ಸಾರಾಂಶ
ಕಡಹಿನಬೈಲು ಗ್ರಾಮ ಪಂಚಾಯಿತಿಯ ಕರಗುಂದ- ಶೆಟ್ಟಿಕೊಪ್ಪ ವ್ಯಾಪ್ತಿಯ 290 ಮನೆಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಶುದ್ದ ಕುಡಿಯುವ ನೀರನ್ನು ನೀಡಲಾಗುವುದು ಎಂದು ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾ ಮಹೇಶ್ ತಿಳಿಸಿದರು.
ನವಗ್ರಾಮದಲ್ಲಿ ಮನೆ, ಮನೆಗೆ ಗಂಗಾ ಕಾರ್ಯಕ್ರಮಕ್ಕೆ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಡಹಿನಬೈಲು ಗ್ರಾಮ ಪಂಚಾಯಿತಿಯ ಕರಗುಂದ- ಶೆಟ್ಟಿಕೊಪ್ಪ ವ್ಯಾಪ್ತಿಯ 290 ಮನೆಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಶುದ್ದ ಕುಡಿಯುವ ನೀರನ್ನು ನೀಡಲಾಗುವುದು ಎಂದು ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾ ಮಹೇಶ್ ತಿಳಿಸಿದರು.
ಶುಕ್ರವಾರ ಶೆಟ್ಟಿಕೊಪ್ಪ ಸಮೀಪದ ನವಗ್ರಾಮದಲ್ಲಿ ಕಡಹಿನಬೈಲು ಗ್ರಾಮದ ಕರಗುಂದ-ಶೆಟ್ಟಿಕೊಪ್ಪದ ಜನವಸತಿ ಪ್ರದೇಶಗಳಿಗೆ ಶುದ್ಧ ಗಂಗಾ ಕಾರ್ಯಕ್ರಮದಡಿ ಮನೆ, ಮನೆಗೆ ನೀರು ನೀಡುವ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ರಾಜ್ಯ ಹಾಗೂ ಸರ್ಕಾರದ ಸಹ ಬಾಗಿತ್ವದಲ್ಲಿ ಈ ಯೋಜನೆ ರೂಪಿಸಲಾಗಿದೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ನೀಡುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. 70 ಲಕ್ಷ ರು. ವೆಚ್ಚದಲ್ಲಿ 290 ಮನೆಗಳಿಗೆ ನೀರು ನೀಡಲಾಗುವುದು. ಇದರಲ್ಲಿ 22 ಪೈಪ್ ಲೈನ್, 25 ಸಾವಿರ್ ಲೀಟರ್ ನೀರಿನ ಟ್ಯಾಂಕ್ ಹಾಗೂ 1 ಕೊಳವೆ ಬಾವಿ ಒಳಗೊಂಡಿದೆ ಎಂದರು. ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ಈ ವರ್ಷ ಬರಗಾಲ ಇರುವುದರಿಂದ ಅಂತರ್ಜಲ ಕಡಿಮೆಯಾಗಿ ತೆರೆದ ಬಾವಿ, ಕೊಳವೆಬಾವಿಗಳ ನೀರು ಬತ್ತಿ ಹೋಗಿದೆ. ಆದರೆ, ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಶಾಸಕರ ಟಾಕ್ಸ್ ಫೋರ್ಸ್ ಅಡಿ ಹೊಸ ಕೊಳವೆ ಬಾವಿ ಕೊರೆಸಿ ಜನರಿಗೆ ನೀರು ಕೊಡಲಾಗುವುದು. ಜಲ ಜೀವನ್ ಮಿಷನ್ ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವಾಣಿ ನರೇಂದ್ರ, ಎ.ಬಿ.ಮಂಜುನಾಥ್,ಪೂರ್ಣಿಮ ಸಂತೋಷ್, ಗುತ್ತಿಗೆದಾರ ಸಚ್ಚಿದಾನಂದ, ಸುಬ್ರಮಣ್ಯ, ಉಮೇಶ್ ಮತ್ತಿತರರು ಇದ್ದರು.