ಫೆ. 4ರಂದು ಕ್ರಾಂತಿವೀರ ಬ್ರಿಗೇಡ್‌ಗೆ ಚಾಲನೆ : ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ

| Published : Dec 17 2024, 01:01 AM IST / Updated: Dec 17 2024, 12:25 PM IST

ಸಾರಾಂಶ

ಕ್ರಾಂತಿವೀರ ಬ್ರಿಗೇಡ್‌ ರಾಜಕೀಯದಿಂದ ಹೊರತಾಗಿರುವ ಸಂಘಟನೆ. ಬರೀ ಹಿಂದೂಗಳ ರಕ್ಷಣೆ ಹಾಗೂ ಮಠ ಮಾನ್ಯಗಳ ಹಿತಕ್ಕಾಗಿ ಮಾತ್ರ ಈ ಸಂಘಟನೆ ಕೆಲಸ ಮಾಡಲಿದೆ. ರಾಜಕಾರಣಿಗಳು ಬರಬಹುದು. ಆದರೆ, ರಾಜಕಾರಣ ಈ ಸಂಘಟನೆಯಲ್ಲಿರುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ಹುಬ್ಬಳ್ಳಿ:  ಹಿಂದೂಗಳ ರಕ್ಷಣೆ ಹಾಗೂ ಮಠ ಮಾನ್ಯಗಳ ಹಿತಕ್ಕಾಗಿ ರಾಜ್ಯದಲ್ಲಿ "ಕ್ರಾಂತಿವೀರ ಬ್ರಿಗೇಡ್‌ " ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ವಿವಿಧ ಮಠಾಧೀಶರೇ ಸೇರಿಕೊಂಡು ಹುಟ್ಟುಹಾಕಿರುವ ಸಂಘಟನೆಯಿದು. ಫೆ. 4ರಂದು ಬಸವನ ಬಾಗೇವಾಡಿಯಲ್ಲಿ 1008 ಮಠಾಧೀಶರ ಪಾದಪೂಜೆ ಮೂಲಕ ಚಾಲನೆ ನೀಡಲಾಗುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಹಾಗೂ ಬ್ರಿಗೇಡ್‌ ಅಧ್ಯಕ್ಷರೂ ಆಗಿರುವ ವಿಜಯಪುರ ಜಿಲ್ಲೆಯ ಮಖಣಪುರದ ಶ್ರೀಸೋಮೇಶ್ವರ ಸ್ವಾಮೀಜಿ ತಿಳಿಸಿದರು.

ಕ್ರಾಂತಿವೀರ ಬ್ರಿಗೇಡ್‌ ಸಂಘಟನೆಯ ಸಭೆಯನ್ನು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆಸಿ ಸಂಘಟನೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ ಬಳಿಕ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇದು ರಾಜಕೀಯದಿಂದ ಹೊರತಾಗಿರುವ ಸಂಘಟನೆ. ಬರೀ ಹಿಂದೂಗಳ ರಕ್ಷಣೆ ಹಾಗೂ ಮಠ ಮಾನ್ಯಗಳ ಹಿತಕ್ಕಾಗಿ ಮಾತ್ರ ಈ ಸಂಘಟನೆ ಕೆಲಸ ಮಾಡಲಿದೆ. ರಾಜಕಾರಣಿಗಳು ಬರಬಹುದು. ಆದರೆ, ರಾಜಕಾರಣ ಈ ಸಂಘಟನೆಯಲ್ಲಿರುವುದಿಲ್ಲ. ಮಠಾಧೀಶರೇ ಅಧ್ಯಕ್ಷರು, ಇತರೆ ಪದಾಧಿಕಾರಿಗಳು ಇರುತ್ತಾರೆ. ಕ್ರಾಂತಿವೀರ ಬ್ರಿಗೇಡ್‌ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿದ್ದಲ್ಲ. ನಾಡಿನ ವಿವಿಧ ಸಮಾಜದ 100 ಮಠಾಧೀಶರು ಇದರ ಸದಸ್ಯರಾಗಿದ್ದಾರೆ. ಈ ಪೈಕಿ 25 ಸ್ವಾಮೀಜಿಗಳ ನೇತೃತ್ವದಲ್ಲಿ ಬ್ರಿಗೇಡ್ ರೂಪಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಹಿಂದುತ್ವದ ಅಸ್ತಿತ್ವಕ್ಕೆ ಧಕ್ಕೆ ಬಂದಾಗಲೆಲ್ಲ ಕ್ರಾಂತಿವೀರ ಬ್ರಿಗೇಡ್ ಹೋರಾಟ ನಡೆಸಲಿದೆ ಎಂದರು.

ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಇತ್ತೀಚಿಗೆ ಒಂದು ಮಠದ ಆಸ್ತಿಯು ವಕ್ಫ್‌ ಬೋರ್ಡ್‌ಗೆ ಹೋಗಿತ್ತು. ಆ ದೇವಸ್ಥಾನದ ಆಡಳಿತ ಮಂಡಳಿ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಆಗ ಎಲ್ಲ ಮಠಾಧೀಶರು ಸೇರಿಕೊಂಡು ಹೋಗಿ ಅಲ್ಲಿನ ಜಿಲ್ಲಾಧಿಕಾರಿಗೆ ತಕ್ಷಣವೇ ಉತಾರದಲ್ಲಿನ ವಕ್ಫ್‌ ಹೆಸರನ್ನು ತೆಗೆದುಹಾಕಬೇಕು ಇಲ್ಲವೇ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದೇವೆ. ಅಲ್ಲಿಂದ ಆಳಂದಕ್ಕೆ ಬರುವಷ್ಟರಲ್ಲೇ ಉತಾರದಲ್ಲಿನ ಆ ಹೆಸರು ಇಲ್ಲದಂತೆ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದರು. ಹೀಗಾಗಿಯೇ ಸಂಘಟನೆಗೆ ಬಹುದೊಡ್ಡ ಶಕ್ತಿಯಿದೆ. ಈ ಹಿನ್ನೆಲೆಯಲ್ಲಿ ಈ ಸಂಘಟನೆ ಹುಟ್ಟುಹಾಕಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಫೆ. 4ರಂದು ರಥಸಪ್ತಮಿ ಇದೆ. ಅದೇ ದಿನದಂದೇ ಸಮಾವೇಶ ನಡೆಯಲಿದೆ. ವಿವಿಧ 1008 ಮಠಾಧೀಶರು ಅಂದಿನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಪೂಜೆ ಮಾಡುವ ಮೂಲಕ ಸಂಘಟನೆಗೆ ಚಾಲನೆ ನೀಡಲಾಗುವುದು ಎಂದರು.

ದೀನ ದಲಿತರು, ನೊಂದವರು ಮತ್ತು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಸಂಘಟನೆ ಹುಟ್ಟಿಕೊಂಡಿದೆ. ಮಠಾಧೀಶರಾದ ನಾವು ಯಾವುದೇ ರಾಜಕೀಯ ಪಕ್ಷದ ಜತೆಗೆ ಹೋಗುವವರಲ್ಲ. ಧರ್ಮ, ನ್ಯಾಯದ ಪರ ಹೋರಾಟ ಮಾಡುವ ಮೂಲಕ ಮಾದರಿ ಬ್ರಿಗೇಡ್‌ ಇದಾಗಲಿದೆ ಎಂದು ಶ್ರೀಗಳು ಹೇಳಿದರು.

ವಿಜಯಪುರ, ಗದಗ, ಬೆಳಗಾವಿ, ಧಾರವಾಡ, ಬಾಗಲಕೋಟೆ ಸೇರಿದಂತೆ ರಾಜ್ಯಾದ್ಯಂತ ವಕ್ಫ್‌ನಿಂದ ಆದ ಅನ್ಯಾಯವನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ನಮ್ಮ ಕಾರ್ಯಕ್ಕೆ ಈಶ್ವರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ. ಸಂಘಟನೆಗೆ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಕ್ರಾಂತಿವೀರ ಬ್ರಿಗೇಡ್‌ ಖಜಾಂಚಿ ಮಧುಲಿಂಗ ಮಹಾರಾಜರು, ಸದಸ್ಯರಾದ ಶಿವಕುಮಾರ ಸ್ವಾಮೀಜಿ, ಜಗದೀಶಾನಂದ ಸ್ವಾಮೀಜಿ, ಕೃಷ್ಣಾನಂದ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಇದ್ದರು.