ಎಣ್ಣೆ ನಗರಿಯಲ್ಲಿ ಈ ವರ್ಷ ಬಾಧಿಸದು ಕುಡಿವ ನೀರಿನ ಸಮಸ್ಯೆ

| Published : Mar 21 2025, 12:30 AM IST

ಸಾರಾಂಶ

ಚಳ್ಳಕೆರೆಯ 31 ವಾರ್ಡ್‌ಗಳಲ್ಲಿಯೂ ಯಥೇಚ್ಚ ನೀರು । ಎಲ್ಲಿಯೂ ಕಾಣಿಸಿದ ಖಾಲಿ ಕೊಡಗಳು

ರಾಘವೇಂದ್ರ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಲ್ಲು ಬಂಡೆಗಳ ನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಚಳ್ಳಕೆರೆ ನಗರದ ರಾಜ್ಯದ ಪ್ರಮುಖ ವಾಣಿಜ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಶೈಕ್ಷಣಿಕ, ಸಾಹಿತ್ಯ ಹಾಗೂ ಕ್ರೀಡಾಕ್ಷೇತ್ರದಲ್ಲಿ ಸಾಕಷ್ಟು ಮನ್ನಣೆ ಪಡೆದಿರುವ ಚಳ್ಳಕೆರೆ ನಗರ ಕುಡಿಯುವ ನೀರಿನ ವಿಚಾರದಲ್ಲೂ ಧಾರಾಳತನದಲ್ಲಿದೆ. ನಗರದಲ್ಲಿ ವಾಸವಿರುವ ಹಾಗೂ ಬೇರೆಕಡೆಯಿಂದ ಬರುವ ಎಲ್ಲರಿಗೂ ಸಮೃದ್ಧವಾಗಿ ಶುದ್ಧ ಕುಡಿಯುವ ನೀರನ್ನು ಒದಗಿಸುವ ಎಲ್ಲಾ ಸೌಲಭ್ಯಗಳು ನಮ್ಮಲ್ಲಿದೆ.

ಬಿಸಿಲ ಬೇಗೆಯಲ್ಲಿ ಬೆಂದು ಬಂದವರಿಗೆ ಕಡೆಪಕ್ಷ ಶುದ್ಧವಾದ ಕುಡಿಯುವ ನೀರನ್ನಾದರೂ ನೀಡಿ ಅವರನ್ನು ಸಂತೈಸುವ ಕೆಲಸವಾಗುತ್ತಿದೆ. ಕಳೆದ ಕೆಲವು ವರ್ಷಗಳ ಹಿಂದೆ ಮಳೆ ಅಭಾವದಿಂದಾಗಿ ಈ ಭಾಗದಲ್ಲಿ ಕುಡಿಯುವ ನೀರಿನ ಹಾಹಾಕಾರ ಮುಗಿಲು ಮುಟ್ಟಿದ್ದು, ನಗರದ ಎಲ್ಲಾ ವಾರ್ಡ್‍ಗಳಲ್ಲಿ ಸಾರ್ವಜನಿಕರು ಕೊಡಗಳನ್ನು ಕೈಯಲ್ಲಿಡಿದು ಓಡಾಡುವ ದೃಶ್ಯಕಾಣುತ್ತಿತ್ತು. ಆದರೆ, ಇಂದು ನಗರದ ಯಾವ ಭಾಗದಲ್ಲೂ ಕುಡಿಯುವ ನೀರಿನ ಕೊರತೆ ಇಲ್ಲ. ಬದಲಾಗಿ ಪ್ರತಿನಿತ್ಯವೂ 31 ವಾರ್ಡ್‍ಗಳ ನಲ್ಲಿಯಲ್ಲೂ ನೀರು ಕಾಣಬಹುದಾಗಿದೆ.

