ಸಾರಾಂಶ
ಶಿವಮೂರ್ತಿ ಇಟಗಿ
ಯಲಬುರ್ಗಾ: ಕೆರೆ ತುಂಬಿಸಿದ ಮಾತ್ರಕ್ಕೆ ನೀರಾವರಿ ಮಾಡಲು ಬರುವುದಿಲ್ಲ. ಅದಕ್ಕೆ ಸಾಕಷ್ಟು ಕಾನೂನು ತೊಡಕುಗಳಿವೆ. ಅದನ್ನು ಅರಿತು ಜನಪ್ರತಿನಿಧಿಗಳಾದವರು ಮಾತನಾಡಬೇಕು ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.ತಾಲೂಕಿನ ಬಂಡಿ, ತುಮ್ಮರಗುದ್ದಿ, ವಜ್ರಬಂಡಿ ಗ್ರಾಮಗಳಲ್ಲಿ ₹೯೭೦ ಕೋಟಿ ಅನುದಾನದಲ್ಲಿ ೩೮ ಕೆರೆ ನಿರ್ಮಾಣ ಯೋಜನೆಗೆ ಜಮೀನು ಲಭ್ಯತೆ ಬಗ್ಗೆ ಹಿರಿಯರು, ರೈತ ಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು. ಇದೀಗ ಆಲಮಟ್ಟಿ, ಕೃಷ್ಣಾ ಹಾಗೂ ತುಂಗಭದ್ರಾ ನದಿಯಿಂದ ಕುಡಿಯುವ ನೀರಿಗಾಗಿ ಯೋಜನೆ ಜಾರಿಗೆ ತಂದು ಕೆರೆಗಳಿಗೆ ನೀರು ತುಂಬಿಸಲಾಗುವುದು. ಇದನ್ನು ನೀರಾವರಿಗೆ ಬಳಕೆ ಮಾಡಲು ಬರುವುದಿಲ್ಲ. ಆದರೆ ಜನಪ್ರತಿನಿಧಿಗಳಾದವರು ಜನರಿಗೆ ದಿಕ್ಕು ತಪ್ಪಿಸುವ ಹೇಳಿಕೆ ನೀಡಬಾರದು ಎಂದರು.
ಕುಕನೂರು, ಯಲಬುರ್ಗಾ ತಾಲೂಕಿನಲ್ಲಿ ೫೦ರಿಂದ ೧೦೦ ಎಕರೆ ಜಮೀನು ದೊರೆಕಿದರೆ ಬೃಹತ್ ಕೆರೆ ನಿರ್ಮಿಸಿ ಅವುಗಳಿಗೆ ನೀರು ತುಂಬಿಸಲಾಗುವುದು. ಇದರಿಂದ ಕುಡಿಯುವ ನೀರು ಹಾಗೂ ಜಾನುವಾರಗಳಿಗೆ ಬಳಕೆ ಮಾಡಬಹುದು. ಜತೆಗೆ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗುತ್ತದೆ. ಇದರಿಂದ ರೈತರ ಪಂಪ್‌ಸೆಟ್ ಮರುಪೂರಣ ಸಾಧ್ಯ. ಆದರೆ ಕೆರೆ ತುಂಬಿಸಿದ ನೀರನ್ನು ಯಾವ ಕಾರಣಕ್ಕೂ ನೀರಾವರಿಗೆ ಬಳಕೆ ಮಾಡಲು ಬರುವುದಿಲ್ಲ. ನ್ಯಾಯಾಲಯದಲ್ಲಿ ಕಾನೂನು ತೊಡಕು ನಿವಾರಣೆಯಾದರೆ ಮುಂದೆ ನೀರಾವರಿ ಮಾಡಬಹುದು ಎಂದರು.