ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ವ್ಯವಸ್ಥೆಗಳನ್ನು ಕಲ್ಪಿಸುವಾಗ ಚಾಚೂ ತಪ್ಪದೆ ನಿಯಮಗಳನ್ನು ಪಾಲಿಸಬೇಕು. ಸಮಸ್ಯಾತ್ಮಕ ಗ್ರಾಮಗಳಿಗೆ ನೀರಿನ ಅನುಕೂಲ ಮಾಡಿಕೊಡುವುದಕ್ಕೆ ಯಾವುದೇ ಹಣಕಾಸಿನ ತೊಂದರೆ ಇಲ್ಲ. ಮುಂದಿನ ಪ್ರಗತಿಪರಿಶೀಲನಾ ಸಭೆ ವೇಳೆಗೆ ಶಾಸಕರಿಂದ ದೂರು ಬರದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಇಲ್ಲದಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದರು.ನಗರದ ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಲು ಸಮಯ ನಿಗದಿಪಡಿಸಿಲ್ಲ. ಅಧಿಕಾರಿಗಳು ತಾಲೂಕು ಕೇಂದ್ರಗಳಲ್ಲೇ ವಾಸವಿರಬೇಕು. ಸಮಸ್ಯೆ ಎದುರಾದ ಕೂಡಲೇ ಪರಿಹಾರಕ್ಕೆ ಕ್ರಮ ವಹಿಸಬೇಕು. ಸಮಸ್ಯೆ ಕ್ಲಿಷ್ಟವಾಗಿದ್ದರೆ ಸಿಇಒ- ಇಒಗಳಿಂದ ಮಾರ್ಗದರ್ಶನ ಪಡೆಯಿರಿ. ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸುವ ವೇಳೆ ನಿಯಮಾವಳಿಗಳನ್ನು ಅನುಸರಿಸುವಂತೆ ಸಲಹೆ ನೀಡಿದರು.
ಟಾಸ್ಕ್‌ಫೋರ್ಸ್ ಸಭೆಗಳಲ್ಲಿ ತೀರ್ಮಾನವಾದಂತೆ ಕುಡಿಯುವ ನೀರಿನ ಬಾಕಿ ಹಣವನ್ನು ಸಕಾಲದಲ್ಲಿ ಪಾವತಿಸಬೇಕು. ಯಾವುದೇ ಬಾಕಿ ಉಳಿಸಬಾರದು, ಸರ್ಕಾರ ನೀಡುವ ಹಣವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡದೆ ಬಾಕಿ ಉಳಿಸಿಕೊಳ್ಳುವುದೇಕೆ? ಮುಂದೆ ಬಾಕಿ ಉಳಿಸಿಕೊಂಡಲ್ಲಿ ಸಂಬಂಧಪಟ್ಟ ತಹಸೀಲ್ದಾರ್, ತಾಪಂ ಇಒಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನೇರವಾಗಿ ಹೇಳಿದರು.೬೭ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ:
ಮೊದಲಿಗೆ ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಮಾತನಾಡಿ, ತಾಲೂಕಿನ ೬೭ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ರಾಯಸಮುದ್ರ ಗ್ರಾಮವೊಂದರಲ್ಲೇ ೩ ರಿಂದ ೪ ಸಾವಿರ ಜನರಿದ್ದಾರೆ. ಟ್ಯಾಂಕರ್ ಮೂಲಕ ನೀರು ಪೂರೈಸುವುದು ಕಷ್ಟಕರ. ಅದಕ್ಕಾಗಿ ಹೊಸದಾಗಿ ಬೋರ್‌ವೆಲ್‌ಗಳನ್ನು ನಿರ್ಮಿಸುವ ಅಗತ್ಯವಿದೆ. ಅಧಿಕಾರಿಗಳನ್ನು ಕೊಳವೆ ಬಾವಿ ನಿರ್ಮಿಸಿ ಎಂದರೆ ಹಣವಿಲ್ಲ ಎನ್ನುತ್ತಾರೆ. ಕೊನೆಗೆ ಶಾಸಕರ ಅನುದಾನದಲ್ಲಿ ಎರಡು ಬೋರ್‌ವೆಲ್ ಕೊರೆಸಿದೆ. ಒಂದರಲ್ಲಿ ನೀರು ಬಂದಿದೆ, ಮತ್ತೊಂದರಲ್ಲಿ ಬಂದಿಲ್ಲ ಎಂದು ಸಭೆಗೆ ವಿವರಿಸಿದರು.
