2027 ರೊಳಗೆ ಎತ್ತಿನಹೊಳೆ, ಎಚ್.ಎನ್‌. ವ್ಯಾಲಿ ಕಾಮಗಾರಿ ಪೂರ್ಣ । ರೈತರ ಕಣ್ಣೀರು ಒರೆಸುವ ಸರ್ಕಾರ ನಮದು: ಸಿಎಂ ಡಿ.ಕೆ.ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಮಾಲೂರು

ಯಶಸ್ವಿಯಾಗಿ ಐದು ಗ್ಯಾರಂಟಿಯನ್ನು ಅನುಷ್ಠಾನಗೊಳಿಸಿರುವ ನಮ್ಮ ಸರ್ಕಾರ, ಎ ಖಾತೆ ನೀಡುವುದು ಆರನೇ ಗ್ಯಾರಂಟಿಯಾಗಿದ್ದು, ಈಗ ನೀರು ನಮ್ಮ ಏಳನೇ ಗ್ಯಾರಂಟಿ ಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಅವರು ಮಾಲೂರಿನ ಚೊಕ್ಕಂಡಹಳ್ಳಿ ಸಮೀಪ ಜಿಲ್ಲಾಡಳಿತ ಆಯೋಜಿಸಲಾಗಿದ್ದ 3200 ಕೋಟಿ ರು.ಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ನಾವು ಆಡಳಿತಕ್ಕೆ ಬಂದ ಮೇಲೆ ನೀಡಿದ ಐದು ಗ್ಯಾರಂಟಿ ಯೋಜನೆಯು ಜನತೆಯ ಬದುಕನ್ನೇ ಬದಲಾಯಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಗರು ನಮ್ಮ ಗ್ಯಾರಂಟಿ ಬಗ್ಗೆ ಟೀಕಿಸಿ ಇದು ಅನುಷ್ಠಾನಗೊಳಿಸಿ ಮುಂದುವರೆಸುವುದು ಅಸಾಧ್ಯ ಎಂದಿದ್ದರು. ಆದರೆ ಅವರೇ ಚುನಾವಣೆಗಳಲ್ಲಿ ಗ್ಯಾರಂಟಿ ಯೋಜನೆ ಕಾಪಿ ಮಾಡಿದ್ದರು ಎಂದರು.

ನಮ್ಮ ಕೃಷ್ಣೇ ಬೈರೇಗೌಡ ಅವರ ಅಭಿಲಾಷೆಯಂತೆ ದಶಕಗಳಿಂದ ನಿವೇಶನ ಮಾಲೀಕರು ತೊಂದರೆ ಅನುಭವಿಸುತ್ತಿದ್ದ ಬಿ ಖಾತಾ, ಎ ಖಾತ ಕ್ಕೆ ಬದಲಾಯಿಸಿ ಕೊಡುವ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಅದು ಆರನೇ ಗ್ಯಾರಂಟಿ ಎಂದ ಮುಖ್ಯಮಂತ್ರಿಗಳು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ ಕಾಡದಂತೆ ಮಾಡುವ ನಮ್ಮ ಜಲ ಯೋಜನೆ ಏಳನೆ ಗ್ಯಾರಂಟಿ ಎಂದರು. ಎತ್ತಿನಹೊಳೆ, ಎಚ್.ಎನ್‌. ವ್ಯಾಲಿ ಯೋಜನೆಗಳಿಗೆ ಹೆಚ್ಚಿನ ವೇಗ ನೀಡಿ 2027 ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದರು.


ಕೊರೊನಾ ವೇಳೆಯಲ್ಲಿ ರಾಜ್ಯಕ್ಕೆ ತರಕಾರಿ ಕಳುಹಿಸಿದ ಕೋಲಾರ ಜಿಲ್ಲೆಯು 2 ಸಾವಿರ ಅಡಿ ಕೆಳಗೆ ಕೊಳವೆ ಬಾವಿ ಕೊರೆದರೂ ನೀರು ಇಲ್ಲದಿದ್ದಾಗೂ ಕೋಲಾರ ಜಿಲ್ಲೆಯ ಒಬ್ಬ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರ ಸ್ವಾಭಿಮಾನ ಬದುಕು ಇತರ ಜಿಲ್ಲೆಯ ರೈತರಿಗೆ ಮಾದರಿ ಎಂದ ಮುಖ್ಯಮಂತ್ರಿಗಳು ನೀರಿನ ಸಮಸ್ಯೆ ಪರಿಹಾರ ಮಾಡೇ ಮಾಡುವುದಾಗಿ ತಿಳಿಸಿದರು. ಅಧಿಕಾರ ಶಕ್ತಿಯ ಸಂಕೇತ ಅಲ್ಲ. ಅದು ಜವಾಬ್ದಾರಿ ಎಂದರು.

