ಕನಕಪುರ: ಭಗವಾನ್ ಬುದ್ಧರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಾಗ ಶಾಂತಿ ನೆಲೆಸಲು ಸಾಧ್ಯ. 2500 ವರ್ಷಗಳ ಹಿಂದಿನ ಗೌತಮ ಬುದ್ಧರ ಜೀವನ ಶೈಲಿ ಹಾಗೂ ಅಹಿಂಸಾ ಮಾರ್ಗ ಇಂದಿನ ಜಗತ್ತಿಗೆ ಮಹತ್ವದ ಸಂದೇಶವಾಗಿದೆ ಎಂದು ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು.
ನಗರದ ಚನ್ನಬಸಪ್ಪ ವೃತ್ತದಲ್ಲಿ ದಮ್ಮದೀವೀಗೆ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಭಗವಾನ್ ಗೌತಮ ಬುದ್ಧರ ಜಯಂತಿ ಆಚರಣೆಯಲ್ಲಿ ಭಗವಾನ್ ಬುದ್ಧರ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಗೌತಮ ಬುದ್ಧರು ಇಡೀ ಜಗತ್ತಿಗೆ ಶಾಂತಿ, ಕರುಣೆ ಹಾಗೂ ಸಹಬಾಳ್ವೆ ಸಂದೇಶ ಸಾರಿ ಜಗತ್ತಿಗೆ ಬೆಳಕಾದ ಮಹಾ ಸಂತರು. ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿದ್ದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಬುದ್ಧರ ಚಿಂತನೆ ಅಗತ್ಯ. ಗೌತಮ ಬುದ್ಧನ ಬೋಧನೆಗಳು ಅಹಿಂಸೆ, ಕರುಣೆ, ಸಮಾನತೆ ಮತ್ತು ಪ್ರೀತಿಯ ತಳಹದಿಯ ಮೇಲೆ ನಿಂತಿದೆ. ಜೀವನದ ದುಃಖಗಳನ್ನು ಹೋಗಲಾಡಿಸಿ ನಿರ್ವಾಣ(ಶಾಂತಿ) ಪಡೆಯಲು ಮಾರ್ಗದರ್ಶನ ನೀಡುತ್ತವೆ. ಬುದ್ಧನ ಬೋಧನೆಗಳು ಮನುಷ್ಯನ ಮನಸ್ಸನ್ನು ಶುದ್ಧೀಕರಿಸಲು ಮತ್ತು ಪಾಪಕರ್ಮಗಳಿಂದ ಮುಕ್ತರಾಗಲು ಸಹಾಯವಾಗುತ್ತವೆ ಎಂದರು.ದಮ್ಮದೀವೀಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಬುದ್ಧನ ತತ್ವಾದರ್ಶಗಳ ಜೊತೆಗೆ ಅವರು ಅನುಸರಿಸಿದ ಅಹಿಂಸಾ ಮಾರ್ಗ ಇಡೀ ವಿಶ್ವಕ್ಕೆ ಶಾಂತಿ, ಸಹನೆ, ಸಹಬಾಳ್ವೆ ಹಾಗೂ ಸಹೋದರತೆ ಬಿತ್ತಿದರು ಎಂದು ಹೇಳಿದರು. ನೂರಾರು ಬುದ್ಧ ಅನುಯಾಯಿಗಳು ಮೇಣದ ಬತ್ತಿ ಹಿಡಿದು ಎಂ.ಜಿ.ರಸ್ತೆಯಲ್ಲಿ ಮೆರವಣಿಗೆ ನಡೆಸಿ ಬುದ್ಧನ ಮೂರ್ತಿಗೆ ಗೌರವ ಸಲ್ಲಿಸಿದರು. ಸಮಾರಂಭದಲ್ಲಿ ಡಾ.ಪದ್ಮಾವತಿ, ಶ್ರೀಕಂಠ ಡಾ.ಕೃಷ್ಣಯ್ಯ, ಶಿವರಾಮ್ ಅವರನ್ನು ಸನ್ಮಾನಿಸಲಾಯಿತು, ಮುಖ್ಯ ಅತಿಥಿಗಳಾಗಿ ಡಾ. ಎಂ.ಸಿ.ಬೊಮ್ಮಯ್ಯ, ಡಾ.ತೇಜೋವತಿ, ಮುಖಂಡರಾದ ಕೋಟೆ ಕುಮಾರ್, ಎಸ್ ಎಸ್ ಡಿ ಸಂಘಟನೆ ಜಿ.ಗೋವಿಂದಯ್ಯ, ಶಿವಮಾದಯ್ಯ, ಅಪ್ಪಾಜಿ ಸೇರಿದಂತೆ ಟ್ರಸ್ಟ್ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 01(1) :ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ ದಮ್ಮದೀವೀಗೆ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಭಗವಾನ್ ಗೌತಮ ಬುದ್ಧರ ಜಯಂತಿ ಪ್ರಯುಕ್ತ ಪಂಜಿನ ಮೆರವಣಿಗೆ ನಡೆಸಲಾಯಿತು.