಿಸರ ಜಾಗೃತಿ ಕಾರ್ಯದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.
ಮೌಲ್ಯಮಾಪನ ಕುಲಸಚಿವ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ಸಕಲಜೀವಾತ್ಮರಿಗೆ ಲೇಸು ಬಯಸುವುದು ನಿಜವಾದ ಧರ್ಮ. ಈ ವರ್ಷ ಬೇಸಿಗೆ ಬಿಸಿಲು ಹೆಚ್ಚಾಗಿದ್ದು ಪ್ರತಿಯೊಬ್ಬರು ತಮ್ಮ ಮನೆ ಮುಂದೆ ನೀರು ಇಡುವ ಮೂಲಕ ಪಕ್ಷಿಗಳ ನೀರಿನ ದಾಹ ನೀಗಿಸಬೇಕು ಎಂದರು.ಗಾರ್ಡನ್ ವಿಭಾಗದ ಮುಖ್ಯಸ್ಥ ಡಾ. ಮುಲಗುಂದ, ಎನ್ನೆಸ್ಸೆಸ್ ಅಧಿಕಾರಿ ಡಾ. ಎಂ.ಬಿ. ದಳಪತಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಇದ್ದರು.