ತುರುವೇಕೆರೆ: ದೇವಾಲಯ ಪ್ರವೇಶ ಮಾಡಿದ ದಲಿತ ಕುಟುಂಬವನ್ನು ಅವಮಾನಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಜೈಲು ಪಾಲಾಗಿರುವ ಘಟನೆ ತಾಲೂಕಿನ ಮಲ್ಲೂರು ಗ್ರಾಮದಲ್ಲಿ ನಡೆದಿದೆ.
ಏ. 18ರಂದು ತುಯಲಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಟಿ.ರಂಗರಾಮು ಎಂಬುವವರು ತಮ್ಮ ಕುಟುಂಬ ಸಹಿತ ಮಲ್ಲೂರಿನ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ಪೂಜೆ ಮಾಡಿಸುವ ಸಲುವಾಗಿ ತೆರಳಿದ್ದರು. ಈ ವೇಳೆ ಅವರೆಲ್ಲರೂ ದೇವಾಲಯದೊಳಗೆ ಪ್ರವೇಶಿಸಿ ಪೂಜೆಯನ್ನೂ ಸಹ ಮಾಡಿಸಿದ್ದಾರೆ. ಅಲ್ಲಿಯ ಪೂಜಾರಿ ಇವರಿಗೆ ಸಹಕಾರವನ್ನೂ ಸಹ ನೀಡಿದ್ದಾರೆ. ಆದರೆ ದೇವಾಲಯದ ಜಗುಲಿಯ ಮೇಲೆ ಕುಳಿತಿದ್ದ ಅದೇ ಗ್ರಾಮದ ಮೇಲ್ಜಾತಿಗೆ ಸೇರಿದ ರಾಜಣ್ಣ (65) ಎಂಬ ವ್ಯಕ್ತಿ ದೇವಾಲಯದೊಳಗೆ ಪ್ರವೇಶ ಮಾಡಿದ ಸಂಗತಿಯನ್ನು ಖಂಡಿಸಿದ್ದಾರೆ.ನಮ್ಮ ಗ್ರಾಮದಲ್ಲಿ ಯಾವ ದಲಿತರೂ ದೇವಾಲಯ ಪ್ರವೇಶಿಸಲ್ಲ. ನೀವೇಕೆ ಪ್ರವೇಶಿಸಿದ್ದೀರಿ ಎಂದು ಆಕ್ಷೇಪ ಮಾಡಿದ್ದಾರೆ. ಇದು ಮುಜರಾಯಿ ದೇವಾಲಯ. ಇಲ್ಲಿ ಯಾವುದೇ ಭೇಧಭಾವ ಮಾಡಬಾರದು ಎಂದು ಹೇಳಿದರೂ ಸಹ ರಾಜಣ್ಣ ಮತ್ತೂ ಕೆಟ್ಟದಾಗಿ ಮಾತನಾಡಿ ದೇವಾಲಯ ಪ್ರವೇಶ ಮಾಡಿದ್ದಕ್ಕೆ ತಪ್ಪಾಯಿತೆಂದು ಕ್ಷಮೆಯಾಚಿಸಿ ದೇವರಿಗೆ ನಮಸ್ಕರಿಸಿ ಹೋಗಿ ಎಂದು ಹೇಳಿದ್ದಾರೆ. ಈ ಸಂಗತಿ ನಡೆದು 15 ದಿನಗಳಾಗಿದ್ದರೂ ಸಹ ಅವಮಾನಿತರು ಪೊಲೀಸರಿಗೆ ದೂರು ನೀಡುವ ಪ್ರಯತ್ನ ಮಾಡಿರಲಿಲ್ಲ. ಅಂತಿಮವಾಗಿ ಕೆಆರ್‌ಎಸ್ ಪಕ್ಷದ ಎಸ್‌ಸಿ, ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಚನ್ನಪ್ಪನವರಿಗೆ ಈ ಘಟನೆಯ ವಿಡಿಯೋ ತಲುಪಿದ ಕೂಡಲೇ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಕೃತ್ಯದ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರು. ಎಚ್ಚೆತ್ತ ಆಡಳಿತ ಕೂಡಲೇ ಜಾಗೃತರಾಗಿ ಆಪಾದಿತ ರಾಜಣ್ಣನನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. 2 ಟಿವಿಕೆ 5 – ದಲಿತರ ದೇವಾಲಯ ಪ್ರವೇಶ ವಿರೋಧಿಸಿ ಜೈಲು ಪಾಲಾದ ರಾಜಣ್ಣ.