ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ: ಡಿಸಿಗೆ ಬಿಜೆಪಿ ಮನವಿ ಸಲ್ಲಿಕೆ

| Published : May 15 2024, 01:36 AM IST

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ: ಡಿಸಿಗೆ ಬಿಜೆಪಿ ಮನವಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

೭ ದಿನದೊಳಗೆ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸದಿದ್ದಲ್ಲಿ ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ನಗರಸಭಾ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆಯ ಕುಡಿಯುವ ನೀರು ಸಮಸ್ಯೆ, ಪ್ರಾಕೃತಿಕ ವಿಕೋಪ ಪೂರ್ವ ತಯಾರಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ವಾರದ ಒಳಗಾಗಿ ಈಡೇರಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಬಿಜೆಪಿ ಬೆಂಬಲಿತ ಪುತ್ತೂರು ನಗರಸಭೆಯ ಸದಸ್ಯರು ಹಾಗೂ ಮುಖಂಡರ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ನಗರಸಭೆಯ ೩೧ ವಾರ್ಡ್‌ಗಳಲ್ಲ ಜಲಸಿರಿ ಯೋಜನೆ ಮೂಲಕ ಪ್ರತಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿ ಪ್ರಾಯೋಗಿಕ ಹಂತದಲ್ಲಿ ನೀರು ಸರಬರಾಜು ಮಾಡುವ ಕಾರ್ಯ ಆರಂಭವಾಗಿದ್ದರೂ ಸಮಸ್ಯೆ ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ. ಪುತ್ತೂರು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ ಮುಗಿದು ವರ್ಷ ಕಳೆದಿದೆ. ಹೊಸ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡದೆ ನಗರಸಭೆ ಉಸ್ತುವಾರಿಯನ್ನು ಅಧಿಕಾರಿಗಳು ವಹಿಸಿಕೊಂಡು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಸಮಸ್ಯೆಗಳು ಹೆಚ್ಚಾಗುತ್ತಿದೆ. ನಗರಸಭೆ ವ್ಯಾಪ್ತಿಯ ಪ್ರಾಕೃತಿಕ ವಿಕೋಪ ಸಂಬಂಧಿಸಿ ಇನ್ನೂ ಪೂರ್ವ ತಯಾರಿ ಸಭೆ ನಡೆಸಿಲ್ಲ.

ಜಲಸಿರಿ ಯೋಜನೆಗೆ ಸುಮಾರು ೧೧೩ ಕೋಟಿ ರು. ಅನುದಾನ ಬಿಡುಗಡೆಯಾಗಿ ಪ್ರತಿ ಮನೆಗೆ ನೀರಿನ ಸಂಪರ್ಕ ಕಲ್ಪಿಸಿ ಪ್ರಾಯೋಗಿಕವಾಗಿ ಒಂದು ಹಂತದಲ್ಲಿ ನೀರನ್ನು ವಿತರಿಸುವ ಕೆಲಸ ಈಗಾಗಲೇ ಆರಂಭಗೊಂಡಿದೆ. ಆದರೆ ಪ್ರಸುತ ಈ ಯೋಜನೆಯು ಪ್ರತಿ ವಾರ್ಡಿನಲ್ಲಿ ಪ್ರತಿಯೊಂದು ಮನೆಗೆ ಅಸಮರ್ಪಕ ನೀರಿನ ವಿತರಣೆಯಾಗುತ್ತಿರುವ ಬಗ್ಗೆ ದೂರುಗಳು ಮತ್ತು ಜಲಸಿರಿ ಅಧಿಕಾರಿಯ ಬಗ್ಗೆ ದಿನ ನಿತ್ಯ ದೂರುಗಳು ಬರುತ್ತಿವೆ. ಈ ಕುರಿತು ಈ ಹಿಂದೆಯೂ ಜಿಲ್ಲಾಧಿಕಾರಿಗಳಿಗೆ ಮತ್ತು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಜಲಸಿರಿ ಯೋಜನೆ ಮತ್ತು ಸರಕಾರದ ಯೋಜನೆಯಲ್ಲಿ ದಿನದ 24 ನೀರು ಒದಗಿಸಬೇಕೆಂದು ಆದೇಶವಿದ್ದು, ಇನ್ನೂ ೩೦ ವರ್ಷ ಪುತ್ತೂರು ನಗರಕ್ಕೆ ಬೇಕಾದ ನೀರು ಸಂಗ್ರಹಣಾ ಹಾಗು ವಿತರಣೆಗೆ ಈ ಯೋಜನೆಯನ್ನು ಅಳವಡಿಸಿದರೂ ಈ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸುವ ಅನಿವಾರ್ಯತೆ ಬಂದಿದೆ. ಈ ಕುರಿತು ಬಹಳಷ್ಟು ದೂರುಗಳು ಬರುತ್ತಿವೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಮತ್ತು ಚುನಾಯಿತ ಆಡಳಿತ ಇಲ್ಲದೆ ಇರುವುದರಿಂದ ನಗರಸಭೆಯ ಯಾವುದೆ ಚುನಾಯಿತ ಸದಸ್ಯರು ಯಾವುದೇ ಸಮಸ್ಯೆನ್ನು ನಗರಸಭೆಯ ಮುಂದಿಟ್ಟರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ನಗರಸಭೆಯಲಿ ನೀರಿನ ಮತ್ತು ಇತರ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಸಮರ್ಪಕವಾಗಿ ಕುಡಿಯುವ ನೀರು ಮತ್ತು ಚರಂಡಿಗಳ ಗಿಡ ಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ. ೭ ದಿನದೊಳಗೆ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸದಿದ್ದಲ್ಲಿ ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ನಿಯೋಗದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಮುಖರಾದ ಜಯಶ್ರೀ ಎಸ್. ಶೆಟ್ಟಿ, ಯುವರಾಜ್ ಪೆರಿಯತ್ತೋಡಿ, ಹರೀಶ್ ಬಿಜತ್ರೆ, ನಿತೀಶ್ ಕುಮಾರ್ ಶಾಂತಿವನ ಸಹಿತ ನಗರಸಭೆ ಬಿಜೆಪಿ ಬೆಂಬಲಿತ ಸದಸ್ಯರು ಇದ್ದರು.