ಸಾರಾಂಶ
ಬಳ್ಳಾರಿ: ಬೇಸಿಗೆ ಹಿನ್ನೆಲೆಯಲ್ಲಿ ವಿವಿಧ ತಾಲೂಕು ಹಾಗೂ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆ ಸಮಪರ್ಕವಾಗಿರಬೇಕು ಹಾಗೂ ನಿರ್ವಹಣೆಯಲ್ಲಿ ಯಾವುದೇ ಲೋಪವಾಗುವಂತಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆಯಾದಲ್ಲಿ ನೀರಿನ ಟ್ಯಾಂಕರ್ ಇರಿಸಿಕೊಳ್ಳಬೇಕು. ಅಗತ್ಯ ಮೇವಿನ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಬರಬಹುದಾದಂತಹ ಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಿಗೆ ಆಯಾ ತಾಲ್ಲೂಕು ತಹಶೀಲ್ದಾರರು, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಗರಸಭೆ, ಪುರಸಭೆ ಹಾಗೂ ಪಪಂ ಮುಖ್ಯಾಧಿಕಾರಿಗಳು ಭೇಟಿ ನಡೆಸಬೇಕು ಎಂದು ನಿರ್ದೇಶನ ನೀಡಿದರು.ಗ್ರಾಮೀಣ ಭಾಗಗಳಲ್ಲಿ ಆರ್‌ಓ ಘಟಕಗಳನ್ನು ಶುದ್ಧಗೊಳಿಸಿಟ್ಟುಕೊಳ್ಳಬೇಕು. ಕುಡಿಯುವ ನೀರು ಎಲ್ಲೂ ಕಲುಷಿತಗೊಳ್ಳದಂತೆ ಎಚ್ಚರ ವಹಿಸಬೇಕು. ಮುಖ್ಯವಾಗಿ ಬಳ್ಳಾರಿ ತಾಲ್ಲೂಕಿನ ಹಲಕುಂದಿ, ಹೊನ್ನಳ್ಳಿ, ಹೊನ್ನಳ್ಳಿ ತಾಂಡಾ ಗ್ರಾಮಗಳಲ್ಲಿ ಉಲ್ಬಣವಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಾಲೂಕು ತಹಶೀಲ್ದಾರರಿಗೆ ಸೂಚಿಸಿದರು.
ಅಧಿಕಾರಿಗಳೊಂದಿಗೆ ಸಮನ್ವಯತೆ ಇರಲಿ:ಕುಡಿಯುವ ನೀರು ಪೂರೈಕೆ ಸಂಬಂಧಿಸಿದಂತೆ ವಿದ್ಯುತ್ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಜೆಸ್ಕಾಂ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಬೇಕು. ನಿಗದಿತ ಅವಧಿಯೊಳಗೆ ಸಮಸ್ಯೆ ಪರಿಹರಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ತಿಳಿಸಿದರು.ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಹಿನ್ನೆಲೆ ಸರ್ಕಾರಿ ಕಚೇರಿಗಳ ಸಮಯವು ಬದಲಾಗಿರುವುದರಿಂದ ಅವಶ್ಯಕತೆ ಬಂದಾಗ ಸಮಯ ಮೀರಿಯೂ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಉದಾಸೀನತೆ ತೋರುವಂತಿಲ್ಲ ಎಂದು ಎಚ್ಚರಿಸಿದರು.
ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಮಾತನಾಡಿ, ಆಯಾ ಗ್ರಾಪಂ ಮಟ್ಟದಲ್ಲಿನ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಗಳ ಭರ್ತಿಗೆ ಕ್ರಮವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ಕುರಿತು ಅಧಿಕಾರಿಗಳು ವ್ಯಾಟ್ಸ್ ಆಪ್ ಗುಂಪು ರಚಿಸಿ ಎಲ್ಲರೂ ಜಂಟಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಪ್ರಮೋದ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಇಂದುಧರ್, ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರ ರಂಗನಾಥಬಾಬು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.