ಸಾರಾಂಶ
drinking water stop in hyriyuru
-ಪಂಚಾಯಿತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ । ಶುದ್ಧ ಕುಡಿವ ನೀರಿನ ಘಟಕಗಳ ಸ್ಥಿತಿ ಚಿಂತಾಜನಕ
----ಕನ್ನಡಪ್ರಭ ವಾರ್ತೆ ಹಿರಿಯೂರು:
ಯರಬಳ್ಳಿ ಗ್ರಾ.ಪಂ ಆವರಣದಲ್ಲಿರುವ ಶುದ್ಧ ಕುಡಿವ ನೀರಿನ ಘಟಕ ಹದಿನೈದು ದಿನಗಳಿಂದ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಗ್ರಾ.ಪಂ ಪಕ್ಕದಲ್ಲೇ ಶುದ್ಧ ಕುಡಿವ ನೀರಿನ ಘಟಕವನ್ನು 2016 ರಲ್ಲಿ ಸ್ಥಾಪಿಸಲಾಗಿದೆ. ಗುಣಮಟ್ಟದ ಮಿಷನರಿ ಸಾಮಾನು ಅಳವಡಿಸದ ಕಾರಣ ನೀರಿನ ಘಟಕ ಪದೇ ಪದೇ ಕೆಟ್ಟು ಹೋಗುತ್ತಿದೆ ಎನ್ನಲಾಗಿದೆ.
ಕೆಟ್ಟು ಹೋಗಿರುವ ಶುದ್ಧ ಕುಡಿವ ನೀರಿನ ಘಟಕವನ್ನು ದುರಸ್ತಿ ಮಾಡಿಸಲು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದಿದ್ದರೂ ಇದುವರೆಗೂ ದುರಸ್ತಿ ಮಾಡಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಘಟಕದಲ್ಲಿರುವ ವಸ್ತುಗಳು ತುಕ್ಕು ಹಿಡಿಯುತ್ತಾ ಸಾಗಿವೆ. ಈಗಾಗಲೇ ಒಂದೆರಡು ಬಾರಿ ಏಜೆನ್ಸಿ ಯವರು ದುರಸ್ತಿ ಮಾಡಿದ್ದು, ದುರಸ್ತಿ ಮಾಡಿರುವ ಬಿಲ್ ನೀಡದೇ ಇರುವುದರಿಂದ ಅವರು ದುರಸ್ತಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ಗ್ರಾಮದ ಕೆಲವರ ಆರೋಪವಾಗಿದೆ.ಕಂದಿಕೆರೆ ಗ್ರಾಮದಲ್ಲೂ ಸಹ ಕುಡಿವ ನೀರಿನ ಘಟಕ ಕೆಟ್ಟಿದ್ದು, ಅದರಲ್ಲಿರುವ ಯಂತ್ರಗಳು ತುಂಬಾ ಹಳೆಯವಾಗಿವೆ ಎನ್ನಲಾಗಿದೆ. ಎರಡೂ ಗ್ರಾಮಗಳ ಘಟಕಗಳ ಪರಿಸ್ಥಿತಿ ತಿಳಿಯಲು ಕರೆ ಮಾಡಿದರೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎರಡೂ ಘಟಕಗಳು ಸರಿ ಇವೆ ಎಂದು ಸುಳ್ಳು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ. ಇವೆರಡೇ ಗ್ರಾಮಗಳಲ್ಲ, ತಾಲೂಕಿನ ಬಹುತೇಕ ಹಳ್ಳಿಗಳ ಶುದ್ಧ ಕುಡಿವ ನೀರಿನ ಘಟಕಗಳ ಪರಿಸ್ಥಿತಿ ಚಿಂತಾಜನಕವಾಗಿದೆ.
----ಫೋಟೊ: 1,2 ತಾಲೂಕಿನ ಯರಬಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿಗೆ ಬಂದಿರುವುದು.