ಕಾರವಾರದಲ್ಲಿ ವಿಶಿಷ್ಟ ಲೈಂಗಿಕತೆ ಸಮುದಾಯದ ಸಮಾವೇಶಕ್ಕೆ ಚಾಲನೆ

| Published : Jan 29 2025, 01:30 AM IST

ಸಾರಾಂಶ

ಕಾರವಾರದ ಇಂದಿರಾಕಾಂತ ಸಭಾಗೃಹದಲ್ಲಿ ಕರ್ನಾಟಕ ರಾಜ್ಯ ಮಟ್ಟದ ವಿಶಿಷ್ಟ ಲೈಂಗಿಕತೆ ಸಮುದಾಯ ಸಂಘಟನೆಗಳ ಒಕ್ಕೂಟ ಹಾಗೂ ಅಂತರಂಗ ಸಂಸ್ಥೆಯ ವತಿಯಿಂದ ಮಂಗಳವಾರ ನಡೆದ ರಾಜ್ಯ ಮಟ್ಟದ ಸಮಾವೇಶಕ್ಕೆ ಚಾಲನೆ ನೀಡಲಾಯಿತು.

ಕಾರವಾರ: ಹಿಂದೆ ಕಾನೂನಿನ ವ್ಯಾಪ್ತಿಯಲ್ಲಿ ತೃತೀಯ ಲಿಂಗಿಗಳಿಗೆ ದತ್ತು ಪಡೆಯುವ ಆಯ್ಕೆ ಕೂಡ ಇರಲಿಲ್ಲ. ಇತ್ತೀಚೆಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ವಿಶೇಷ ಹಕ್ಕುಗಳನ್ನು ನೀಡಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ತಿಳಿಸಿದರು.ನಗರದ ಇಂದಿರಾಕಾಂತ ಸಭಾಗೃಹದಲ್ಲಿ ಕರ್ನಾಟಕ ರಾಜ್ಯ ಮಟ್ಟದ ವಿಶಿಷ್ಟ ಲೈಂಗಿಕತೆ ಸಮುದಾಯ ಸಂಘಟನೆಗಳ ಒಕ್ಕೂಟ ಹಾಗೂ ಅಂತರಂಗ ಸಂಸ್ಥೆಯ ವತಿಯಿಂದ ಮಂಗಳವಾರ ನಡೆದ ರಾಜ್ಯ ಮಟ್ಟದ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ವಿವಾಹ, ಆರೋಗ್ಯ, ದತ್ತು, ಮಾನಸಿಕ ಬೆಂಬಲ ನೀಡಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದೆ. ಆದರೆ ಇದರ ಪ್ರಯೋಜನ ಪಡೆಯುವವರ ಸಂಖ್ಯೆ ಕಡಿಮೆಯಿದೆ. ತೃತೀಯ ಲಿಂಗಿಗಳು ಮಾನಸಿಕ ತೊಳಲಾಟ, ಒತ್ತಾಯದ ವಿವಾಹ ಸೇರಿದಂತೆ ವಿವಿಧ ನೋವು ಅನುಭವಿಸುತ್ತಾರೆ. ಕೆಲವರು ಆತ್ಮಹತ್ಯೆ ಕೂಡಾ ಮಾಡಿಕೊಂಡಿದ್ದಾರೆ. ವಿಶಿಷ್ಟ ಲೈಂಗಿಕತೆ ಸಮುದಾಯದ ಜನರು ಶಿಕ್ಷಣ ಹಾಗೂ ಕಲೆ ಮೂಲಕ ಸಮಾಜವು ನಿಮ್ಮನ್ನು ಗುರುತಿಸುವಂತೆ ಮಾಡಬೇಕು ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿರೂಪಾಕ್ಷ ಗೌಡಪಾಟೀಲ, ಮಂಗಳಾ ಎಂ., ಸಾರಥ್ಯ ಸಂಸ್ಥೆ ಅಧ್ಯಕ್ಷ ಬಸವರಾಜ, ಮಂಜುನಾಥ, ಕೃಷ್ಣಮೂರ್ತಿ, ಅಂತರಂಗ ಸಂಸ್ಥೆಯ ಶ್ಯಾಮ್ ಮೊದಲಾದವರು ಇದ್ದರು.ಕಾಂಗ್ರೆಸ್ ಶಾಸಕರ ನಡುವೆ ಕಿತ್ತಾಟ ಮುಂದುವರಿಕೆ

ಕಾರವಾರ: ಅಧಿಕಾರಿಯ ವರ್ಗಾವಣೆ ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ನಡುವೆ ಕಿತ್ತಾಟ ಮುಂದುವರಿದಿದೆ.

ಈ ಬಾರಿ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ವಿರುದ್ಧ ಕಾರವಾರ ಶಾಸಕ ಸತೀಶ ಸೈಲ್ ಪರೋಕ್ಷವಾಗಿ ಕಿಡಿಕಾರಿದ್ದಾರೆ.ತಮ್ಮ ಗಮನಕ್ಕೆ ಇಲ್ಲದೆ ಹೆಸ್ಕಾಂನ ಎಇಇ ವೀರಣ್ಣ ಶೇಬಣ್ಣವರ್ ವರ್ಗಾವಣೆ ಮಾಡಿರುವುದಕ್ಕೆ ಸತೀಶ ಸೈಲ್ ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರೋಶನಿ ಅವರಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ನಾನು ಹಳಿಯಾಳ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತೇನಾ? ಹಾಗಿದ್ದರೆ ಹಳಿಯಾಳದವರು ನನ್ನ ಕ್ಷೇತ್ರದಲ್ಲಿ ಏಕೆ ಹಸ್ತಕ್ಷೇಪ ಮಾಡುತ್ತಾರೆ. ನನ್ನ ಕ್ಷೇತ್ರದಲ್ಲಿ ಬೇರೆಯವರು ಬಂದು ರಾಜಕೀಯ ಮಾಡುತ್ತಿದ್ದಾರೆ. ನಾವು ಜನರಿಂದ ಹೇಳಿಸಿಕೊಳ್ಳಬೇಕಾಗಿದೆ ಎಂದು ಸೈಲ್ ಅಸಮಾಧಾನ ವ್ಯಕ್ತಪಡಿಸಿದರು.ಈ ಕುರಿತು ಹೆಸ್ಕಾಂ ಹಿರಿಯ ಅಧಿಕಾರಿಗೂ ದೂರವಾಣಿ ಕರೆ ಮಾಡಿ ಅಸಮಾಧಾನ ಹೊರಹಾಕಿದರು. ಈ ಹಿಂದೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ವರ್ಗಾವಣೆಯಾದಾಗಲೂ ಕಾಂಗ್ರೆಸ್ ಶಾಸಕರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಈಗ ಬಹಿರಂಗವಾಗಿ ಹೇಳುವಂತಾಗಿದೆ.