ರೈತರ ಕಣ್ಣೀರು ಒರೆಸುವ ಸರ್ಕಾರ ನಮದು. ಸದಾ ಜನರ ಪರವಾಗಿ ಸರ್ಕಾರ ಇದೆ ಎಂದ ಡಿ.ಕೆ.ಶಿವಕುಮಾರ್‌ ಅವರು ರಾಜ್ಯದಲ್ಲಿ ನೆಡಯುತ್ತಿರುವ ಎಸ್‌ಐಆರ್‌ ಬಗ್ಗೆ ಎಚ್ಚರವಾಗಿ ಇರಲು ಹೇಳಿದರು. ಬಿಜೆಪಿಗರು ರಾಮನ ಹುಂಡಿ ಕಳ್ಳತನ ಮಾಡಿದಂತೆ ರಾಜ್ಯದಲ್ಲಿ ಆಗಲು ಬಿಡುವುದಿಲ್ಲ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿರುವ ಹುಂಡಿ ಜಾಗವನ್ನು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಇರಲಿದೆ ಎಂದರು.

ಕಾರ್ಯಕ್ರಮಕ್ಕೆ 3 ಗಂಟೆ ನಿಧಾನವಾದ ಬಗ್ಗೆ ಜನರಲ್ಲಿ ಕ್ಷಮೆ ಕೇಳಿದ ಮುಖ್ಯಮಂತ್ರಿಗಳು ದೆಹಲಿಯಲ್ಲಿ ನಮ್ಮ ನಾಯಕರುಗಳನ್ನು ಭೇಟಿ ಮಾಡಿ ಬೆಳಗ್ಗಿನ ಜಾವ 3 ಗಂಟೆಗೆ ಮಲಗಿ ಆರು ಗಂಟೆಗೆ ಎದ್ದ ಕಾರಣ ಬರಲು ತಡವಾಯಿತು. ರಾಜ್ಯದ ದೇವ ಮೂಲೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಮೂರು ಗಂಟೆ ತಡವಾದರೂ ಸೇರಿರುವ ಜನಸ್ತೋಮ ನೋಡಿದರೆ ಇಲ್ಲಿನ ಶಾಸಕ ನಂಜೇಗೌಡ ಅವರ ಜನಪ್ರಿಯತೆ ಅರ್ಥವಾಗುತ್ತದೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಇರುವ ಬದ್ದತೆ ಅವರನ್ನು ಜನ ಮೆಚ್ಚದ ನಾಯಕನಾಗಿ ಮಾಡಿದೆ. ಅವರ ಕಾರ್ಯವೈಖರಿ ಕಂಡರೆ ಅವರನ್ನು ರಾಜ್ಯದ ಮಾದರಿ ಶಾಸಕ ಎನ್ನಬಹುದಾಗಿದೆ ಎಂದರು.

ಸಚಿವರಾದ ಈಶ್ವರ ಖಂಡ್ರೆ, ಸತೀಶ್‌ ಜಾರಕಿ ಹೊಳೆ, ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ 28419 ಮಂದಿ ಪಲಾನುಭವಿಗಳಿಗೆ ವಿವಿಧ ಸವಲತ್ತು ಸೌಲಭ್ಯ ಗಳನ್ನು ಸಂಕೇತಿಕವಾಗಿ ವಿತರಿಸಲಾಯಿತು.

ಸಚಿವರಾದ ರಾಮಲಿಂಗರೆಡ್ಡಿ, ಕೆ.ಎಚ್‌.ಮುನಿಯಪ್ಪ, ಯತಿಂದ್ರ ಸಿದ್ದರಾಮಯ್ಯ, ಯು.ಟಿ.ಖಾದರ್‌, ಮಾಜಿ ಸಚಿವ ಎಂ.ಸಿ.ಸುಧಾಕರ್‌, ವೆಂಕಟಶಿವಾ ರೆಡ್ಡಿ, ಸಂಮೃದ್ಧಿ ಮಂಜುನಾಥ್‌, ಕೊತ್ತೂರು ಮಂಜುನಾಥ್‌, ಎಸ್.ಎನ್. ನಾರಾಯಣಸ್ವಾಮಿ, ರೂಪ ಶಶಿಧರ್‌ ಸೇರಿದಂತೆ ಕೋಲಾರ ಚಿಕ್ಕಬಳ್ಳಾಪುರದ ಶಾಸಕರು,ಮುಖಂಡರುಗಳು ಇದ್ದರು.