ಸಾರಾಂಶ
ಕನ್ನಡಪ್ರಭ ವಾರ್ತೆ, ಕಡೂರು
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಮುಗಿದ ಬಳಿಕ ನಮ್ಮ ಕಡೂರು ವಿಧಾನಸಭಾ ಕ್ಷೇತ್ರದ 66,300 ಎಕರೆ ಭೂಮಿಗೆ ಹನಿ ನೀರಾವರಿ ಪ್ರಯೋಜನ ಸಿಗಲಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.ನಾಗಗೊಂಡನಹಳ್ಳಿಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ಚಿತ್ರದುರ್ಗ ವಲಯ ಮುಖ್ಯ ಎಂಜಿನಿಯರ್ ಎಫ್.ಎಚ್. ಲಮಾಣಿ ಅವರೊಂದಿಗೆ ಮೇಲ್ದಂಡೆ ಪಂಪ್‍ಹೌಸ್ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿ ಕೇಂದ್ರ ಸರ್ಕಾರ 2023ರ ಬಜೆಟ್‍ನಲ್ಲಿ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ₹5300 ಕೋಟಿ ಒದಗಿಸುವುದಾಗಿ ಹೇಳಿದ್ದ ಭದ್ರಾ ಮೇಲ್ದಂಡೆಗೆ ನ್ಯಾಯ ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದ್ದರಿಂದ ಚಾಲನೆಯಲ್ಲಿದ್ದ ಕಾಮಗಾರಿ ಅದರ ನಿಯಮಗಳಿಗೆ ಅನುಸಾರವಾಗಿಯೇ ಯೋಜನೆ ಹಾದು ಹೋಗುವಲ್ಲಿ ಎಲ್ಲೆಡೆ ಹನಿ ನೀರಾವರಿಗೆ ಅವಕಾಶ, ಕೆರೆ-ಕಟ್ಟೆಗಳನ್ನು ತುಂಬಿಸಲು ಒತ್ತು ನೀಡಲಾಗಿದೆ. ಆದರೆ ರಾಜ್ಯದಲ್ಲಿ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ವಿಷಯವಾಗಿ ಕೇಂದ್ರ ನಕಾರಾತ್ಮಕ ಧೋರಣೆ ಅನುಸರಿಸಿದೆ. ಕೇಂದ್ರದ ನಿರ್ದೇಶನ ಪಾಲಿಸಿ ಕಾಮಗಾರಿ ಅನುಮೋದನೆ ಸಂದರ್ಭದಲ್ಲಿ ಶೇ.60ರಷ್ಟು ಹಣ ಹನಿ ನೀರಾವರಿಗೆ ಬಳಸಿಯಾಗಿದೆ. ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ ಎಂದು ರಾಜ್ಯ ಸರ್ಕಾರವೇನೂ ಕೈ ಚೆಲ್ಲಿಲ್ಲ. ಕಾಮಗಾರಿಗೆ ಅನುದಾನ ಕೊರತೆಯಾಗದಂತೆ ಹಣ ಬಿಡುಗಡೆ ಮಾಡಿ ಆಶಾ ಭಾವನೆಯಲ್ಲೆ ಇದೆ. ತಾಲೂಕಿನಲ್ಲಿ 3 ವಿಭಾಗಗಳಾದ ಯಗಟಿ, ಯಳ್ಳಂಬ ಳಸೆ ಮತ್ತು ಅಂತರಘಟ್ಟೆಗಳ ಪೈಕಿ ಯಗಟಿ ಭಾಗದ ಕಾಮಗಾರಿ ಹೊರತು ಪಡಿಸಿ ಶೇ.70ರಷ್ಟು ಕಾಮಗಾರಿ ಮುಕ್ತಾಯವಾಗಿದೆ ಎಂದರು. ಭದ್ರಾ ಮೇಲ್ದಂಡೆ ಯೋಜನೆ ₹21,432 ಕೋಟಿ ಪೈಕಿ ಕಡೂರು ಕ್ಷೇತ್ರ ವ್ಯಾಪ್ತಿಯಲ್ಲಿ ₹1,155 ಕೋಟಿ ವೆಚ್ಚದಲ್ಲಿ ಕಾಮಗಾರಿ ಚಾಲನೆಯಲ್ಲಿದೆ. ಕಡೂರಿಗೆ 2.40 ಟಿಎಂಸಿ ನೀರಿನ ಹಂಚಿಕೆಯಾಗಿದೆ. ತುಮಕೂರು ಶಾಖಾ ಕಾಲುವೆ ಹಾಗು ಚಿತ್ರದುರ್ಗ ಕಾಲುವೆಗಳ ಮುಖಾಂತರ 26842 ಹೆ. (66,300 ಎಕರೆ) ಭೂಮಿಗೆ ನೀರು ಹರಿಯಲಿದೆ. ಇದಕ್ಕಾಗಿ 30 ಪಂಪ್‍ಹೌಸ್‍ಗಳು ಕಾರ್ಯ ನಿರ್ವಹಿಸಲಿದೆ ಎಂದರು.
