ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ವಿಜಯನಗರ ಜಿಲ್ಲೆಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಜನರು ನೀರಿಗಾಗಿ ಪರದಾಡುವ ಸ್ಥಿತಿ ತಲೆದೋರಿದೆ.ಕೆರೆ, ಹಳ್ಳ, ಕೊಳ್ಳಗಳು ಬತ್ತಿ ಹೋಗಿರುವುದರಿಂದ ಅಂತರ್ಜಲ ಮಟ್ಟ ಕೂಡಾ ಕುಸಿದಿದೆ. ಹಾಗಾಗಿ ಈಗ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರು ಪೂರೈಕೆ ಮಾಡುವ ಸ್ಥಿತಿ ಬಂದೊದಗಿದೆ.
ತುಂಗಭದ್ರಾ ಜಲಾಶಯದಲ್ಲೂ ನೀರು ಪಾತಾಳಕ್ಕೆ ಕುಸಿದಿದೆ. ಇನ್ನೊಂದೆಡೆ ಜಲ ಮೂಲಗಳನ್ನು ಸಂರಕ್ಷಿಸುವ ಕಾರ್ಯ ಜಿಲ್ಲೆಯಲ್ಲಿ ಮೊದಲಿನಿಂದಲೂ ಆಗಿಲ್ಲ. ಕೆರೆಗಳಲ್ಲಿ ನೀರು ಉಳಿಸಿ, ನೀರು ಸಂಗ್ರಹಣೆ ಮಾಡಿಕೊಂಡು ಬೇಸಿಗೆಯಲ್ಲಿ ನೀರು ಪೂರೈಸುವ ಕಾರ್ಯ ಮೊದಲಿನಿಂದಲೂ ಮಾಡಲಾಗಿಲ್ಲ. ಈಗ ಭೀಕರ ಬರಗಾಲದಲ್ಲಿ ಬೇಸಿಗೆ ಬಿರು ಬಿಸಿಲಿನ ಹೊಡೆತದಲ್ಲಿ ಕುಡಿಯುವ ನೀರು ಸಿಗದೇ ಜನರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.ನಿರ್ಲಕ್ಷ್ಯ:
ಜಿಲ್ಲೆಯ ಹೊಸಪೇಟೆಯಲ್ಲಿ ತುಂಗಭದ್ರಾ ಜಲಾಶಯ ಇರುವ ಹಿನ್ನೆಲೆಯಲ್ಲಿ ಕುಡಿವ ನೀರಿನ ವಿಷಯದಲ್ಲಿ ಮೊದಲಿನಿಂದಲೂ ನಿರ್ಲಕ್ಷ್ಯವಿದೆ. ಜಲಾಶಯ 105.788 ಟಿಎಂಸಿ ಸಂಗ್ರಹ ಸಾಮರ್ಥ್ಯವಿದೆ. ಆದರೆ, ಆಂಧ್ರಪ್ರದೇಶ, ತೆಲಂಗಾಣ, ರಾಜ್ಯದ ಬಳ್ಳಾರಿ, ಕೊಪ್ಪಳ, ವಿಜಯನಗರ, ರಾಯಚೂರು ಜಿಲ್ಲೆಗಳಿಗೂ ನೀರು ಹಂಚಿಕೆ ಮಾಡಬೇಕು. ಇದೆಲ್ಲ ಗೊತ್ತಿದ್ದರೂ ವಿಜಯನಗರ ಜಿಲ್ಲೆಯ ಕುಡಿಯುವ ನೀರಿಗೆ ಶೇಖರಿಸುವ ಯೋಜನೆ ರೂಪಿಸಲಾಗಿಲ್ಲ. ಜಲಾಶಯ ಇದೆ ಎಂಬ ನಿರ್ಲಕ್ಷ್ಯವೇ ಈಗ ಜಿಲ್ಲೆಯಲ್ಲಿ ಕುಡಿವ ನೀರಿಗೂ ಹಾಹಾಕಾರ ಪಡುವ ಸ್ಥಿತಿ ಬಂದೊದಗಿದೆ.ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿ ಸೇರಿ ಸುತ್ತಮುತ್ತಲಿನ ಗ್ರಾಮಗಳು, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಹಳ್ಳಿಗಳಲ್ಲಿ ಸಮಸ್ಯೆ ಉಲ್ಬಣಿಸಿದೆ. ಹೂವಿನಹಡಗಲಿ, ಕೊಟ್ಟೂರು, ಕೂಡ್ಲಿಗಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಪಟ್ಟಣ, ತಾಲೂಕುಗಳಲ್ಲಿ ಮಧ್ಯರಾತ್ರಿಯೇ ಎದ್ದು ನೀರು ಹಿಡಿಯುವ ಸ್ಥಿತಿ ಇದೆ.
