ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಅಧಿಕಾರದಲ್ಲಿದ್ದಾಗ ಸದಾವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಜನರಿಗೆ ಮುಟ್ಟಿಸಬೇಕು, ಆಗ ನಾವು ಜನನಾಯಕ ಆಗುವ ಬದಲು ಜನರ ನಾಯಕ ಆದಂತಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಅಧಿಕಾರದಲ್ಲಿದ್ದಾಗ ಸದಾವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಜನರಿಗೆ ಮುಟ್ಟಿಸಬೇಕು, ಆಗ ನಾವು ಜನನಾಯಕ ಆಗುವ ಬದಲು ಜನರ ನಾಯಕ ಆದಂತಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.ನಗರದ ಹೊರವಲಯದ ಸೋಲಾಪುರ ರಸ್ತೆಯ ಕನ್ನಾಳ ಕ್ರಾಸ್ ಬಳಿ ಬಿ.ಆರ್.ನಂದೈಗೋಳ ಹಾಗೂ ಬಿ.ಆರ್.ಚೌಕಿಮಠ ಸಹಭಾಗಿತ್ವದಲ್ಲಿ ನಿರ್ಮಾಣವಾದ ಲಲಿತಾಂಬಿಕಾ ಶೀತಲ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಬಚಾವತ್ ತೀರ್ಪಿನ ಅಧಿಸೂಚನೆ ಬರುವವರೆಗೆ ಕಾಯುತ್ತ ಕುಳಿತರೆ ವಿಜಯಪುರ ಜಿಲ್ಲೆಗೆ ಕೃಷ್ಣೆಯ ನೀರು ಇನ್ನೂ ಬರುತ್ತಿರಲಿಲ್ಲ, ಆದರೂ ಧೈರ್ಯ ತೋರಿಸಿ ಶ್ರಮಿಸಿದ್ದರ ಪರಿಣಾಮ ಇಂದು ವಿಜಯಪುರ ಜಿಲ್ಲೆಗೆ ನೀರು ಹರಿಸಿ ಬಂಗಾರದ ಭೂಮಿಯನ್ನಾಗಿ ಮಾಡಿದ ತೃಪ್ತಿ ನನಗಿದೆ. ಆ ಮೂಲಕ ಶ್ರೀಸಿದ್ದೇಶ್ವರ ಸ್ವಾಮೀಜಿಯವರ ಆಸೆ ಪೂರೈಸಿದಂತಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಎಂದು ಸ್ಮರಿಸಿದರು.
ಬಿ.ಆರ್.ಚೌಕಿಮಠ ಮಾತನಾಡಿ, ಘಟಕದ ಶೇಖರಣೆಯ ಸಾಮರ್ಥ್ಯ, ಘಟಕದಲ್ಲಿ ಸಂಗ್ರಹಿಸಬಹುದಾದ ಆಹಾರ ಸಾಮಗ್ರಿ, ಘಟಕವೂ ಒದಗಿಸುವ ಸಾಲ ಸೌಲಭ್ಯ, ವಿಮಾ ಸೌಲಭ್ಯದ ಕುರಿತು ಮಾತನಾಡಿದರು.ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ರೈತರ ಹಿತ ಕಾಪಾಡುವಲ್ಲಿ ಎಲ್ಲಾ ಸರ್ಕಾರಗಳು ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಶ್ರಮಿಸಬೇಕಾಗಿದೆ ಎಂದರು.
ಶಾಸಕ ವಿಠ್ಠಲ ಕಟಕದೋಂಡ ಮಾತನಾಡಿ, ಇಂತಹ ಹೆಚ್ಚಿನ ಘಟಕಗಳು ನಿರ್ಮಾಣವಾಗಿ ರೈತರಿಗೆ ಪೂರಕವಾಗುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ ಎಂದು ಹೇಳಿದರು.ಎಕ್ಸಲೆಂಟ್ ಸ್ಥಾಪಕ ಶಿವಾನಂದ ಕೆಲೂರ ಸ್ವಾಗತಿಸಿದರು. ಖ್ಯಾತ ವೈದ್ಯ ಡಾ.ಬಾಬುರಾಜೇಂದ್ರ ನಾಯಿಕ ನಿರೂಪಿಸಿದರು. ಅಭಿಷೇಕ್ ಚೌಕಿಮಠ ವಂದಿಸಿದರು.
ಜಿ.ಕೆ.ಗೋಟ್ಯಾಳ, ಹಮೀದ್ ಮುಶ್ರಿಫ್, ಬಾಬುಗೌಡ ಬಿರಾದಾರ, ಬಿ.ಆರ್.ನಂದೈಗೋಳ, ರಾಮಕೃಷ್ಣ, ಉದಯಕುಮಾರ, ಶಿವನಗೌಡ ಬಿರಾದಾರ, ರೈತರಾದ ಸಿದ್ದು ಗೌಡನ್ನವರ, ಆನಂದ ಬಂಡಿ, ವಿಜಯಕುಮಾರ ವಸ್ತ್ರದ, ಡಾ.ಆನಂದ ಹಿರೇಮಠ, ವಿಜಯಕುಮಾರ ಹವಾಲ್ದಾರ, ವಿಕ್ರಮ್ ವಸ್ತ್ರದ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.