ಬೋರ್‌ವೆಲ್‌ಗಳು ಎಲ್ಲಿ ಕಾರ್ಯಾಚರಣೆಯಲ್ಲಿಲ್ಲವೋ ಅಲ್ಲಿಂದ ಟ್ರಾನ್ಸ್‌ಫಾರ್ಮರ್‌ಗಳನ್ನು ತೆಗೆದು ಕಾರ್ಯಾಚರಣೆಯಲ್ಲಿರುವ ಕಡೆಗಳಲ್ಲಿ ಅಳವಡಿಸಬೇಕು. ೧೫ ರಿಂದ ೨೦ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಿದ್ದು ಹೇಮಾವತಿ ಜಲಾಶಯದಿಂದ ೨ ಟಿಎಂಸಿ ನೀರು ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಸದೃಢ ವ್ಯವಸ್ಥೆ ಜಾರಿಯಾಗಲಿ:ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ೨ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು ಬೋರ್‌ವೆಲ್‌ಗಳಿಂದ ನೀರು ಕೊಡಲಾಗುತ್ತಿದೆ. ನಾಲೆಗಳಲ್ಲಿ ಹರಿಯುತ್ತಿರುವ ನೀರನ್ನು ಒಂದು ವಾರ ಸತತವಾಗಿ ಹರಿಸಬೇಕು. ಜಲಜೀವನ್ ಯೋಜನೆ ಅಂತಿಮ ಹಂತದಲ್ಲಿದ್ದು ಜಲಧಾರೆ ಕೆಲಸ ನಡೆಯುತ್ತಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಈ ವರ್ಷಕ್ಕೆ ಸೀಮಿತವಾಗಿ ಜವಾಬ್ದಾರಿ ನಿರ್ವಹಿಸಿದರೆ ಸಾಲದು, ಹೆಚ್ಚು ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಕುಡಿಯುವ ನೀರಿನ ವ್ಯವಸ್ಥೆ, ಯೋಜನೆಗಳನ್ನು ಸದೃಢಗೊಳಿಸಬೇಕು. ಜಿಲ್ಲಾದ್ಯಂತ ಕುಡಿಯುವ ನೀರು ಪೂರೈಕೆಗೆ ಸದೃಢವಾದ ವ್ಯವಸ್ಥೆ ಜಾರಿಯಾಗದೆ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರು.
ವರ್ಷದಿಂದ ಕೆಲಸ ಸ್ಥಗಿತಮಂಡ್ಯ ಶಾಸಕ ಪಿ.ರವಿಕುಮಾರ್ ಮಾತನಾಡಿ, ತಾಲೂಕಿನ ಬೇಬಿ, ಹುನುಗನಹಳ್ಳಿ, ಚಾಕನಹಳ್ಳಿ ಸೇರಿದಂತೆ ೧೬ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಆತಂಕವಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಜಲಜೀವನ್ ಯೋಜನೆ ಸಮರ್ಪಕವಾಗಿ ಅನುಷ್ಠಾಗೊಳ್ಳುತ್ತಿಲ್ಲ. ಒಂದು ವರ್ಷದಿಂದ ಕೇಂದ್ರದಿಂದ ಹಣ ಬಂದಿಲ್ಲವೆಂದು ಹೇಳುತ್ತಲೇ ಇದ್ದಾರೆ. ಕೆಲಸ ಸ್ಥಗಿತಗೊಂಡಿರುವುದಾಗಿ ಸಭೆಗೆ ತಿಳಿಸಿದರು.
₹೬೭ ಲಕ್ಷ ಕುಡಿವ ನೀರಿನ ಬಾಕಿ:ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಮೇಲುಕೋಟೆಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಚಿನಕುರಳಿ, ಬನ್ನಂಗಾಡಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ನೀರಿಗೆ ಸಮಸ್ಯೆ ಇದೆ. ಆರ್‌ಡಿಡಬ್ಲ್ಯುಎಸ್, ಪಂಚಾಯಿತಿ ಅಧಿಕಾರಿಗಳಿಗೆ ಸರಿಯಾದ ಹೊಂದಾಣಿಕೆ ಇಲ್ಲ. ನಾವು ಹೋದಾಗ ನೀರಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ, ಅಧಿಕಾರಿಗಳು ಮಾತ್ರ ಎಲ್ಲ ಸರಿಯಾಗಿದೆ ಎನ್ನುತ್ತಾರೆ. ಕಳೆದ ವರ್ಷ ಟಾಸ್ಕ್‌ಫೋರ್ಸ್‌ನಲ್ಲಿ ತೀರ್ಮಾನವಾದಂತೆ ಕುಡಿಯುವ ನೀರಿನ ₹೬೭ ಲಕ್ಷ ಇದುವರೆಗೂ ಬಾಕಿ ಇದೆ ಎಂದು ದೂರಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಇದ್ದರು.------
