ಡಿಸೆಂಬರ್‌ ೨ ರಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಚಾಲನೆ: ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ ಅಧಿಕಾರಿ ಎನ್.ಎಸ್.ರಾಮೇಗೌಡ

| Published : Dec 01 2024, 01:32 AM IST

ಡಿಸೆಂಬರ್‌ ೨ ರಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಚಾಲನೆ: ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ ಅಧಿಕಾರಿ ಎನ್.ಎಸ್.ರಾಮೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ತಾಲೂಕಿನ ಮಾಯಸಂದ್ರ ಟಿಬಿ ಕ್ರಾಸ್ ಬಳಿ ಡಿ.೨ ರಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಚಾಲನೆ ದೊರೆಯಲಿದೆ ಎಂದು ಆದಿಚುಂಚನಗಿರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮಾಜಿ ಕುಲಪತಿ ಎನ್.ಎಸ್.ರಾಮೇಗೌಡ ತಿಳಿಸಿದರು. ತುರುವೇಕೆರೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.

ಬಾಲಗಂಗಾಧರನಾಥ ಸ್ವಾಮೀಜಿ ಕನಸು । 300 ಎಕರೆ ಜಾಗದಲ್ಲಿ ನಿರ್ಮಾಣ

ಕನ್ನಡಪ್ರಭ ವಾರ್ತೆ ತುರುವೇಕೆರೆ

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ತಾಲೂಕಿನ ಮಾಯಸಂದ್ರ ಟಿಬಿ ಕ್ರಾಸ್ ಬಳಿ ಡಿ.೨ ರಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಚಾಲನೆ ದೊರೆಯಲಿದೆ ಎಂದು ಆದಿಚುಂಚನಗಿರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮಾಜಿ ಕುಲಪತಿ ಎನ್.ಎಸ್.ರಾಮೇಗೌಡ ತಿಳಿಸಿದರು.

ಪಟ್ಟಣದ ಮಯೂರ ಕಾನ್ವೆಂಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಯಸಂದ್ರ ಟಿಬಿ ಕ್ರಾಸ್ ಬಳಿ ಇರುವ ಅನಾಥಾಶ್ರಮದ ಬಳಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಸುಮಾರು ೩೦೦ ಎಕರೆ ಪ್ರದೇಶದಲ್ಲಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ತೆರೆಯಲಾಗುವುದು. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಬಹತ್ವದ ಸಂದೇಶವಾಗಿದೆ. ಇದುವರೆಗೂ ಸರ್ಕಾರ ಖಾಸಗಿಯವರಿಗೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ತೆರೆಯಲು ಅವಕಾಶ ನೀಡಿರಲಿಲ್ಲ. ಆದರೆ ಈಗ ಖಾಸಗಿಯವರೂ ಸಹ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ತೆರೆಯಲು ಅವಕಾಶ ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಬಹು ವರ್ಷಗಳ ಕನಸು:

ಭೈರವೈಕ್ಯರಾಗಿರುವ ಬಾಲಗಂಗಾಧರನಾಥ ಮಹಾಸ್ವಾಮಿಗಳು ಆಶಿಸಿದ್ದ ಬಹು ವರ್ಷಗಳ ಕನಸು ನನಸಾಗುವ ದಿನ ಬಂದಿದೆ. ಆರೋಗ್ಯ ಕ್ಷೇತ್ರಕ್ಕೆ ಆಧ್ಯತೆ ನೀಡಿದಂತೆ ಕೃಷಿ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕೆಂದು ಬಯಸಿ ಕೃಷಿ ಕಾಲೇಜು ಮುಂಜೂರಿಗೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಕೃಷಿ ವಿಶ್ವವಿದ್ಯಾಲಯ, ಖಾಸಗಿ ಕೃಷಿ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿರಲಿಲ್ಲ. ಸದ್ಯ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಾಲಾನಂದ ಸ್ವಾಮೀಜಿಯವರ ಸತತ ಶ್ರಮಕ್ಕೆ ಈಗ ಫಲ ಸಿಕ್ಕಿದೆ ಎಂದು ಹೇಳಿದರು.

ಪಿಯುಸಿ ನಂತರದಲ್ಲಿ ಈ ಶಿಕ್ಷಣವನ್ನು ಪಡೆಯಬಹುದಾಗಿದೆ. ನಾಲ್ಕು ವರ್ಷಗಳ ಅವಧಿಯ ಈ ಶಿಕ್ಷಣಕ್ಕೆ ಪ್ರತಿ ತರಗತಿಗೆ ಸುಮಾರು ೬೦ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಇದರಲ್ಲಿ ಶೇಕಡಾ ೫೦ ರಷ್ಟು ಸೀಟುಗಳು ರೈತರ ಮಕ್ಕಳಿಗೆ ಮೀಸಲಿದೆ. ಇದರಲ್ಲಿ ೩೬ ವಿದ್ಯಾರ್ಥಿಗಳನ್ನು ಸಿಇಟಿ ಮೂಲಕವೂ ೨೪ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ಮೂಲಕ ಕಾಲೇಜಿಗೆ ಸೇರ್ಪಡೆ ಮಾಡಬಹುದಾಗಿದೆ. ಈಗಾಗಲೇ ಹಲವಾರು ಸೀಟುಗಳು ಭರ್ತಿಯಾಗಿದೆ. ಇನ್ನೂ ಕೆಲವು ಸೀಟುಗಳು ಖಾಲಿ ಇವೆ. ತಾಲೂಕಿನ ರೈತರ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಡಿ.೨ ರಂದು ನಡೆಯುವ ಕೃಷಿ ವಿಜ್ಞಾನ ಕಾಲೇಜು ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಾಲಾನಂದ ಸ್ವಾಮೀಜಿ ವಹಿಸಲಿದ್ದಾರೆ. ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಮುಖ್ಯ ಅತಿಥಿಗಳಾಗಿ ಕೃಷಿ ಸಚಿವ ಚಲುವನಾರಾಯಣಸ್ವಾಮಿ, ಅತಿಥಿಗಳಾಗಿ ಶಾಸಕ ಎಂ.ಟಿ.ಕೃಷ್ಣಪ್ಪ, ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಉಪಕುಲಪತಿಗ ಡಾ.ಎಸ್.ವಿ.ಸುರೇಶ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಂ.ಎ.ಶೇಖರ್ ಸೇರಿದಂತೆ ವಿದ್ಯಾಲಯದ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕಾಲೇಜು ಪ್ರಾಚಾರ್ಯರಾದ ಶಿವಲಿಂಗೇಗೌಡರು, ನಾಗಮಂಗಲ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ರವೀಂದ್ರ, ಆದಿಚುಂಚನಗಿರಿ ವಿಶ್ವವಿದ್ಯಾನಿಯದ ಅಧಿಕಾರಿ ಚಂದ್ರೇಗೌಡ, ಪ್ರೊ.ಪುಟ್ಟರಂಗಪ್ಪ ಇದ್ದರು.