ನಿಡಘಟ್ಟ ಬಳಿ ಮೈಸೂರು ಚಲೋ ಬೃಹತ್ ಪಾದಯಾತ್ರೆಗೆ ಚಾಲನೆ

| Published : Aug 07 2024, 01:01 AM IST

ಸಾರಾಂಶ

ಬೆಂಗಳೂರು -ಮೈಸೂರು ಹಳೆ ಹೆದ್ದಾರಿ ಮೂಲಕ ನಡೆದು ಬಂದ ಪಾದಯಾತ್ರಿಗಳಿಗೆ ಸ್ಥಳೀಯ ಮೈತ್ರಿ ಕಾರ್ಯಕರ್ತರು ಅಲ್ಲಲ್ಲಿ ಅರವಟ್ಟಿಗಳನ್ನು ತೆರೆದು ಬಾಯಾರಿಕೆ ನೀಗಿಸಲು ನೀರು, ಕಲ್ಲಂಗಡಿ ಹಣ್ಣು ಮತ್ತು ಸೌತೆಕಾಯಿ ಹಾಗೂ ಕಾಫಿ, ಟೀ ನೀಡಿ ಉಪಚರಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಹಮ್ಮಿಕೊಂಡಿದ್ದ ಮೈಸೂರು ಚಲೋ ಬೃಹತ್ ಪಾದಯಾತ್ರೆಗೆ ಮಂಗಳವಾರ ಮಂಡ್ಯ ಜಿಲ್ಲೆಯ ಗಡಿಭಾಗ ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಚಾಲನೆ ನೀಡಲಾಯಿತು.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ 4 ದಿನಗಳ ಪಾದಯಾತ್ರೆ ನಂತರ ತಾಲೂಕಿನ ನಿಡಘಟ್ಟದ ಸುಮಿತ್ರಾದೇವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ರಾತ್ರಿ ಕಾರ್ಯಕರ್ತರು ವಾಸ್ತವ್ಯ ಹೂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್‌, ಮಾಜಿ ಸಚಿವರಾದ ಅಶ್ವಥ್ ನಾರಾಯಣ, ಡಿ.ಸಿ.ತಮಣ್ಣ ಸೇರಿದಂತೆ ಮೈತ್ರಿ ಪಕ್ಷದ ನಾಯಕರು ಪಾದಯಾತ್ರೆಗೆ ಜಂಟಿ ಚಾಲನೆ ನೀಡಿದರು.

ನಂತರ ನಿಡಘಟ್ಟದಿಂದ ಹೊರಟ ಪಾದಯಾತ್ರೆಯಲ್ಲಿ ಕೀಲು ಬೊಂಬೆ, ಜಾನಪದ ಕಲಾತಂಡಗಳು ಪಾಲ್ಗೊಂಡು ಆಕರ್ಷಕ ಪ್ರದರ್ಶನ ನೀಡಿದರು. ರುದ್ರಾಕ್ಷಿ ಪುರ ಗೇಟ್, ಸೋಮನಹಳ್ಳಿ ಗ್ರಾಮಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಕಾರ್ಯಕರ್ತರು ಪಕ್ಷ ನಾಯಕರು ಮತ್ತು ಪಾದಯಾತ್ರೆಯಲ್ಲಿ ಆಗಮಿಸಿದ ಮೈತ್ರಿ ಕಾರ್ಯಕರ್ತರಿಗೆ ಪುಷ್ಪವೃಷ್ಟಿ ಗೈದು ಸ್ವಾಗತಿಸಿದರು. ಅಲ್ಲಲ್ಲಿ ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಮೆಚ್ಚಿನ ನಾಯಕರನ್ನು ಅಭಿನಂದಿಸಿದರು.

ಕೆಸ್ತೂರು ಕ್ರಾಸ್ ಅಡಿಗಾಸ್ ಹೋಟೆಲ್ ಬಳಿ ಹುಳುಗನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನಂದೀಶ್ ಗೌಡ ನೇತೃತ್ವದಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಬಿ.ವೈ.ವಿಜಯೇಂದ್ರ, ನಿಖಿಲ್ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಪಕ್ಷದ ನಾಯಕರಿಗೆ ಕ್ರೇನ್ ಮೂಲಕ ಬೃಹತ್ ಗಾತ್ರದ ಗುಲಾಬಿ ಮತ್ತು ಮಲ್ಲಿಗೆ ಹಾರ ಹಾಕಿ ಅಭಿನಂದಿಸಿದರು.

ನಂತರ ಬೆಂಗಳೂರು -ಮೈಸೂರು ಹಳೆ ಹೆದ್ದಾರಿ ಮೂಲಕ ನಡೆದು ಬಂದ ಪಾದಯಾತ್ರಿಗಳಿಗೆ ಸ್ಥಳೀಯ ಮೈತ್ರಿ ಕಾರ್ಯಕರ್ತರು ಅಲ್ಲಲ್ಲಿ ಅರವಟ್ಟಿಗಳನ್ನು ತೆರೆದು ಬಾಯಾರಿಕೆ ನೀಗಿಸಲು ನೀರು, ಕಲ್ಲಂಗಡಿ ಹಣ್ಣು ಮತ್ತು ಸೌತೆಕಾಯಿ ಹಾಗೂ ಕಾಫಿ, ಟೀ ನೀಡಿ ಉಪಚರಿಸಿದರು.

ಬಳಿಕ ಕೊಲ್ಲಿ ವೃತ್ತದ ಮೂಲಕ ಪೇಟೆ ಬೀದಿಯಲ್ಲಿ ಮೂಲಕಸಾಗಿ ಬಂದ ಮೈತ್ರಿ ನಾಯಕರುಗಳನ್ನು ಒಳಗೊಂಡ ಪಾದಯಾತ್ರೆಗೆ ಪ್ರವಾಸಿ ಮಂದಿರ ವೃತ್ತದ ಬಳಿ ಕಾರ್ಯಕರ್ತರು ಬೃಹತ್ ಸೇಬಿನ ಹಾರ ಹಾಕಿ ಅಭಿನಂದಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಸುರೇಶ್ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಮಾಜಿ ಅಧ್ಯಕ್ಷ ಉಮೇಶ್, ತಾಲೂಕ ಅಧ್ಯಕ್ಷ ಸಿ.ಕೆ. ಸತೀಶ್, ಮಹಿಳಾ ಘಟಕದ ಅಧ್ಯಕ್ಷ ಶ್ವೇತಾ. ಸೌಮ್ಯ, ಜಿ.ಎಸ್. ಮಹೇಂದ್ರ, ಎಂ.ಸಿ.ಸಿದ್ದು. ಮನು ಕುಮಾರ್ , ಮಾದನಾಯಕನಹಳ್ಳಿ ರಾಜಣ್ಣ, ಕೆ .ಟಿ. ಶೇಖರ್, ಎನ್ .ಆರ್.ಪ್ರಕಾಶ್. ಪುರಸಭಾ ಸದಸ್ಯರಾದ ಪ್ರಸನ್ನ, ಮಹೇಶ, ಸುಮಿತ್ರ ರಮೇಶ್, ಸೇರಿದಂತೆ ಮೈತ್ರಿ ಪಕ್ಷದ ಮುಖಂಡರು ಹಾಗೂ ವಿವಿಧ ಘಟಕ ಗಳು ಪದಾಧಿಕಾರಿಗಳು ಪಾಲ್ಗೊಂಡಿದ್ದರು.