ಶೇ.೮೫ರಷ್ಟು ಕೊಳವೆ ಬಾವಿಗಳ ಮೇಲೆ ಅವಲಂಬನೆ: ಕೆ.ಆರ್.ನಂದಿನಿಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಒಟ್ಟು ಗ್ರಾಪಂಗಳ ಪೈಕಿ ಶೇ.೮೫ರಷ್ಟು ಗ್ರಾಮ ಪಂಚಾಯಿತಿಗಳು ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳ ಮೇಲೆ ಅವಲಂಬಿತವಾಗಿವೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಮಾಹಿತಿ ನೀಡಿದರು.289 ಗ್ರಾಮಗಳ ಪೈಕಿ ೨೫೬ ಗ್ರಾಮಗಳಿಗೆ ಕೊಳವೆ ಬಾವಿಗಳ ಮೂಲಕವೇ ನೀರು ಪೂರೈಸಲಾಗುತ್ತಿದೆ. ಖಾಸಗಿ ಕೊಳವೆ ಬಾವಿ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ೧೧ ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ೩೩ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವುದಕ್ಕೆ ಚಿಂತನೆ ನಡೆಸಲಾಗಿದೆ. ೨ ಗ್ರಾಮಗಳಿಗೆ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದಾಗಿ ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ನಡೆಸುತ್ತಿರುವ ಎಲ್‌ಆ್ಯಂಡ್‌ಟಿ ಕಂಪನಿಯವರು ಆಡಳಿತಾತ್ಮಕ ಸಮಸ್ಯೆ, ಮಾನವ ಸಂಪನ್ಮೂಲ ಕೊರತೆಯನ್ನು ಮುಂದಿಟ್ಟು ಕಾಮಗಾರಿಯನ್ನು ನಿಧಾನ ಮಾಡುತ್ತಿದ್ದಾರೆ. ಇನ್ನೂ ನೀರು ಸಂಸ್ಕರಣಾ ಘಟಕ ನಿರ್ಮಿಸಿಲ್ಲ, ಡಿಸೆಂಬರ್ ಅಂತ್ಯಕ್ಕೆ ಅದನ್ನು ಮುಗಿಸಬೇಕು. ೩೦೦ ಸಮಸ್ಯಾತ್ಮಕ ಗ್ರಾಮಗಳಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಬೇಕಿದೆ. ಇದರಲ್ಲಿ ಕನಿಷ್ಠ ೧೦೦ ಟ್ಯಾಂಕ್‌ಗಳನ್ನು ನಿರ್ಮಿಸಿ ಸಂಪರ್ಕ ಕಲ್ಪಿಸಿದರೆ ಕುಡಿಯುವ ನೀರಿನ ಸಮಸ್ಯೆಗೆ ಸಾಧ್ಯವಾದಷ್ಟು ಮಟ್ಟಿಗೆ ಪರಿಹಾರ ದೊರಕಲಿದೆ ಎಂದು ಹೇಳಿದರು.ಇದರ ಜೊತೆಗೆ ವಿದ್ಯುತ್ ಇಲಾಖೆಯವರು ನೀರನ್ನು ಪಂಪ್ ಮಾಡುವ ಅವಧಿಯಲ್ಲಿ ವಿದ್ಯುತ್ ಕಡಿತಗೊಳ್ಳದಂತೆ ನೋಡಿಕೊಳ್ಳಬೇಕು. ಕೊಳವೆ ಬಾವಿಗಳಿಗೆ ತುರ್ತಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಹಾಗೂ ನೀರು ಬತ್ತಿಹೋಗಿರುವ ಕೊಳವೆಬಾವಿಗಳ ಜಾಗದಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಕೊಳವೆ ಬಾವಿಗಳು ಕಾರ್ಯಾಚರಣೆಯಲ್ಲಿರುವ ಕಡೆಗಳಿಗೆ ಸ್ಥಳಾಂತರಿಸುವಂತೆ ಚೆಸ್ಕಾಂ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡರನ್ನು ಕೋರಿದರು.
