ಹಾನಗಲ್ಲಿಗೆ 6 ದಿನಕ್ಕೊಮ್ಮೆ ಕುಡಿವ ನೀರು ಪೂರೈಕೆ, ಸದ್ಯಕ್ಕಿಲ್ಲ ಪರಿಹಾರ

| Published : Aug 12 2025, 12:30 AM IST

ಹಾನಗಲ್ಲಿಗೆ 6 ದಿನಕ್ಕೊಮ್ಮೆ ಕುಡಿವ ನೀರು ಪೂರೈಕೆ, ಸದ್ಯಕ್ಕಿಲ್ಲ ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಈಗ ಧರ್ಮಾ ಜಲಾಶಯದಿಂದ ₹೩೮ ಕೋಟಿ ವೆಚ್ಚದಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆ ಕಾಮಗಾರಿ ಜಾರಿಯಲ್ಲಿದೆ.

ಮಾರುತಿ ಶಿಡ್ಲಾಪೂರ

ಹಾನಗಲ್ಲ: ಪುರಸಭೆ ಮಾನ್ಯತೆ ಪಡೆದಿರುವ ಪಟ್ಟಣದ ೩೩ ಸಾವಿರ ಜನರ ೩ ಸಾವಿರ ಮನೆಗಳಿಗೆ ೬ ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಇದರ ನಡುವೆ ನಿತ್ಯ ನೀರು ಕೊಡುವ ಕನಸು ಬಿಟ್ಟು, ಕನಿಷ್ಠ ೨- ೩ ದಿನಕ್ಕೊಮ್ಮೆಯಾದರೂ ನೀರು ಕೊಡಿ ಎಂದು ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ.

ಪಟ್ಟಣದಲ್ಲಿ ಅಧಿಕೃತ ೪೬೦೦ ನಳಗಳಿವೆ. ಅನಧಿಕೃತ ನಳಗಳ ಸರ್ವೆ ಕೂಡ ನಡೆಯಬೇಕಿದೆ. ಇವುಗಳಲ್ಲಿ ೩೫ ಮಾತ್ರ ಸಾರ್ವಜನಿಕ ನಳಗಳು. ೭೫ ಮಿನಿ ವಾಟರ್‌ಸಪ್ಲಾಯ್ ವ್ಯವಸ್ಥೆಗಳಿವೆ. ಪಟ್ಟಣಕ್ಕೆ ಕುಡಿಯುವ ನೀರೊದಗಿಸಲು ೧೧೩ ಕೊಳವೆ ಬಾವಿಗಳಿವೆ. ಆನಿಕೆರೆಯಿಂದ ಕೊರತೆ ಇಲ್ಲದಂತೆ ನೀರಿನ ಸರಬರಾಜು ಇದೆ. ಇಷ್ಟಾಗಿಯೂ ಸಾರ್ವಜನಿಕರು ಕುಡಿಯುವ ನೀರಿಗಾಗಿ ಕಾಯುತ್ತ ಕುಳಿತುಕೊಳ್ಳುವ ಅನಿವಾರ್ಯತೆ ಹಾಗೂ ಇದಕ್ಕೆ ಪರಿಹಾರದ ಲಕ್ಷಣಗಳು ಮಾತ್ರ ಸದ್ಯಕ್ಕಿಲ್ಲ ಎಂಬ ಸತ್ಯಕ್ಕೆ ಸೋಲಬೇಕಾಗಿದೆ.ಅನಿಕೆರೆಯಿಂದ ನೀರು ಶುದ್ಧೀಕರಣ ಘಟಕಕ್ಕೆ ನೀರು ಪೂರೈಸಲು ಎರಡು ಮೋಟರ್‌ಗಳಿವೆ. ಆದರೆ ಒಂದು ಮೋಟರ್ ಹಲವು ಕಾಲದಿಂದ ಕೆಲಸ ನಿರ್ವಹಿಸುತ್ತಿಲ್ಲ. ಇದಕ್ಕೆ ಮೋಟರ್ ಅಳವಡಿಸಲು ₹೪೦ ಲಕ್ಷ ಬೇಕು ಎಂದು ಅಂದಾಜಿಸಲಾಗಿದೆ. ಅದಕ್ಕಾಗಿ ಟಿಂಡರ್ ಆಗಿದೆ. ಇಷ್ಟರಲ್ಲೇ ಮೋಟಾರ್ ಬರುತ್ತದೆ ಎಂಬುದು ಅಧಿಕಾರಿಗಳ ಹೇಳಿಕೆ. ಸದ್ಯ ಒಂದೇ ಪಂಪಿನಿಂದ ನೀರು ಸರಬರಾಜು ಆಗುತ್ತಿದೆ. ಅದು ಕೈಕೊಟ್ಟರೆ ಪಟ್ಟಣಕ್ಕೆ ನೀರಿಲ್ಲ. ಅದನ್ನು ಸುಧಾರಿಸಿಕೊಳ್ಳಲು ಮತ್ತೆ ವಾರಗಳೇ ಬೇಕು. ಇದರ ನಡುವೆ ವಿದ್ಯುತ್ ಕಣ್ಣಾಮುಚ್ಚಾಲೆಯೂ ಸೇರಿದರೆ ನೀರು ಕೇಳುವವರು ಗಂಟಲು ಆರುವವರೆಗೆ ಬೇಡುವುದೇ ಆಗುತ್ತಿದೆ.೬ ದಿನಗಳಿಗೊಮ್ಮೆ ನೀರು ಬಿಡುವಂತಾಗಲು ಕಾರಣ ಇಲ್ಲಿನ ನವನಗರದಲ್ಲಿರುವ ಫಿಲ್ಟರ್ ಬೆಡ್ ಸಾಮರ್ಥ್ಯದ ಸಮಸ್ಯೆ ಎನ್ನುತ್ತಾರೆ. ೨೦೦೪-೦೫ರಲ್ಲಿ ನಿರ್ಮಾಣವಾದ ನೀರು ಶುದ್ಧೀಕರಣ ಘಟಕವದು. ಅದರ ಸಾಮರ್ಥ್ಯ ೫೪ ಲಕ್ಷ ಲೀಟರ್ ನೀರು ಶುದ್ಧಗೊಳಿಸುವುದಾಗಿದೆ. ಆದರೆ ೨೦ ವರ್ಷದ ಹಿಂದಿನದ್ದಾಗಿದ್ದರಿಂದ ಸಾಮರ್ಥ್ಯ ಕುಗ್ಗಿದೆ, ೩೦ ಸಾವಿರ ಲೀಟರ್ ಶುದ್ಧೀಕರಣವಾಗುತ್ತಿದೆ. ಇದರಿಂದ ಪಟ್ಟಣಕ್ಕೆ ೬ ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿದೆ. ಪ್ರತಿ ನಿತ್ಯ ನೀರು ಸರಬರಾಜು ಮಾಡಲು ಕನಿಷ್ಠ ೫೦ ಲಕ್ಷ ಲೀಟರ್ ಕುಡಿಯುವ ನೀರು ಶುದ್ಧೀಕರಣ ಆಗಬೇಕು.ಈಗ ಧರ್ಮಾ ಜಲಾಶಯದಿಂದ ₹೩೮ ಕೋಟಿ ವೆಚ್ಚದಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆ ಕಾಮಗಾರಿ ಜಾರಿಯಲ್ಲಿದೆ. ಇದರೊಂದಿಗೆ ನಿತ್ಯ ೯೦ ಲಕ್ಷ ಲೀಟರ್ ನೀರು ಶುದ್ಧೀಕರಣವೂ ಆಗುತ್ತದೆ. ಇದಕ್ಕಾಗಿ ಮತ್ತೆ ೧೫ ಲಕ್ಷ ಲೀಟರ್ ನೀರಿನ ಸಂಗ್ರಹಕ್ಕೆ ನೆಲಮಟ್ಟದ ಜಲಾಗಾರ ಕಟ್ಟಡ ನಿರ್ಮಾಣವೂ ಆಗಲಿದೆ. ಇದೆಲ್ಲ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಇನ್ನೂ ಒಂದು ವರ್ಷ ಕಾಯಬೇಕು. ಅಲ್ಲಿಯವರೆಗೆ ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜಿನಲ್ಲಿ ಇದೇ ಸ್ಥಿತಿ ಮುಂದುವರಿಯುವುದೇ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.

