ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಗ್ರಾಮದ 4ನೇ ವಾರ್ಡ್‌ನಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಗ್ರಾಮದ 4ನೇ ವಾರ್ಡ್‌ನ ಭಜನೆ ಮಂದಿರ ಹಾಗೂ ಸರ್ಕಾರಿ ಆಸ್ಪತ್ರೆ ಎದುರಿನ ಓಣಿ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಸಮರ್ಪಕವಾಗಿ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಪೂರೈಕೆಗೆ ಬಳಸುವ ಮೋಟರ್ ಸುಟ್ಟು ಹೋಗಿದ್ದರೂ ಸಂಬಂಧಪಟ್ಟ ಸಿಬ್ಬಂದಿ ತಕ್ಷಣ ಸ್ಪಂದಿಸಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಸಮಸ್ಯೆ ಬಗೆಹರಿಸುವಲ್ಲಿ ಗ್ರಾಮಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ಗ್ರಾಮದ ಹಲವೆಡೆ ಹಳೆಯ ಮೋಟರ್‌ಗಳನ್ನು ಮರುಬಳಕೆ ಮಾಡಲಾಗುತ್ತಿದ್ದು, ಅವು ಪದೇ ಪದೇ ದುರಸ್ತಿಗೆ ಒಳಗಾಗುತ್ತಿರುವುದರಿಂದ ನೀರು ಪೂರೈಕೆ ವ್ಯತ್ಯಯವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು. ವಿಶೇಷವಾಗಿ ಸರ್ಕಾರಿ ಆಸ್ಪತ್ರೆ ಎದುರಿನ ಪ್ರದೇಶದಲ್ಲಿ ನೀರಿನ ಪೈಪ್ ದುರಸ್ತಿಗೆ ಗ್ರಾಮಸ್ಥರೇ ಸ್ವತಃ ಕುಣಿ ತೋಡಿ ಕೆಲಸ ನಿರ್ವಹಿಸುತ್ತಿರುವ ದೃಶ್ಯ ಕಂಡುಬಂದಿತು.ಗ್ರಾಮಸ್ಥರಾದ ಸಾದು ಅಂಜಿನಿ, ತಾಯಪ್ಪ, ಲೋಕಿ, ಕೋಳಿ ಜಡೆಪ್ಪ, ಫಕ್ಕಿರಪ್ಪ ಹಾಗೂ ಶಿವರಾಮ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ನಾಲ್ಕು ದಿನಗಳಿಂದ ನೀರು ಬರದೆ ಜನರು ಪರದಾಡುತ್ತಿದ್ದಾರೆ. ಹಳೆಯ ಮೋಟರ್‌ಗಳನ್ನು ಬಳಸಿ ತಾತ್ಕಾಲಿಕ ದುರಸ್ತಿ ಮಾಡುವುದರಿಂದ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತಿಲ್ಲ. ಗ್ರಾಮ ಪಂಚಾಯಿತಿ ಹೊಸ ಮೋಟರ್ ಅಳವಡಿಸಿ ಸಮರ್ಪಕ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.
ಇನ್ನು ಭಾನುವಾರ ರಾತ್ರಿ ಗ್ರಾಮದಲ್ಲಿ ಏಕಕಾಲಕ್ಕೆ ಎರಡು ಮೋಟರ್‌ಗಳು ಸುಟ್ಟು ಹೋಗಿದ್ದರಿಂದ ನೀರು ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ ಎಂದು ಗ್ರಾಮಾಡಳಿತ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಒ ಬೀರಲಿಂಗ ಹಾಗೂ ಗ್ರಾಪಂ ಕಾರ್ಯದರ್ಶಿ ಎಚ್. ಹುಲುಗಪ್ಪ, ಪೆಟ್ರೋಲ್ ಬಂಕ್ ಹತ್ತಿರ ಹಾಗೂ ಸರ್ಕಾರಿ ಆಸ್ಪತ್ರೆ ಎದುರಿನ ಮೋಟರ್‌ಗಳನ್ನು ತುರ್ತುವಾಗಿ ದುರಸ್ತಿಗೊಳಿಸಿ ನೀರು ಪೂರೈಕೆಗೆ ಸಜ್ಜುಗೊಳಿಸಲಾಗಿದೆ. ಆದರೆ ಜನರ ಸಹಕಾರದ ಕೊರತೆಯಿಂದ ಸಮಸ್ಯೆ ಮರುಕಳಿಸುತ್ತಿದೆ ಎಂದು ಹೇಳಿದರು. ಕೆಲವರು ಸ್ವಯಂಪ್ರೇರಿತವಾಗಿ ಕುಣಿ ತೋಡಿ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ. ನಿಗದಿತ ವೇಳೆಯಲ್ಲಿ ನೀರು ಬಿಡುತ್ತಿದ್ದರೂ ಕೆಲವರು ಬೀಗ ಒಡೆದು ಮೋಟರ್ ಆನ್ ಮಾಡಿಕೊಂಡು ನೀರು ಬಳಸುತ್ತಿರುವುದು ಮೋಟರ್‌ಗಳ ಮೇಲಿನ ಒತ್ತಡ ಹೆಚ್ಚಲು ಕಾರಣವಾಗುತ್ತಿದೆ. ಇದರ ಪರಿಣಾಮವಾಗಿ ಪದೇ ಪದೇ ಮೋಟರ್‌ಗಳು ಸುಟ್ಟು ಹೋಗುತ್ತಿವೆ ಎಂದು ಅಧಿಕಾರಿಗಳು ವಿವರಿಸಿದರು.ಗ್ರಾಮದಲ್ಲಿ ನೀರು ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾರ್ವಜನಿಕರು ಸಹಕರಿಸಬೇಕು. ಅನಧಿಕೃತ ಸಂಪರ್ಕಗಳನ್ನು ತಪ್ಪಿಸಿ ನಿಯಮಾನುಸಾರ ನೀರು ಬಳಕೆ ಮಾಡಿದರೆ ಸಮಸ್ಯೆ ಕಡಿಮೆಯಾಗಲಿದೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮನವಿ ಮಾಡಿದ್ದಾರೆ.