ಚಳ್ಳಕೆರೆ 31 ವಾರ್ಡ್‍ಗಳನ್ನು ಹೊಂದಿದ್ದು, 37 ಶುದ್ಧ ಕುಡಿಯುವ ನೀರಿನ ಘಟಕವನ್ನು ಹೊಂದಿದೆ. ಬಹುತೇಕ ಎಲ್ಲಾ ವಾರ್ಡ್‍ಗಳಲ್ಲೂ ಕುಡಿಯುವ ನೀರಿನ ಘಟಕವಿದ್ದು, ನೀರಿನ ಸೌಲಭ್ಯ ಸಮೃದ್ಧವಾಗಿದೆ. ಬಹುಮುಖ್ಯವಾಗಿ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರದಿಂದ ಪ್ರತಿನಿತ್ಯ ಪೈಪ್‍ಲೈನ್ ಮೂಲಕ 9.45 ಎಂಎಲ್‍ಡಿ ನೀರನ್ನು ಬರುತ್ತಿದೆ. ಇದರಿಂದ ನೀರಿನ ಅಭಾವ ಮಾಯವಾಗಿದೆ. ಚಳ್ಳಕೆರೆ ನಗರದಲ್ಲಿ ಪ್ರಸ್ತುತ 70 ಸಾವಿರ ಜನಸಂಖ್ಯೆ ಇದ್ದು, 14 ಸಾವಿರ ಮನೆಗಳಿವೆ. ಈ ಪೈಕಿ 7 ಸಾವಿರ ಮನೆಗಳ ನಲ್ಲಿಗಳು ಸಕ್ರಮವಾಗಿವೆ, 3 ಸಾವಿರಕ್ಕೂ ಹೆಚ್ಚು ನಲ್ಲಿಗಳು ಅಕ್ರಮವಾಗಿವೆ, ನಗರದಲ್ಲಿ 131 ಬೋರ್‌ವೆಲ್‍ಗಳಿದ್ದು ಎಲ್ಲಾ ಬೋರ್‌ಗಳಲ್ಲೂ ಸಾಕಷ್ಟು ನೀರಿದೆ. ಈಗಲೂ ಸಹ 70 ಬೋರ್‌ವೆಲ್‍ಗಳ ನೀರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ದಿನಕ್ಕೆ ನಗರದ ನಾಗರೀಕರಿಗೆ 9.45 ಎಂಎಲ್‍ಡಿ ನೀರು ನೀಡಲಾಗುತ್ತಿದೆ. ಅಂದಾಜು 94540 ಲೀಟರ್ ನೀರು ಪ್ರತಿನಿತ್ಯ ಸಾರ್ವಜನಿಕರಿಗೆ ದೊರೆಯುತ್ತಿದೆ.

ನಗರದ 31ವಾರ್ಡ್‍ಗಳ ಪೈಕಿ ಅಂಬೇಡ್ಕರ್ ನಗರ, ಜನತಾ ಕಾಲೋನಿ, ಗಾಂಧಿನಗರ, ಕುಬೇರ ನಗರ, ಶಾಂತಿ ನಗರ, ವಾಸವಿ ಕಾಲೋನಿ, ಕಾಟಪ್ಪನಹಟ್ಟಿ, ಚಿತ್ರಯ್ಯನಹಟ್ಟಿ, ವಿಠಲನಗರದ ಕೆಲವಡೆ ನೀರು ಅನಗತ್ಯವಾಗಿ ಪೋಲಾಗುತ್ತಿದೆ. ಕಾರಣ ನಗರಸಭೆಯಿಂದ ಹಾಕಲಾದ ಸಾರ್ವಜನಿಕ ನಲ್ಲಿಗಳಲ್ಲಿ ನೀರು ಬಿಟ್ಟ ಸಮಯದಲ್ಲಿ ನೀರು ಹಿಡಿದವರು ನೀರನ್ನು ನಿಲ್ಲಿಸದೆ ನಿರ್ಲಕ್ಷ್ಯೆ ವಹಿಸುತ್ತಿದ್ದಾರೆ. ಈ ಬಗ್ಗೆ ನಗರಸಭೆ ಸಂಬಂಧಪಟ್ಟ ಅಧಿಕಾರಿಗಳ ಕ್ರಮವಹಿಸಬೇಕು ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಅನಗತ್ಯವಾಗಿ ನೀರು ಪೋಲು ಮಾಡುವುದರಿಂದ ಅಭಾವ ಉಂಟಾಗದಾಗ ದುಸ್ಥಿತಿಯನ್ನು ನಾವೇ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಯಾವ ಭಾಗದಲ್ಲೂ ನೀರು ಪೋಲಾಗದಂತೆ ನಗರಸಭೆ ಆಡಳಿತ ಜಾಗ್ರತೆ ವಹಿಸಬೇಕು. ನೀರು ಪೋಲು ಮಾಡುವವರಿಗೆ ಎಚ್ಚರಿಕೆ ನೀಡಬೇಕೆನ್ನುತ್ತಾರೆ ಸಾರ್ವಜನಿಕರು.

ಚಳ್ಳಕೆರೆ ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ನಿವಾರಿಸಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಲಭ್ಯವಿರುವ ನೀರನ್ನು ಸದ್ವಿನಿಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ಸಲಹೆ ಸೂಚನೆಯನ್ನು ಸಹ ನಗರಸಭೆ ಆಡಳಿತಕ್ಕೆ ನೀಡಲಾಗಿದೆ. ಕುಡಿಯುವ ನೀರಿನ ಅಭಾವ ಎದುರಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಸೂಚನೆ ನೀಡಿದೆ. ಆದರೆ, ಕಳೆದ 2024ರಲ್ಲಿ ಆದ ಉತ್ತಮ ಮಳೆಯ ಫಲವಾಗಿ ವಿವಿಸಾಗರ ತುಂಬಿದ್ದು ವಿವಿಸಾಗರದ ನೀರು ಈ ಭಾಗಕ್ಕೂ ಲಭ್ಯವಿರುವುದರಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಈ ಭಾಗದ ಜನರು ಬಚಾವಾಗಿದ್ಧಾರೆ.

ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಚಳ್ಳಕೆರೆ ಮುಂಚೂಣಿಯಲ್ಲಿದ್ದು, ನಗರಸಭೆ ಆಡಳಿತ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶಾಸಕರ ಮಾರ್ಗದರ್ಶನದಲ್ಲಿ ಎಲ್ಲಾ ಕ್ರಮ ಕೈಗೊಂಡಿದೆ. ಪ್ರಸ್ತುತ ಕುಡಿಯುವ ನೀರು ವಿವಿಸಾಗರದಿಂದ ಚಳ್ಳಕೆರೆ ಬರುತ್ತಿದ್ದು, ನೀರಿನ ಅಭಾವದೂರವಾಗಿದೆ. ಪ್ರತಿನಿತ್ಯ ನೀರು ಸರಬರಾಜು ಆಗುವ ಬೆಂಗಳೂರು ರಸ್ತೆಯಲ್ಲಿರುವ 22.10 ಲಕ್ಷ ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಇದರಿಂದ ನಗರದ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತರಾಗಿದ್ದಾರೆ.

ಎಚ್.ಜಿ.ಜಗರೆಡ್ಡಿ, ಪೌರಾಯುಕ್ತ

ನಗರದ 31 ವಾರ್ಡ್‍ಗಳ ಮನೆಗಳಿಗೆ ನಲ್ಲಿ ಸಂಪರ್ಕವಿದೆ, ಇದರ ಜೊತೆಗೆ ಸಾರ್ವಜನಿಕವಾಗಿಯೂ ಸಹ ಹೊಸದಾಗಿ ನಲ್ಲಿಗಳನ್ನು ಹಾಕಲಾಗಿದೆ. ಬಹುತೇಕ ವಾರ್ಡ್‍ಗಳಿಗೆ ನಿರಂತರ ಬೇಟಿ ನೀಡಿ ಎಲ್ಲಿ ನೀರು ಲಭ್ಯವಿದೆಯೋ ಅಲ್ಲಿ ನಲ್ಲಿಗಳ ವ್ಯವಸ್ಥೆ ಮಾಡಿದೆ. ಸಂಪರ್ಕ ಪಡೆದ ನಲ್ಲಿಗಳಿಂದ ಮಾತ್ರ ನಗರಸಭೆಗೆ ಕಂದಾಯ ಬರುತ್ತಿದೆ. ಅಕ್ರಮ ನಲ್ಲಿಗಳನ್ನು ಸಕ್ರಮಗೊಳಿಸುವ ಕಾರ್ಯ ನಡೆಯುತ್ತಿದೆ. ಪ್ರತಿನಿತ್ಯವೂ ಕುಡಿಯುವ ನೀರು ಸರಬರಾಜು ಮಾಡುವ ಸಿಬ್ಬಂದಿಗೆ ಎಚ್ಚರಿಕೆ ನೀಡಿ ಎಲ್ಲೂ ನೀರು ಪೋಲಾಗದಂತೆ ಜಾಗ್ರತೆ ವಹಿಸಲಾಗಿದೆ.

ಕೆ.ವಿನಯ್, ನಗರಸಭೆ ಎಇಇ

ನಗರದಲ್ಲಿ ಪ್ರಸ್ತುತ ಸ್ಥಿತಿಯಲ್ಲಿ ಕುಡಿಯುವ ನೀರಿನ ಅಭಾವಿಲ್ಲದಿದ್ದರೂ ಅಂಬೇಡ್ಕರ್ ನಗರವೂ ಸೇರಿದಂತೆ ಕೆಲವೆಡೆ ನೀರು ಪೋಲಾಗುತ್ತಿದ್ದು, ಇದನ್ನು ನಗರಸಭೆ ಆಡಳಿತ ಕಡ್ಡಾಯವಾಗಿ ತಡೆಯಬೇಕಿದೆ. ನೀರನ್ನು ಪೋಲು ಮಾಡುವವರ ವಿರುದ್ಧ ಕ್ರಮವಹಿಸಬೇಕು. ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದೂ ಎಂಬ ವಿಶ್ವಾಸವಿದ್ದರೂ ಅನಗತ್ಯವಾಗಿ ನೀರು ಕಳೆದುಕೊಂಡರೆ ಮುಂದಿನ ದಿನಗಳಲ್ಲಿ ನಾಗರೀಕರು ತೊಂದರೆಗೆ ಸಿಲುಕಬಹುದು. ನಗರಸಭೆ ಈ ನಿಟ್ಟಿನಲ್ಲಿ ಜಾಗ್ರತೆವಹಿಸಬೇಕು.

ಬಿ.ಎಂ.ಭಾಗ್ಯಮ್ಮ, ಗೃಹಿಣಿ ಅಂಬೇಡ್ಕರ್ ನಗರ