ಮೂರು ದಿನಕ್ಕೊಮ್ಮೆ ನೀರು: ಹಾನಗಲ್ಲ ಪಟ್ಟಣಕ್ಕೆ ಕೊರತೆ ಇಲ್ಲದಂತೆ ನೀರು ಕೊಡಲು ಎಲ್ಲ ಯತ್ನ ನಡೆದಿದೆ. ಸಿಬ್ಬಂದಿಯ ಕೊರತೆ ನಡುವೆಯೂ ೧೪ ಹೊರಗುತ್ತಿಗೆ ಸಿಬ್ಬಂದಿಯಿಂದ ಕೆಲಸ ನಡೆಯುತ್ತಿದೆ. ಧರ್ಮಾ ಜಲಾಶಯದ ನೀರು ಬೇಗ ತರಲು ಎಲ್ಲ ಪ್ರಯತ್ನ ನಡೆದಿದೆ. ಆದಾಗ್ಯೂ ಸದ್ಯಕ್ಕೆ ೩ ದಿನಕ್ಕೊಮ್ಮೆಯಾದರೂ ಕುಡಿಯುವ ನೀರು ಕೊಡಲು ಯತ್ನಿಸಲಾಗುವುದು ಎಂದು ಪುರಸಭೆ ಎಂಜಿನಿಯರ್ ನಾಗರಾಜ ಮಿರ್ಜಿ ತಿಳಿಸಿದರು.

ನೀರು ಬರಲಿಲ್ಲ: ಹೊರದೇಶದಲ್ಲಿರುವ ಭಾರತೀಯರಾದ ನಾವು ರಜೆಗೆಂದು ನಮ್ಮೂರಿಗೆ ಬಂದರೆ ೬- ೭ ದಿನಗಳಿಗೊಮ್ಮೆ ನೀರು ಬಿಡುವುದನ್ನು ಸಹಿಸಿಕೊಳ್ಳಲಾಗಲಿಲ್ಲ. ಕೊನೆಗೆ ಯಾರದೋ ಬಾವಿಯಿಂದ ಮೋಟರ್ ಹಚ್ಚಿ ಟ್ಯಾಂಕ್‌ಗೆ ನೀರು ಏರಿಸಲಾಯಿತು. ಆದರೂ ಪುರಸಭೆ ನೀರು ಬರಲಿಲ್ಲ. ವರಮಹಾಲಕ್ಷ್ಮಿ ಹಬ್ಬಕ್ಕೆ ಬಂದ ನಮಗೆ ನೀರಿನ ಕೊರತೆಯೇ ಘಾಸಿ ಮಾಡಿತು. ಇದು ಬದಲಾಗಬೇಕು ಎಂದು ಅನಿವಾಸಿ ಭಾರತೀಯರಾದ ಕಿರಣ ತಿಳಿಸಿದರು.