124 ಕೆರೆ-ಕಟ್ಟೆಗಳ ಪೈಕಿ ಸುಮಾರು 40 ದೊಡ್ಡ ಕೆರೆಗಳಿಗೆ ನೀರು ತುಂಬಿಸಲಾಗುವುದು. ಯಳ್ಳಂಬಳಸೆ ಭಾಗದಲ್ಲಿ ಸೀವಿಯೆಟ್ ನಿರ್ಮಾಣ ಕಂಪೆನಿ ₹383 ಕೋಟಿ ವೆಚ್ಚದಲ್ಲಿ ನಿರ್ವಹಿಸುತ್ತಿದೆ. ಅಂತರಘಟ್ಟೆ ಭಾಗದಲ್ಲಿ ₹249 ಕೋಟಿ ವೆಚ್ಚದಲ್ಲಿ ಮೆಗಾ ಎಂಜಿನಿಯರಿಂಗ್ ಕಂಪೆನಿ, ಯಗಟಿ ಭಾಗದಲ್ಲಿ ₹523ಕೋಟಿ ವೆಚ್ಚದಲ್ಲಿ ಓಷನ್ ಎಂಜಿನಿಯರಿಂಗ್ ಕಂಪೆನಿ ಕಾರ್ಯ ನಿರ್ವಹಿಸುತ್ತಿವೆ ಎಂದು ವಿವರ ನೀಡಿದರು. ರೈತರು ಪರಿಹಾರ ಧನಕ್ಕೆ ಒಪ್ಪಿಗೆ ಸಿಗದೆ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗಿ ನ್ಯಾಯಾಲಯ ದಲ್ಲಿ ವಜಾಗೊಂಡು ಮರು ಭೂಸ್ವಾಧೀನಕ್ಕೆ ಆದೇಶವಾಗಿದೆ. ಯಗಟಿ ವಲಯದಲ್ಲಿ ಕಾಮಗಾರಿ ಅನುಷ್ಟಾನ ವಿಳಂಬ ವಾಗಿದೆ. ಅದರಲ್ಲಿ ಯಳ ಗೊಂಡನಹಳ್ಳಿ, ಮತಿಘಟ್ಟ, ಕುರುಬರಹಳ್ಳಿ, ಅಣೀಗೆರೆ, ವೈ.ಮಲ್ಲಾಪುರ ಗ್ರಾಮಗಳ ಪೈಕಿ ಯಳಗೊಂಡನಹಳ್ಳಿ ಹೊರತುಪಡಿಸಿ ಬಾಕಿ 4 ಗ್ರಾಮಗಳ ರೈತರು ನೇರ ಖರೀದಿಗೆ ಒಪ್ಪಿಗೆಯಿದ್ದು 210 ಎಕರೆ ಭೂ ಸ್ವಾಧೀನವಾಗಲಿದೆ. ಈ ವಿಷಯ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ. ಸರ್ಕಾರ ರೈತರ ದರಕ್ಕೆ ಒಪ್ಪಿಗೆ ಸೂಚಿಸಿ ದರೆ ಪ್ರಕ್ರಿಯೆ ಸುಗಮವಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದ ಕಾಲಮಿತಿ ಮುಕ್ತಾಯಗೊಂಡಿದೆ. 2026ರ ಸೆಪ್ಟೆಂಬರ್ ಒಳಗೆ ಯೋಜನೆ ಸಂಪೂರ್ಣಗೊಳ್ಳಬೇಕು ಎಂದು ಸೂಚಿಸಿದ್ದು ಈ ವಿಷಯವಾಗಿ ಸರ್ಕಾರದ ಗಮನ ಸೆಳೆಯುತ್ತೇನೆ. ಯಗಟಿ ಭಾಗದಲ್ಲಿ ಕೆಲಸ ಆರಂಭಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಸಂಭಂದಪಟ್ಟ ಎಂಜಿನಿಯರಿಂಗ್ ಕಂಪನಿಗೆ ಸೂಚಿಸಿದ್ದಾರೆ. ಭದ್ರಾ ಮೇಲ್ದಂಡೆ ಮತ್ತು ಭದ್ರಾ ಉಪ ಕಣಿವೆ ಯೋಜನೆಗಳು ತಾಲೂಕಿನ ಕೃಷಿಕರಿಗೆ ವರದಾನವಾಗಿದ್ದು, ರೈತರು ಹಸನಾದ ಬದುಕು ಕಟ್ಟಿಕೊಳ್ಳಲು ಯೋಜನೆ ನೆರವಾಗಲಿದೆ ಎನ್ನುವುದು ತಮ್ಮ ಭರವಸೆ ಎಂದರು. ವಿಶ್ವೇಶ್ವರಯ್ಯ ಜಲ ನಿಗಮದ ಎಇಇ ಹರ್ಷ, ಎಂಜಿನಿಯರ್ ಗಳಾದ ಪ್ರವೀಣ್, ಮೋಹನ್‍ದಾಸ್, ಚೇತನ್, ಪುಟ್ಟರಾಜು, ಕರಿಬಸಪ್ಪ, ಪ್ರಾಜೆಕ್ಟ್ ಮ್ಯಾನೇಜರ್ ಹರೀಶ್‍ಕುಮಾರ್, ಪಂಚನಹಳ್ಳಿ ಪ್ರಸನ್ನ, ಬಾವಿಮನೆ ಮಧು, ವಸಂತಕುಮಾರ್, ಶಶಿಕುಮಾರ್, ರಾಜು, ವಿನಯ್ ವಳ್ಳು, ರವಿ ಸ್ಥಳೀಯ ರೈತರು, ಗ್ರಾಮಸ್ಥರು ಇದ್ದರು. --- ಬಾಕ್ಸ್--- " ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಮತ್ತು ದಾವಣಗೆರೆ ಜಿಲ್ಲೆಯ 11 ತಾಲೂಕುಗಳ 2.25 ಲಕ್ಷ ಹೆಕ್ಟೇರ್ ಭೂಮಿಗೆ ಸೂಕ್ಷ್ಮ ನೀರಾವರಿ ಕಲ್ಪಿಸುವ, 367 ಕೆರೆಗಳನ್ನು ತುಂಬಿಸುವ ಯೋಜನೆಯಾಗಿದೆ. 2018-19 ರ ದರಪಟ್ಟಿಯಲ್ಲಿ ₹21,432 ಕೋಟಿ ವೆಚ್ಚವಾಗಲಿದೆ. ಕೃಷ್ಣಾ ಕೊಳ್ಳದ ಅಡಿ ಬರುವ ಯೋಜನೆಗೆ ಈ 4 ಜಿಲ್ಲೆಗಳಿಗೆ 29.9 ಟಿಎಂಸಿ ನೀರು ಹಂಚಿಕೆಯಾಗಿದೆ.- ಎಫ್.ಎಚ್.ಲಮಾಣಿ,
ಚೀಫ್ ಎಂಜಿನಿಯರ್,ವಿಶ್ವೇಶ್ವರಯ್ಯ ಜಲನಿಗಮ, ಚಿತ್ರದುರ್ಗ ವಲಯ.4ಕೆಕೆಡಿಯು1.ಕಡೂರು ತಾಲೂಕು ನಾಗಗೊಂಡನಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪಂಪ್‍ಹೌಸ್ ನಿರ್ಮಾಣ ಕಾಮಗಾರಿಯನ್ನು ಶಾಸಕ ಕೆ.ಎಸ್.ಆನಂದ್, ವಿಶ್ವೇಶ್ವರಯ್ಯ ಜಲನಿಗಮದ ಚಿತ್ರದುರ್ಗ ವಲಯ ಮುಖ್ಯ ಎಂಜಿನಿಯರ್ ಎಫ್.ಎಚ್.ಲಮಾಣಿ ವೀಕ್ಷಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))