ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಮಿನಿವಿಧಾನಸೌಧದಲ್ಲಿನ ತಾಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಶನಿವಾರ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಭೂಸುರಕ್ಷಾ ಯೋಜನೆಯು ರಾಜ್ಯದ ಕಂದಾಯ ಇಲಾಖೆ ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆ. ಈ ಯೋಜನೆಯಡಿ ತಾಲೂಕು ಕಚೇರಿಯ ಅಭಿಲೇಖಾಲಯಗಳಲ್ಲಿರುವ ಅತ್ಯಂತ ಪ್ರಮುಖವಾದ ಹಳೆಯ ಮತ್ತು ಸ್ವಾತಂತ್ರ್ಯಪೂರ್ವದ ಭೂ ದಾಖಲೆಗಳನ್ನು ಇಂಡೆಕ್ಸಿಂಗ್, ಕ್ಯಾಟಲಾಗಿಂಗ್, ಸ್ಕ್ಯಾನಿಂಗ್ ಮತ್ತು ಅಪ್‌ಲೋಡಿಂಗ್ ಮಾಡಿ ಗಣಕೀಕರಣಗೊಳಿಸಲಾಗುತ್ತಿದೆ. ಹಳೆಯ ಶಿಥಿಲಗೊಂಡ ದಾಖಲೆಗಳನ್ನು ಶಾಶ್ವತವಾಗಿ ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳಲು ನಕಲಿ ದಾಖಲೆಗಳ ಸೃಷ್ಟಿಯನ್ನು ತಡೆಗಟ್ಟಲು ಮತ್ತು ಅವುಗಳನ್ನು ಆನ್‌ಲೈನ್‌ನಲ್ಲಿ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಭೂ ಸುರಕ್ಷಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಪ್ರಸ್ತುತ ೨೦೯ ತಾಲೂಕು ಕಚೇರಿಗಳಲ್ಲಿ ಭೂ ದಾಖಲೆಗಳ ಗಣಕೀಕರಣ ಕಾರ್ಯ ೨೦೨೫ ಜನವರಿಯಿಂದ ಆರಂಭಿಸಲಾಗುತ್ತಿದೆ. ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ಮೂರು ತಾಲೂಕು ಸೇರಿ ಅಖಂಡ ಬಸವನಬಾಗೇವಾಡಿ ತಾಲೂಕಿಗೆ ಸಂಬಂಧಿಸಿದ ಅಭಿಲೇಖಾಲಯದ ದಾಖಲೆಗಳ ಗಣಕೀಕರಣ ಕಾರ್ಯ ಆರಂಭವಾಗಲಿದೆ. ಇದು ಎಂಟು ತಿಂಗಳಲ್ಲಿ ಪೂರ್ಣಗೊಳಲಿದೆ. ದಾಖಲೆಗಳು ಗಣಕೀಕರಣಗೊಂಡರೆ ದಾಖಲೆಗಳು ನಶಿಸದೇ, ಬೆಂಕಿಗೆ ಬಿದ್ದು ಹಾಳಾಗುವದನ್ನು ತಡೆದು ಸುರಕ್ಷಿತವಾಗಿಡಬಹುದು. ಅಖಂಡ ಬಸವನಬಾಗೇವಾಡಿ ತಾಲೂಕಿಗೆ ಸಂಬಂಧಿಸಿದಂತೆ ಎ ಮತ್ತ ಬಿ ಕೆಟಗೇರಿಯ ಅಂದಾಜು ೬೮,೯೮೭ ಕಡತಗಳಿವೆ. ಕಡತಗಳ ಒಟ್ಟು ಪುಟಗಳು ಅಂದಾಜು ೧೮,೨೨,೩೦೮ ಗಳಿವೆ. ವಹಿಗಳು ೫,೩೮೯ ಗಳಿದ್ದು, ಅವುಗಳ ಅಂದಾಜು ೯,೪೮,೫೮೭ ಪುಟಗಳಾಗಲಿವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎಸಿ ಗುರುನಾಥ ದಡ್ಡೆ, ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ, ಕೊಲ್ಹಾರ ತಹಸೀಲ್ದಾರ್ ಎಸ್.ಎಸ್.ನಾಯಕಲ್ಲಮಠ, ನಿಡಗುಂದಿ ತಹಸೀಲ್ದಾರ್ ಎ.ಡಿ.ಅಮರವಾಡಗಿ, ಗ್ರೇಡ್-೨ ತಹಸೀಲ್ದಾರರಾದ ಜಿ.ಎಸ್.ನಾಯಕ, ಎಚ್.ಎನ್.ಬಡಿಗೇರ, ಎಡಿಎಲ್‌ಆರ್ ಜಿ.ಬಿ.ವಗ್ಗನವರ, ಭೂ ದಾಖಲೆಗಳ ಇಲಾಖೆ ವ್ಯವಸ್ಥಾಪಕ ಎ.ಬಿ.ಕಲಾದಗಿ, ಶಿರಸ್ತೇದಾರರಾದ ಬಿ.ಆರ್.ಪೊಲೇಶಿ, ಎಂ.ಡಿ.ಬಳಗಾನೂರ, ಎ.ಎಚ್.ಬಳೂರಗಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ, ಸಿಬ್ಬಂದಿ ರಾಜು ಇವಣಗಿ, ಶಂಕರ ತಳವಾರ, ಬಿ.ಜಿ.ದಾನಿ, ಅನಿಲ ಅವಟಿ, ಎಸ್.ಎಸ್.ದೇಸಾಯಿ, ಸಂತೋಷ ಕುಂಟೋಜಿ, ಜಗದೀಶ ಹಾರಿವಾಳ, ಬ್ಲಾಕ್ ಕಾಂಗ್ರೆಸ್ಅಧ್ಯಕ್ಷ ಸುರೇಶ ಹಾರಿವಾಳ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಬಸವೇಶ್ವರ ಅರ್ಬನ್ ಬ್ಯಾಂಕಿನ ನಿರ್ದೇಶಕ ಶಂಕರಗೌಡ ಬಿರಾದಾರ, ಪುರಸಭೆ ಸದಸ್ಯರಾದ ಜಗದೇವಿ ಗುಂಡಳ್ಳಿ, ನಜೀರ ಗಣಿ, ಪ್ರವೀಣ ಪೂಜಾರಿ, ಮುಖಂಡರಾದ ಸಂಗಮೇಶ ಓಲೇಕಾರ, ಜಟ್ಟಿಂಗರಾಯ ಮಾಲಗಾರ, ಪರಶುರಾಮ ಜಮಖಂಡಿ, ಮಹಾಂತೇಶ ಸಾಸಾಬಾಳ, ರವಿ ಬಾವಿಕಟ್ಟಿ, ಗುರುಲಿಂಗ ಬಸರಕೋಡ, ಸಂಗಯ್ಯ ಕಾಳಹಸ್ತೇಶ್ವರಮಠ, ಈಶ್ವರ ಜಾಧವ ಇದ್ದರು.