ಕನ್ನಡಪ್ರಭ ವಾರ್ತೆ ಮದ್ದೂರು

ಸೋಮನಹಳ್ಳಿ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಬನ್ನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ಹೆಚ್ಚಿನ ಒತ್ತು ನೀಡಿರುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ರಾಜೇಗೌಡನದೊಡ್ಡಿ, ಕೆ.ಹೊನ್ನಲಗೆರೆ ಗ್ರಾಮದಲ್ಲಿ 55 ಲಕ್ಷ ರು. ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬನ್ನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿಸಲು ಅಗತ್ಯ ಕ್ರಮ ವಹಿಸಿರುವುದಾಗಿ ಹೇಳಿದರು.

ಈ ಭಾಗದಲ್ಲಿರುವ ಹಲವು ಸಮಸ್ಯೆಗಳಿಗೆ ಶಾಶ್ವತ ಯೋಜನೆ ರೂಪಿಸಲು ಈಗಾಗಲೇ ಅಧಿಕಾರಿಗಳ ನೇತೃತ್ವದ ಸಭೆ ನಡೆಸಿ ಅಗತ್ಯವಿರುವ ವಿದ್ಯುತ್ ಸಬ್‌ ಸ್ಟೇಷನ್ ಮತ್ತು ಬನ್ನಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದರು.

ತಾಲೂಕಿನ ಕೂಳಗೆರೆ ಗ್ರಾಮದಲ್ಲೂ 66 ಕೆ.ವಿ ವಿದ್ಯುತ್ ಸಬ್‌ಸ್ಟೇಷನ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮುಂದಿನ ಎರಡು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಂಡ ಬಳಿಕ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಂತಾಗಲಿದೆ ಎಂದರು.


ನನ್ನ ಅವಧಿಯಲ್ಲಿ ಎರಡು ಸಾವಿರ ಕೋಟಿಗೂ ಹೆಚ್ಚು ಅನುದಾನ ತಂದು ಮದ್ದೂರನ್ನು ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸುತ್ತಿದ್ದೇನೆ. ಈ ಅಭಿವೃದ್ಧಿಯನ್ನು ಸಹಿಸದ ವಿಪಕ್ಷದವರು ತಮ್ಮ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರೇ ಉತ್ತರ ಕೊಡಲಿದ್ದಾರೆ ಎಂದರು.

ಈ ವೇಳೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಕೆ.ಹೊನ್ನಲಗೆರೆ ವಿ.ಎಸ್.ಎಸ್.ಬಿ.ಎನ್ ಅಧ್ಯಕ್ಷ ನಾಗೇಶ್, ಗ್ರಾಮಸ್ಥರಾದ ಪುಟ್ಟಸ್ವಾಮಿ, ಅಪ್ಪಾಜಿ, ಬಸವಣ್ಣ, ಮುತ್ತರಾಜು, ದೇವರಾಜು, ಸಿದ್ಧರಾಮು, ಪ್ರಜ್ವಲ್, ಪ್ರದೀಪ್, ಶಿವರಾಮು, ಶಿವಮಾದು, ಕಾಡಯ್ಯ, ಕೆಂಪಣ್ಣ, ಕೃಷ್ಣ, ಕುಮಾರ್, ಸಂತೋಷ್, ಶಿವು, ಆರ್.ಸಿ.ಮಹೇಶ್, ಮಹೇಂದ್ರ, ರವೀಶ್ ಇತರರಿದ್ದರು.