ಸಾರಾಂಶ
ಚಳ್ಳಕೆರೆ ತಾಲ್ಲೂಕಿನ ವರವಿನೋರಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮದ ಮಹಿಳೆಯರು ಪ್ರತಿದಿನ ಮಿನಿಟ್ಯಾಂಕ್‌ನ ಮುಂದೆ ಖಾಲಿಕೊಡ ಹಿಡಿದು ಕಾಯುವ ಪರಿಸ್ಥಿತಿ ಎದುರಾಗಿದೆ.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರವಿನೋರಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ನಿರಂತರವಾಗಿದ್ದು, ನೀರಿನ ಅಭಾವದಿಂದ ಈ ಭಾಗದ ಜನರು ರೋಸಿದ್ದಾರೆ. ಗ್ರಾಮದಲ್ಲಿರುವ ಮಿನಿಟ್ಯಾಂಕ್‌ನ ಮುಂದೆ ಪ್ರತಿನಿತ್ಯ ಗ್ರಾಮದ ಮಹಿಳೆಯರು ಸರತಿ ಸಾಲಿನಲ್ಲಿಟ್ಟು ನೀರಿಗಾಗಿ ಕಾಯುವ ಸ್ಥಿತಿ ಉಂಟಾಗಿದೆ.ಗ್ರಾಮದ ಮಹಿಳೆರಾದ ಚಂದ್ರಮ್ಮ, ಸುಜಾತ, ಬೈಯಮ್ಮ, ದಡ್ಡಮ್ಮ, ಪಾಲಕ್ಕ, ಶಾರದಮ್ಮ ಮುಂತಾದವರು ಮಾತನಾಡಿ, ಕುಡಿಯುವ ನೀರಿನ ತೊಂದರೆಯ ಬಗ್ಗೆ ಈಗಾಗಲೇ ಹಲವು ಬಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಮಾಡಲಾ ಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಶಾಸಕರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಣೆ ಮಾಡುವಂತೆ ಹಲವಾರು ಬಾರಿ ಅಧಿಕಾರಿಗಳಿಗೆ ಗೋಗರೆದರೂ ಯಾರೂ ಸಹ ಈ ಬಗ್ಗೆ ಗಮನಹರಿಸುತ್ತಿಲ್ಲ. ಪ್ರತಿನಿತ್ಯ ನೀರಿಗಾಗಿ ಮಹಿಳೆಯರು ಕಾಯುವ ಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಉಜ್ಜಿನಯ್ಯ ಮಾತನಾಡಿ, ಇಲ್ಲಿನ ನೀರಿನ ಸಮಸ್ಯೆಯ ಬಗ್ಗೆ ಪಿಡಿಒಯವರಿಗೆ ಈಗಾಗಲೇ ಹಲವಾರು ಬಾರಿ ಮಾಹಿತಿ ನೀಡಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿನಿತ್ಯ ಮಹಿಳೆಯರು ನೀರಿಗಾಗಿ ಪರಿತಪಿಸುವ ಸ್ಥಿತಿಯನ್ನು ನೋಡಲು ಸಾಧ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿ ಗಳು ಕೂಡಲೇ ಗ್ರಾಮಕ್ಕೆ ಆಗಮಿಸಿ ನೀರಿನ ಸಮಸ್ಯೆ ನಿವಾರಿಸುವಂತೆ ಮನವಿ ಮಾಡಿದರು. ದೊರೆ ನಾಗರಾಜು, ಸಣ್ಣಬೋರಯ್ಯ, ಅಪ್ಪಣ್ಣ, ದೊಡ್ಡ ಬೋರಯ್ಯ ಮುಂತಾದವರು ಉಪಸ್ಥಿತರಿದ್ದರು.;Resize=(128,128))
;Resize=(128,128))