ನಂದಿಹಳ್ಳಿಯಲ್ಲಿ ನೀಗದ ಕುಡಿವ ನೀರಿನ ಸಮಸ್ಯೆ

| Published : Feb 10 2024, 01:50 AM IST

ಸಾರಾಂಶ

ನಂದಿಹಳ್ಳಿ ಪ್ಲಾಟ್‌ ಏರಿಯಾ ಎತ್ತರ ಪ್ರದೇಶದಲ್ಲಿರುವ ಕಾರಣ ಕೊಳವೆ ಬಾವಿ ನೀರು ಪೂರೈಕೆಗೆ ಅಡ್ಡಿಯಾಗುತ್ತಿದೆ. ಇತ್ತ ಖಾಸಗಿ ಕೊಳವೆಬಾವಿ ನೀರನ್ನು ಬಾಡಿಗೆ ರೂಪದಲ್ಲಿ ನೀಡಲು ರೈತರು ಮುಂದಾಗುತ್ತಿಲ್ಲ.

ಹೂವಿನಹಡಗಲಿ: ಬೇಸಿಗೆ ಸಮೀಪಿಸುವ ಮುನ್ನವೇ ತಾಲೂಕಿನ ನಂದಿಹಳ್ಳಿಯಲ್ಲಿ ಕುಡಿಯಪವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಮಹಿಳೆಯರು ಖಾಲಿ ಕೊಡಗಳ ಪ್ರದರ್ಶನ ಮಾಡಿರುವ ಘಟನೆ ಜರುಗಿದೆ.

ಸಕಾಲದಲ್ಲಿ ಮಳೆ ಇಲ್ಲದ ಕಾರಣ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿ ಕೊಳವೆ ಬಾವಿಗಳು ಬತ್ತಿವೆ. ಇದರಿಂದ ನಂದಿಹಳ್ಳಿ ಪ್ಲಾಟ್‌ ಪ್ರದೇಶದಲ್ಲಿ ಕುಡಿಯುವ ನೀರಿಗೆ ನಿತ್ಯ ಹಾಹಾಕಾರ ಉಂಟಾಗಿದೆ. ಕಳೆದೊಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮದಲ್ಲಿರುವ 4 ಕೊಳವೆ ಬಾವಿಗಳಲ್ಲಿ ಎರಡು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಉಳಿದೆರಡು ಕೊಳವೆ ಬಾವಿಗಳಲ್ಲಿ ಕಡಿಮೆ ನೀರು ಇದ್ದರೂ ಅದರಿಂದಲೇ ನೀರು ಪೂರೈಕೆಗೆ ಮಾಡುತ್ತಿದ್ದರೂ ಜನರಿಗೆ ನೀರು ಸಾಕಾಗುತ್ತಿಲ್ಲ.

ನಂದಿಹಳ್ಳಿ ಪ್ಲಾಟ್‌ ಏರಿಯಾ ಎತ್ತರ ಪ್ರದೇಶದಲ್ಲಿರುವ ಕಾರಣ ಕೊಳವೆ ಬಾವಿ ನೀರು ಪೂರೈಕೆಗೆ ಅಡ್ಡಿಯಾಗುತ್ತಿದೆ. ಇತ್ತ ಖಾಸಗಿ ಕೊಳವೆಬಾವಿ ನೀರನ್ನು ಬಾಡಿಗೆ ರೂಪದಲ್ಲಿ ನೀಡಲು ರೈತರು ಮುಂದಾಗುತ್ತಿಲ್ಲ. ಜಮೀನುಗಳಲ್ಲಿ ಜಾನುವಾರುಗಳಿಗೆ ಹುಲ್ಲು ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದು, ಇದಕ್ಕಾಗಿ ನಮ್ಮ ಜಮೀನುಗಳಿಗೆ ನೀರಿನ ಕೊರತೆಯಾಗುತ್ತಿದೆ. ಬೇರೆಡೆ ಕೊಳವೆಬಾವಿ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ರೈತರು ಹೇಳುತ್ತಿದ್ದಾರೆ.

ಕಳೆದೊಂದು ತಿಂಗಳಿನಿಂದ ನಂದಿಹಳ್ಳಿ ಪ್ಲಾಟ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಎತ್ತರ ಪ್ರದೇಶವಾಗಿದ್ದು, ನೀರು ನಮ್ಮ ಮನೆಗಳಿಗೆ ಬರುತ್ತಿಲ್ಲ. ಇದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಸಮಸ್ಟೆಗೆ ಕ್ರಮ: ಗ್ರಾಮಸ್ಥರಿಗೆ ನೀರು ಪೂರೈಕೆಗಾಗಿ ಮುದೇನೂರು ಕೆರೆಯ ಪ್ರದೇಶದಲ್ಲಿ ಹೊಸ ಕೊಳವೆ ಬಾವಿ ಕೊರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದಷ್ಟು ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ. ಖಾಸಗಿ ಕೊಳವೆ ಬಾವಿಯನ್ನು ಬಾಡಿಗೆ ರೂಪದಲ್ಲಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಪಿಡಿಒ ಪ್ರಕಾಶ ತಿಳಿಸಿದರು.