ಸಾರಾಂಶ
ಸಿಂಗಟಾಲೂರು ಬ್ಯಾರೇಜ್‌ನಲ್ಲಿ 2.12 ಟಿಎಂಸಿ ನೀರು । ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆ
ಚಂದ್ರು ಕೊಂಚಿಗೇರಿಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ತಾಲೂಕಿನ ನದಿ ತೀರದ ಗ್ರಾಮಗಳನ್ನು ಹೊರತುಪಡಿಸಿ 20 ಗ್ರಾಮಗಳು ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎಂಬ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದೆ.ಈ ಭಾಗದ ರೈತರು ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ದಾಹ ಇಂಗಿಸುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಲ್ಲಿ ಸದ್ಯಕ್ಕೆ 2.12 ಟಿಎಂಸಿ ನೀರು ಸಂಗ್ರಹವಾಗಿದೆ. ಈ ನೀರು ಕುಡಿಯಲು ಕೇವಲ 45 ದಿನಗಳಿಗೆ ಮಾತ್ರ ಸಾಕಾಗಲಿದೆ. ಇಡೀ ತಾಲೂಕಿನ ಎಲ್ಲ ಹಳ್ಳಿಗಳಿಗೆ ತುಂಗಭದ್ರಾ ನದಿ ನೀರೇ ಆಸರೆಯಾಗಿದೆ.
ತಾಲೂಕಿನಲ್ಲಿ 11 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ತುಂಗಭದ್ರಾ ನದಿಯಿಂದಲೇ ನೀರು ಪೂರೈಕೆಯಾಗುತ್ತಿದೆ. ಸದ್ಯದ ಮಟ್ಟಿಗೆ ಯಾವ ಕಡೆಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ.ಸಿಂಗಟಾಲೂರು ಬ್ಯಾರೇಜ್ ಮೇಲ್ಭಾಗದಲ್ಲಿ ಕುಡಿಯುವ ನೀರಿಗಾಗಿ ನದಿ ನೀರನ್ನು ಅಡ್ಡಗಟ್ಟಲು ರಿಂಗ್ ಬಂಡ್ ಮಾಡುವ ಉದ್ದೇಶವಿಲ್ಲ. ಕೆಲವು ಕೆರೆಗಳಲ್ಲಿ ನೀರು ಸಂಗ್ರಹವಾಗಿದ್ದು, ಜಾನುವಾರುಗಳಿಗೆ ಆಸರೆಯಾಗಿವೆ.
ಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರು ಕುರಿತು ಈಗಾಗಲೇ ಅಧಿಕಾರಿಗಳು ಸಭೆ ಮಾಡಿದ್ದು, ತಾಲೂಕಿನ 20 ಹಳ್ಳಿಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ.ತಾಲೂಕಿನ 11 ಗ್ರಾಪಂ ವ್ಯಾಪ್ತಿಯ ದಾಸರಹಳ್ಳಿ ತಾಂಡ, ಬಸರಹಳ್ಳಿ ತಾಂಡ, ಹಿರೇಮಲ್ಲನಕೆರೆ, ವರಕನಹಳ್ಳಿ, ಹಕ್ಕಂಡಿ, ದುಂಗಾವತಿ ತಾಂಡ, ಅಂಕ್ಲಿ, ಮಹಾಜನದಹಳ್ಳಿ, ಕಾಲ್ವಿ ತಾಂಡ, ತಳಕಲ್ಲು, ಕೊಯಿಲಾರಗಟ್ಟಿ, ಕೊಯಿಲಾರಗಟ್ಟಿ ತಾಂಡ, ನಂದಿಹಳ್ಳಿ, ಹೊಳಗುಂದಿ, ಬಾವಿಹಳ್ಳಿ, ಅಲ್ಲಿಪುರ, ಕಾಗನೂರು, ವಡ್ಡನಹಳ್ಳಿ ತಾಂಡ, ಮಾನ್ಯರ ಮಸಲವಾಡ, ಸೋವೇನಹಳ್ಳಿ ಗ್ರಾಮಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇಲ್ಲಿನ ಪಟ್ಟಣಕ್ಕೆ ಸಿಂಗಟಾಲೂರು ಏತ ನೀರಾವರಿ ಹಿನ್ನೀರಿನಲ್ಲಿ ನಿರ್ಮಾಣ ಮಾಡಿರುವ ಜಾಕ್‌ವಾಲ್‌ನಿಂದ ನೀರು ಪೂರೈಕೆಯಾಗುತ್ತಿದೆ. ಜತೆಗೆ 49 ಕೊಳವೆಬಾವಿಗಳು, 33 ಸಿಸ್ಟರ್ನ್ ಟ್ಯಾಂಕ್‌ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ.ಸಿಂಗಟಾಲೂರು ಬ್ಯಾರೇಜ್‌ನಲ್ಲಿ ಕುಡಿಯುವ ನೀರಿಗಾಗಿ ಸದ್ಯ 2.12 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಈ ನೀರು ಜನ-ಜಾನುವಾರುಗಳು ಕುಡಿಯಲು 45 ದಿನಗಳಿಗೆ ಮಾತ್ರ ಸಾಕಾಗಲಿದೆ ಎನ್ನುತ್ತಾರೆ ಸಿಂಗಟಾಲೂರು ಏತ ನೀರಾವರಿ ಯೋಜನೆ ವಿಭಾಗ-2ರ ಎಇಇ ರಾಘವೇಂದ್ರ.