ದೇಶದಲ್ಲಿ ಸಾರಿಗೆ ಸೌಲಭ್ಯ ಒದಗಿಸುವಲ್ಲಿ ವಾ.ಕ.ರ.ಸಾ.ಸಂಸ್ಥೆ ಮೊದಲ ಸ್ಥಾನದಲ್ಲಿದೆ. ಪ್ರಯಾಣಿಕರ ಮತ್ತು ಕುಟುಂಬದವರ ಹಿತದೃಷ್ಟಿಯಿಂದ ಸುರಕ್ಷತೆಯಿಂದ ಚಾಲನೆ ಮಾಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹೇಳಿದರು.
ಹಾವೇರಿ: ದೇಶದಲ್ಲಿ ಸಾರಿಗೆ ಸೌಲಭ್ಯ ಒದಗಿಸುವಲ್ಲಿ ವಾ.ಕ.ರ.ಸಾ.ಸಂಸ್ಥೆ ಮೊದಲ ಸ್ಥಾನದಲ್ಲಿದೆ. ಪ್ರಯಾಣಿಕರ ಮತ್ತು ಕುಟುಂಬದವರ ಹಿತದೃಷ್ಟಿಯಿಂದ ಸುರಕ್ಷತೆಯಿಂದ ಚಾಲನೆ ಮಾಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹೇಳಿದರು.ನಗರದ ವಾ.ಕ.ರ.ಸಾ.ಸಂಸ್ಥೆಯ ಹಾವೇರಿ ಘಟಕದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2026 ಮತ್ತು ಇಂಧನ ಉಳಿತಾಯ ಮಾಸಿಕ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಾ.ಕ.ರ.ಸಾ.ಸಂಸ್ಥೆಯ ಸಾರಿಗೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಇದು ಉತ್ತಮ ಸಾರಿಗೆಯಾಗಿದೆ, ನನ್ನ ಶಾಲಾ ದಿನಗಳಿಂದ ವಾ.ಕ.ರ.ಸಾ. ಸಂಸ್ಥೆಯೊಂದಿಗೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಜಿ., ಅವರು ಮಾತನಾಡಿ, ಚಾಲನಾ ಸಿಬ್ಬಂದಿಗಳು ಅಪಘಾತ ಮತ್ತು ಅಪರಾಧ ರಹಿತ ಚಾಲನೆ ಮಾಡಿ, ಬೆಳ್ಳಿ ಮತ್ತು ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆಯುವ ಹಾಗೆ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.ಅಪಘಾತಗಳಿಂದ ಸಂಸ್ಥೆಗೆ ಆರ್ಥಿಕ ನಷ್ಟವಾಗುತ್ತದೆ. ಹಾಗಾಗಿ ನಮ್ಮ ಚಾಲಕರು ಅಪಘಾತ ರಹಿತ ಸೇವೆ ಮೂಲಕ ಇನ್ನೂ ಹೆಚ್ಚು ಜನಸ್ನೇಹಿ ಆಗಬೇಕು ಎಂದು ಕರೆ ನೀಡಿದ ಅವರು, ಇದೇ ಸಂದರ್ಭದಲ್ಲಿ ಹೊಸದಾಗಿ ಸಂಸ್ಥೆಗೆ ಚಾಲಕ ಹುದ್ದೆಗೆ ಆಯ್ಕೆಯಾದ ಚಾಲನಾ ಸಿಬ್ಬಂದಿಗಳಿಗೆ ಶುಭ ಕೋರಿದರು.ಸರ್ವೀಸ್ ಎಂಜಿನಿಯರ್ ಮುಕಂದರ್ ಅವರು, ಇಂಧನದ ಮಹತ್ವ ಮತ್ತು ವಾಹನಗಳ ಮೈಲೇಜ್ ಹೆಚ್ಚಿಸುವ ಕುರಿತು ಚಾಲನಾ ಸಿಬ್ಬಂದಿಗಳಿಗೆ ತಿಳುವಳಿಕೆ ನೀಡಿದರು. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಲಹೆ ನೀಡಿದರು. ವಿಭಾಗೀಯ ತಾಂತ್ರಿಕ ಅಭಿಯಂತರ ಕೆ.ಆರ್. ನಾಯ್ಕ ಅವರು, ಇಂಧನ ದ್ರವ ರೂಪದ ಬಂಗಾರವಾಗಿದ್ದು, ವಾಹನ ಚಾಲನಾ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು. ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ್ ಮಾತನಾಡಿ, ಪ್ರತಿ ವರ್ಷ ಅಪಘಾತದಿಂದಲೇ ಸುಮಾರು 2 ಲಕ್ಷ ಜನ ಮರಣ ಹೊಂದುತ್ತಾರೆ. ಸಂಸ್ಥೆಯ ಚಾಲಕರು ದಿನನಿತ್ಯದ ಕರ್ತವ್ಯದಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಅಪಘಾತ ರಹಿತ ಸೇವೆ ಸಲ್ಲಿಸುವುದರ ಮೂಲಕ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆ ಸಲ್ಲಿಸುವುದು ನಮ್ಮ ಆದ್ಯತೆಯಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿಭಾಗದ ಆಡಳಿತಾಧಿಕಾರಿ, ಉಗ್ರಾಣಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಟಿ.ಜೆ.ನದಾಫ, ಕೃಷ್ಣ ರಾಮಣ್ಣವರ, ಗೀತಾ ಸರ್ವೇದ, ಸುಪ್ರೀತ್ ಬೂದಿ, ಆರ್.ಎಸ್.ಮಾಸೂರು, ಕುಮಾರ, ಗಣೇಶ ಮತ್ತು ಘಟಕದ ಅನೇಕ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳು ಇದ್ದರು.ಘಟಕ ವ್ಯವಸ್ಥಾಪಕ ಪ್ರಶಾಂತ ಸಂಗ್ರೇಶಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಸಹಾಯಕ ಕಾರ್ಮಿಕ ಕಲ್ಯಾಣಾಧಿಕಾರಿ ಈರಪ್ಪ ಕಡ್ಲಿಮಟ್ಟಿ ವಂದಿಸಿದರು.