ಖಾಸಗಿ ಬೋರ್‌ವೆಲ್‌ಗಳೇ ಆಸರೆ:ಜಿಲ್ಲೆಯಲ್ಲಿ ಈಗಾಗಲೇ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಅವಶ್ಯವಿದ್ದ ಕಡೆಗೆ ಖಾಸಗಿ ಬೋರ್‌ವೆಲ್‌ಗಳನ್ನು ಪಡೆದು ನೀರು ಸರಬರಾಜು ಮಾಡಲು 138 ಗ್ರಾಮಗಳಲ್ಲಿ 170 ಖಾಸಗಿ ಬೋರ್‌ವೆಲ್ ಪಡೆದು ನೀರು ಪೂರೈಸಲಾಗುತ್ತಿದೆ. ಭದ್ರಾ ಜಲಾಶಯದಿಂದ ಈಗಾಗಲೇ ತುಂಗಭದ್ರಾ ನದಿಗೆ ನೀರು ಹರಿಸಲಾಗಿದ್ದು, ಹರಪನಹಳ್ಳಿಯ ಗರ್ಭಗುಡಿಯ ಜಾಕ್‌ವೆಲ್‌ಗೆ ನೀರು ಬಂದಿದೆ. ಸಿಂಗಟಾಲೂರಿಗೆ ನೀರು ಬಂದು, ಬಳಿಕ ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿಗೂ ನೀರು ಹರಿಸಬೇಕಿದೆ. ನೀರನ್ನು ಮಿತವಾಗಿ ಬಳಸಿದರೆ ನೀರಿನ ಬವಣೆ ನೀಗಲಿದೆ.
ಉದ್ಘಾಟನೆ ಭಾಗ್ಯ ಕಾಣದ ಟ್ಯಾಂಕ್:ಹೊಸಪೇಟೆ ತಾಲೂಕಿನ ಕಡ್ಡಿರಾಂಪುರದಲ್ಲಿ ಕುಡಿವ ನೀರಿಗಾಗಿ ಮಧ್ಯರಾತ್ರಿ ಎದ್ದು ನೀರಿಗಾಗಿ ಕಾದು ಕುಳಿತುಕೊಳ್ಳುವ ಸ್ಥಿತಿ ಇದೆ. ಗ್ರಾಮದವರು ಬೆಳಗ್ಗೆ ಉದ್ಯೋಗ ಖಾತ್ರಿ ಕೂಲಿ ಕೆಲಸ ಸೇರಿದಂತೆ ವಿವಿಧೆಡೆ ಕೆಲಸಕ್ಕೆ ತೆರಳುತ್ತಾರೆ. ಈ ಗ್ರಾಮದ ಸಮಸ್ಯೆ ಬಗ್ಗೆ ಗ್ರಾಪಂ ಮೊರೆ ಹೋದರೂ ಸಮಸ್ಯೆ ಬಗೆಹರಿದಿಲ್ಲ. ಹೊಸ ಟ್ಯಾಂಕ್ ನಿರ್ಮಾಣ ಮಾಡಿ ಒಂಬತ್ತು ವರ್ಷ ಕಳೆದರೂ ಇದುವರೆಗೆ ಉದ್ಘಾಟನೆ ಭಾಗ್ಯ ಕಂಡಿಲ್ಲ. ಟ್ಯಾಂಕ್‌ಗೆ ನೀರು ಪೂರೈಕೆ ಮಾಡಲು ಪೈಪ್‌ಲೈನ್ ಅಳವಡಿಕೆ ಮಾಡಿಲ್ಲ. ಕಡ್ಡಿರಾಂಪುರ ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದಾರೆ.
ತುಂಗಭದ್ರಾ ಜಲಾಶಯ ಭರ್ತಿಯಾಗದ್ದರಿಂದ ಈ ಬಾರಿ ಜಿಲ್ಲೆಯಲ್ಲೂ ಕುಡಿವ ನೀರಿನ ಸಮಸ್ಯೆ ಉಂಟಾಗಿದೆ. ಭದ್ರಾದಿಂದ ಬಿಟ್ಟಿರುವ ನೀರನ್ನು ಮಿತವಾಗಿ ಬಳಸಿದರೆ ನೀರಿನ ಸಮಸ್ಯೆ ಬಗೆಹರಿಯಲಿದೆ. ಅಧಿಕಾರಿಗಳು ಖಾಸಗಿ ಬೋರ್‌ವೆಲ್ ಸೇರಿ ಜಲಮೂಲ ಗುರುತಿಸಿ ಕ್ರಮವಾಗಬೇಕು ಎನ್ನುತ್ತಾರೆ ರೈತ ಸಂಘದ ಜಿಲ್ಲಾಧ್ಯಕ್ಷ (ವಾಸುದೇವ ಮೇಟಿ ಬಣ) ಸಿ.ಎ. ಗಾಳೆಪ್ಪ.