ಕೃಷ್ಣಮೃಗ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ

| Published : Apr 02 2025, 01:02 AM IST

ಕೃಷ್ಣಮೃಗ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ಅಭಯಾರಣ್ಯವು ಒಟ್ಟು 11,950 ಹೆಕ್ಟೇರ್ ವ್ಯಾಪ್ತಿ ಹೊಂದಿದ್ದು, 2015ರ ಸೆಪ್ಟೆಂಬರ್ ವರದಿ ಪ್ರಕಾರ 7100ಕ್ಕೂ ಅಧಿಕ ಕೃಷ್ಣಮೃಗ, ಜಿಂಕೆ ಹಾಗೂ ಕಾಡುಹಂದಿ, ಗುಳ್ಳೆನರಿ, ತೋಳ, ನರಿ, ಕತ್ತೆಕಿರುಬ ಹಾಗೂ ನೂರಾರು ಬಗೆಯ ಪಕ್ಷಿಗಳು ಅಭಯಾರಣ್ಯದಲ್ಲಿ ಆಶ್ರಯ ಪಡೆದುಕೊಂಡಿವೆ.

ಬಸವರಾಜ ಸರೂರರಾಣಿಬೆನ್ನೂರು: ಪ್ರಸಕ್ತ ವರ್ಷ ಬೇಸಿಗೆ ಪ್ರಾರಂಭದಲ್ಲಿಯೇ ವಾತಾವರಣದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಕೆಲವು ಕಡೆ ಮನುಷ್ಯರು ನೀರಿಗಾಗಿ ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ಕೃಷ್ಣಮೃಗ ಅಭಯಾರಣ್ಯದಲ್ಲಿನ ವನ್ಯಜೀವಿಗಳಿಗೆ ತೊಂದರೆಯಾಗಬಾರದು ಎಂಬ ಚಿಂತನೆಯಿಂದ ವನ್ಯಧಾಮದ ಪ್ರದೇಶದಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ.ಅಭಯಾರಣ್ಯವು ಒಟ್ಟು 11,950 ಹೆಕ್ಟೇರ್ ವ್ಯಾಪ್ತಿ ಹೊಂದಿದ್ದು, 2015ರ ಸೆಪ್ಟಂಬರ್ ವರದಿ ಪ್ರಕಾರ 7100ಕ್ಕೂ ಅಧಿಕ ಕೃಷ್ಣಮೃಗ, ಜಿಂಕೆ ಹಾಗೂ ಕಾಡುಹಂದಿ, ಗುಳ್ಳೆನರಿ, ತೋಳ, ನರಿ, ಕತ್ತೆಕಿರುಬ ಹಾಗೂ ನೂರಾರು ಬಗೆಯ ಪಕ್ಷಿಗಳು ಅಭಯಾರಣ್ಯದಲ್ಲಿ ಆಶ್ರಯ ಪಡೆದುಕೊಂಡಿವೆ. ಆಗಾಗ ಚಿರತೆಗಳು ಕಾಣಸಿಗುತ್ತಿವೆ.ನೀರಿನ ವ್ಯವಸ್ಥೆ: ಸದ್ಯ ಬಿಸಿಲಿನ ಪ್ರಖರತೆಗೆ ಅಭಯಾರಣ್ಯದಲ್ಲಿರುವ ಕೆರೆ, ಹೊಂಡಗಳಲ್ಲಿ ನೀರಿಲ್ಲ. ಇದರಿಂದ ಮುಂಜಾಗ್ರತೆ ವಹಿಸಿದ ಅರಣ್ಯ ಅಧಿಕಾರಿಗಳು ಪ್ರಾಣಿಗಳಿಗೆ ಸಮರ್ಪಕ ನೀರು ಒದಗಿಸುವ ನಿಟ್ಟಿನಲ್ಲಿ ಕೃಷ್ಣಮೃಗ ಅಭಯಾರಣ್ಯ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ 35 ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಅವುಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ ಪ್ರಾಣಿಗಳ ದಾಹ ತೀರಿಸಲು ಮುಂದಾಗಿದ್ದಾರೆ.ನೀರಿಗಾಗಿ ಹೊರಹೋಗದಂತೆ ಕ್ರಮ: ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ನೀರು ಹಾಗೂ ಆಹಾರ ದೊರಕದ ಕಾರಣ ಪ್ರಾಣಿಗಳು ರೈತರ ಜಮೀನುಗಳತ್ತ ಮುಖ ಮಾಡುತ್ತಿವೆ. ಬೇಸಿಗೆ ದಿನಗಳಲ್ಲಂತೂ ಕೃಷ್ಣಮೃಗಗಳಿಗೆ ಹಸಿರು ಕಾಣುವುದು ಕಷ್ಟಕರವಾಗುತ್ತದೆ. ಆದ್ದರಿಂದ ಅವು ಸುತ್ತಮುತ್ತಲಿನ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ತಿನ್ನುತ್ತಿವೆ. ಇನ್ನು ರೈತರ ಜಮೀನಿಗೆ ಬೆಳೆ ಹಾಳು ಮಾಡಬಾರದು ಎನ್ನುವ ಉದ್ದೇಶದಿಂದ ತೊಟ್ಟಿಗಳಲ್ಲಿ ನೀರು ಹಾಕಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಕೃಷ್ಣಮೃಗ ಹಾಗೂ ಜಿಂಕೆಗಳನ್ನು ಹುಡುಕಿಕೊಂಡು ಬರುವ ಚಿರತೆಗಳು ಆಕಳು, ನಾಯಿ, ಎತ್ತುಗಳ ಮೇಲೆ ದಾಳಿ ಮಾಡುತ್ತಿವೆ ಎಂಬುದು ಅರಣ್ಯ ಪ್ರದೇಶ ಅಂಚಿನ ಜಮೀನುಗಳ ರೈತರ ಆರೋಪವಾಗಿದೆ.