ಪಟ್ಟಣದ ಕೆಂಪುಕೆರೆ, ತಾಲೂಕಿನ ಮಲಕಸಮುದ್ರ, ತಲರ‍್ಲ, ತರಲಕಟ್ಟಿ, ಬಂಡಿಹಾಳ, ಚಿಕ್ಕೇನಕೊಪ್ಪ, ಕರಮುಡಿ ಗ್ರಾಮಗಳ ಆರೇಳು ಕೆರೆಗಳನ್ನು ಹೊರತುಪಡಿಸಿದರೆ, ಬರೀ ಎರಡ್ಮೂರು ಎಕರೆ ವಿಸ್ತೀರ್ಣದ ಕೆರೆಗಳಿಂದ ಪ್ರಯೋಜನವಿಲ್ಲ. ಹೀಗಾಗಿ ಕುಕನೂರು, ಯಲಬುರ್ಗಾದಲ್ಲಿ ೫೦ರಿಂದ ೧೦೦ ಎಕರೆ ವಿಸ್ತಾರದಲ್ಲಿ ಕೆರೆ ನಿರ್ಮಿಸಿದರೆ ಅನುಕೂಲವಾಗುತ್ತದೆ. ಗ್ರಾಮಸ್ಥರು ಹೊಸ ಕೆರೆ ನಿರ್ಮಾಣಕ್ಕೆ ಇನ್ನೂ ೧೫ ದಿನಗಳ ಒಳಗೆ ಭೂಮಿ ನೀಡಲು ಮುಂದೆ ಬರಬೇಕು. ಹಿಂದಿನ ಅವಧಿಯಲ್ಲಿನ ೨೪ ಕೆರೆಗಳಿಗೆ ನೀರು ತುಂಬಿಸುವ ಪ್ರಕ್ರಿಯೆಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ. ಮೋಹನರಾಜ್ ಮಾತನಾಡಿ, ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಅವರು ಇಷ್ಟೊಂದು ದೊಡ್ಡ ಮೊತ್ತದ ಯೋಜನೆಯನ್ನು ನಿಮ್ಮ ಕ್ಷೇತ್ರಕ್ಕೆ ತಂದಿದ್ದಾರೆ. ಬೃಹತ್ ಪ್ರಮಾಣದ ಕೆರೆ ನಿರ್ಮಿಸಿ ಅದಕ್ಕೆ ಕೃಷ್ಣಾ ಮತ್ತು ತುಂಗಭದ್ರಾ ನದಿಯ ಒಡಲಿನಿಂದ ನೀರು ತಂದು ಕೆರೆ ತುಂಬಿಸುವ ಕಾರ್ಯವನ್ನು ತ್ವರಿತವಾಗಿ ಮಾಡಬೇಕೆನ್ನುವ ಅವರ ಕನಸು ನನಸಾಗಿಸಲು ಕುಕನೂರು, ಯಲಬುರ್ಗಾದ ರೈತರು ಭೂಮಿ ನೀಡಲು ಶಾಸಕರಿಗೆ ಸಹಕಾರ ನೀಡಲು ಮುಂದೆ ಬರಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.ಈಗಾಗಲೇ ಬಂಡಿ ಗ್ರಾಮಕ್ಕೆ ₹೪ ಕೋಟಿ ವೆಚ್ಚದಲ್ಲಿ ಹೊಸ ನಿಲ್ದಾಣ, ಪಕ್ಕದ ಗ್ರಾಮ ಕಡಬಲಕಟ್ಟಿ ಗ್ರಾಮದ ಹಳ್ಳಕ್ಕೆ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ₹೧.೫೦ ಕೋಟಿ, ₹೪ ಕೋಟಿ ವೆಚ್ಚದಲ್ಲಿ ಆರೋಗ್ಯ ಪ್ರಾಥಮಿಕ ಕೇಂದ್ರ, ಇನ್ನೂ ಬಂಡಿ ಕ್ರಾಸ್‌ನಿಂದ ಯಲಬುರ್ಗಾ ಮುಖ್ಯ ರಸ್ತೆ ಡಾಂಬರೀಕರಣಕ್ಕಾಗಿ ₹೧೯ ಕೋಟಿ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರೀಯೆ ಮುಗಿದು ಮುಂದಿನ ತಿಂಗಳದಲ್ಲಿ ಕಾಮಗಾರಿ ಪ್ರಾರಂಭವಾಗಿದೆ ಎಂದರು.