-----ಕೆಲಸವೇ ಆಗದೆ ₹೬.೩೯ ಕೋಟಿ ಬಿಲ್ ಪಾಸ್: ರಮೇಶ್ ಬಂಡಿಸಿದ್ದೇಗೌಡ
ಶ್ರೀರಂಗಪಟ್ಟಣ ಹಾಗೂ ಮಂಡ್ಯ ವ್ಯಾಪ್ತಿಯ ೧೧ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳ್ಳದಿದ್ದರೂ ಅದಕ್ಕೆ ನಿಗದಿಪಡಿಸಿದ್ದ ₹೬.೩೯ ಕೋಟಿ ಬಿಲ್ ಪಾಸ್ ಆಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸಚಿವರಲ್ಲಿ ಮನವಿ ಮಾಡಿದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುವ ಸಮಯದಲ್ಲೇ ಈ ಯೋಜನೆ ಜಾರಿಯಾಗಬೇಕಿತ್ತು. ಆದರೆ, ಕೆಲಸವಾಗಿರುವುದಕ್ಕೆ ದಾಖಲೆಗಳಿವೆಯೇ ವಿನಃ ಎಲ್ಲೂ ಕೆಲಸ ಮಾತ್ರ ಆಗಿಲ್ಲ. ಬಿಲ್ ಪಾಸ್ ಆಗಿ ೩ ವರ್ಷಗಳಾಗಿದೆ. ಈಗ ಯೋಜನೆಯ ಕಾಮಗಾರಿ ಮಾಡಲಾಗುವುದಿಲ್ಲ ಎಂದು ಕೆಯುಡಬ್ಲ್ಯುಎಸ್ ಅಧಿಕಾರಿಗಳು ಹೇಳುತ್ತಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ ಎಂದು ಪ್ರಶ್ನಿಸಿದರು.ತಾಲೂಕಿನ ಬಸ್ತಿಪುರ, ಹುಲಿಕೆರೆಯಲ್ಲಿ ನೀರಿಲ್ಲ. ಕೆಆರ್‌ಎಸ್‌ನಲ್ಲಿ ನೀರಿದ್ದರೂ ಕೆಆರ್‌ಎಸ್ ಗ್ರಾಮದಲ್ಲಿ ನೀರಿಲ್ಲ. ಖಾಸಗಿ ಕೊಳವೆ ಬಾವಿಯವರಿಗೆ ಹಣ ಕೊಟ್ಟಿಲ್ಲ ಎಂದು ಸಭೆಗೆ ವಿವರಣೆ ನೀಡಿದರು.
---ವೈದ್ಯರ ಬಂಧನ ಕ್ರಮ ಸರಿಯಲ್ಲ: ಎಚ್.ಟಿ.ಮಂಜು
ಅಪ್ರಾಪ್ತ ಗರ್ಭಿಣಿಯರ ಸ್ಕ್ಯಾನಿಂಗ್ ಮಾಡಿದರೆಂಬ ಒಂದು ಸಣ್ಣ ನಿರ್ಲಕ್ಷ್ಯವನ್ನು ಮುಂದಿಟ್ಟುಕೊಂಡು ವೈದ್ಯರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸುವ ಕ್ರಮ ಸರಿಯಲ್ಲ ಎಂದು ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ವೈದ್ಯರ ಪರ ಬ್ಯಾಟ್ ಬೀಸಿದರು.ಬಂಧನಕ್ಕೆ ಹೆದರಿ ಎಷ್ಟೋ ವೈದ್ಯರು ವಿಆರ್‌ಎಸ್ ಪಡೆಯುವುದಕ್ಕೆ ಮುಂದೆ ಬಂದಿದ್ದಾರೆ. ವೈದ್ಯರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಗರ್ಭಿಣಿಯರನ್ನು ಸ್ಕ್ಯಾನಿಂಗ್‌ಗೆ ಶಿಫಾರಸು ಮಾಡಬೇಕೆಂದರೆ ಮಂಡ್ಯ ಅಥವಾ ಮೈಸೂರಿಗೆ ಮಾಡಬೇಕು. ಎರಡೂ ದೂರದಲ್ಲಿರುವ ಕಾರಣ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ಶಿಫಾರಸು ಮಾಡಿದ್ದೇ ತಪ್ಪು ಎಂಬುದನ್ನು ಬಿಂಬಿಸುವುದು ಸರಿಯಲ್ಲ ಎಂದರು.
ಇದಕ್ಕೆ ಉತ್ತರಿಸಿದ ಸಚಿವ ಎನ್.ಚಲುವರಾಯಸ್ವಾಮಿ, ವೈದ್ಯರ ಬಂಧನದಿಂದ ಹಲವು ವೈದ್ಯರು ಭಯಗೊಂಡಿರುವುದು ನನ್ನ ಗಮನಕ್ಕೂ ಬಂದಿದೆ. ಲೋಕಾಯುಕ್ತ ಸ್ವತಂತ್ರ ಸಂಸ್ಥೆ, ಸಾರ್ವಜನಿಕರ ಹಿತದೃಷ್ಟಿಯಿಂದ ಆಗಾಗ ದಾಳಿಗಳನ್ನು ಮಾಡುತ್ತಿರುತ್ತದೆ. ನಾವು ಲೋಕಾಯುಕ್ತ ಸಂಸ್ಥೆಗೆ ಈ ವಿಷಯವಾಗಿ ನೇರವಾಗಿ ಪತ್ರ ಬರೆಯಲಾಗುವುದಿಲ್ಲ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೂಲಕ ಸಂಸ್ಥೆಯವರಿಗೆ ಪತ್ರ ಬರೆದು ಆಗುತ್ತಿರುವ ಸಮಸ್ಯೆ ಬಗ್ಗೆ ತಿಳಿಸಿಕೊಡುವುದಾಗಿ ಭರವಸೆ ನೀಡಿದರು.