ಸೂಕ್ತ ಕ್ರಮವಾಗಲಿ: ಕೃಷ್ಣಮೃಗ ಅಭಯಾರಣ್ಯದಲ್ಲಿ ಪ್ರಾಣಿಗಳಿಗೆ ಪೂರಕವಾದ ಯಾವುದೇ ವಾತಾವರಣವಿಲ್ಲ. ಅಲ್ಲಿ ಹಸಿರೇ ಕಾಣುತ್ತಿಲ್ಲ. ಪ್ರಾಣಿಗಳಿಗೆ ಮೇವು ಸಿಗುತ್ತಿಲ್ಲ. ಇದರಿಂದಾಗಿ ಪ್ರಾಣಿಗಳು ರೈತರ ಜಮೀನುಗಳತ್ತ ಮುಖ ಮಾಡುತ್ತಿವೆ. ಈ ಕುರಿತು ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ರೈತ ಡಿಳ್ಳೇಪ್ಪ ಕಂಬಳಿ ಆಗ್ರಹಿಸಿದರು.ಅಗತ್ಯ ಕ್ರಮ: ವನ್ಯಧಾಮದಲ್ಲಿ ಕೃಷ್ಣಮೃಗಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದ್ದು, ಅಲ್ಲಲ್ಲಿ ತೊಟ್ಟಿಗಳನ್ನು ನಿರ್ಮಿಸಿ ನೀರನ್ನು ತುಂಬಿಸಲಾಗುತ್ತಿದೆ. ದಿನಕ್ಕೆ ಎರಡ್ಮೂರು ಬಾರಿ ಎಲ್ಲ ತೊಟ್ಟಿಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ಇದರಿಂದ ಪ್ರಾಣಿಗಳು ವನ್ಯಧಾಮ ಬಿಟ್ಟು ಹೊರಹೋಗದಂತೆ ತಡೆದಂತಾಗುತ್ತದೆ ಎಂದು ರಾಣಿಬೆನ್ನೂರು ವನ್ಯಜೀವಿ ವಲಯದ ಎಸಿಎಫ್ ಸತೀಶ ಪೂಜಾರ ತಿಳಿಸಿದರು.