ಎಸಿ ಕ್ಯಾ ಮಹೇಶ್ ಮಾಲಗತ್ತಿ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಇಒ ಸಂತೋಷ ಪಾಟೀಲ ಬಿರಾದಾರ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಎಇಇ ಚನ್ನಪ್ಪ, ಮುಖಂಡರಾದ ಎಸ್.ಆರ್. ನವಲಿಹಿರೇಮಠ, ವೀರನಗೌಡ ಬಳೂಟಗಿ, ಹನುಮಂತಗೌಡ ಪಾಟೀಲ, ಎ.ಜಿ. ಭಾವಿಮನಿ, ಕೆರಿಬಸಪ್ಪ ನಿಡಗುಂದಿ, ಈರಪ್ಪ ಕುಡಗುಂಟಿ, ಆನಂದ ಉಳ್ಳಾಗಡ್ಡಿ, ಶರಣಪ್ಪ ಗಾಂಜಿ, ಶರಣಪ್ಪ ಉಪ್ಪಾರ, ಡಾ. ಶಿವನಗೌಡ ದಾನರೆಡ್ಡಿ, ಸಂಗಣ್ಣ ಟೆಂಗಿನಕಾಯಿ, ರಾಜಶೇಖರ ನಿಂಗೋಜಿ, ಮಲ್ಲು ಜಕ್ಕಲಿ, ಶೇಖಪ್ಪ ವಣಗೇರಿ, ಹುಲಗಪ್ಪ ಬಂಡಿವಡ್ಡರ್, ಶರಣಗೌಡ ಪಾಟೀಲ, ಪಿಡಿಒ ನಾಗೇಶ ನಾಯಕ ಹಾಗೂ ಗ್ರಾಮಸ್ಥರು ಇದ್ದರು.ಭೂಮಿ ದೊರಕಿಸಿ ಕೊಡಿ: ನಾನು ನನ್ನ ೪೦ ವರ್ಷಗಳ ಸೇವಾವಧಿಯಲ್ಲಿ ೫೦ರಿಂದ ೧೦೦ ಎಕರೆ ಜಮೀನಿನಲ್ಲಿ ಕೆರೆ ನಿರ್ಮಿಸಿ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಮಾಡಿಯೂ ಇಲ್ಲ, ನೋಡಿಯೂ ಇಲ್ಲ. ಇಂತಹ ಬೃಹತ್ ಯೋಜನೆಯನ್ನು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಅವರು ತಂದಿದ್ದಾರೆ. ಈ ಭಾಗದಲ್ಲಿ ಜನರಿಗೆ ಕುಡಿಯುವ ನೀರು ಬವಣೆ ನೀಗಿಸಬೇಕು, ಅಂತರ್ಜಲ ಹೆಚ್ಚಿಸಬೇಕು ಎನ್ನುವ ಕಳಿಕಳಿಯಿಂದ ಮುಖ್ಯಮಂತ್ರಿ ಬಳಿ ಮನವರಿಕೆ ಮಾಡಿ ಬಜೆಟ್‌ನಲ್ಲಿ ₹೯೭೦ ಕೋಟಿ ಕಾಯ್ದಿರಿಸಲಾಗಿದೆ. ಸರ್ಕಾರದ ದರಕ್ಕಿಂತ ೪ ಪಟ್ಟು ಹೆಚ್ಚಿಗೆ ಹಣ ಕೊಡುತ್ತೇವೆ. ಗ್ರಾಮಸ್ಥರು ಕನಿಷ್ಠ ೫೦ ಎಕರೆ ಭೂಮಿಯನ್ನು ದೊರಕಿಸಿ ಕೊಡಿ ಎಂದು ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್ ಮಂಜುನಾಥ ಮನವಿ ಮಾಡಿದರು.ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಅವರು ₹೯೭೦ ಕೋಟಿ ಬೃಹತ್ ಯೋಜನೆಯನ್ನು ತಾಲೂಕಿಗೆ ತಂದಿದ್ದಾರೆ. ಅದು ಅವರ ಪರಿಶ್ರಮ, ಕಾಳಜಿ ಕ್ಷೇತ್ರದ ಜನರ ಮೇಲಿಟ್ಟಿರುವ ಅಭಿಮಾನವನ್ನು ಎತ್ತಿ ತೋರಿಸುತ್ತದೆ. ಕ್ಷೇತ್ರದ ಜನರು ಅಭಿವೃದ್ಧಿ ಯೋಜನೆಗೆ ಸಹಕಾರ ನೀಡಿ ಭೂಮಿ ನೀಡಬೇಕು ಎಂದು ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.