ಸಾರಾಂಶ
ದಮ್ಮ ಚಕ್ರ ಪರಿವರ್ತನಾ ದಿನದ ನಿಮಿತ್ತ ಮಹಾರಾಷ್ಟ್ರದ ನಾಗಪುರದಲ್ಲಿರುವ ದೀಕ್ಷಾಭೂಮಿಗೆ ತೆರಳುವ ಯಾತ್ರೆಗೆ ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಚ್. ವಿ. ಮಂಜುನಾಥ ಚಾಲನೆ ನೀಡಿದರು.
ಹೊಸಪೇಟೆ: ದಮ್ಮ ಚಕ್ರ ಪರಿವರ್ತನಾ ದಿನದ ನಿಮಿತ್ತ ಮಹಾರಾಷ್ಟ್ರದ ನಾಗಪುರದಲ್ಲಿರುವ ದೀಕ್ಷಾಭೂಮಿಗೆ ತೆರಳುವ ಯಾತ್ರೆಗೆ ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಚ್. ವಿ. ಮಂಜುನಾಥ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ವಿಜಯನಗರ ಜಿಲ್ಲೆಯಿಂದ ಪ್ರತಿವರ್ಷ ದೀಕ್ಷಾಭೂಮಿಗೆ ತೆರಳಲು ಸಮಾಜ ಕಲ್ಯಾಣ ಇಲಾಖೆ ಎಸ್‌ಸಿ, ಟಿಎಸ್‌ಪಿ ಅನುದಾನದಲ್ಲಿ ಯಾತ್ರಾರ್ಥಿಗಳಿಗೆ ನೆರವು ನೀಡುತ್ತದೆ. ನಾಲ್ಕು ದಿನಗಳ ಈ ಯಾತ್ರೆಯಲ್ಲಿ ಯಾತ್ರಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ವಿಜಯನಗರ ಜಿಲ್ಲೆಯಿಂದ ಒಟ್ಟು 444 ಅರ್ಜಿಗಳು ಬಂದಿದ್ದು, ಇದರಲ್ಲಿ 114 ಯಾತ್ರಾರ್ಥಿಗಳನ್ನು ನಿಯಮಾನುಸಾರ ಆಯ್ಕೆ ಮಾಡಲಾಗಿದೆ ಎಂದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಖ್ ಅಹ್ಮದಿ , ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಎ. ಚಿದಾನಂದ ಮತ್ತು ಎನ್. ಶರಣಪ್ಪ, ಮುಖಂಡ ಯಲ್ಲಪ್ಪ, ಯಾತ್ರೆ ಉಸ್ತುವಾರಿ ಸಂತೋಷ್, ರೂಟ್ ಇನ್‌ಚಾರ್ಜ್ ಮಲ್ಲಿಕಾರ್ಜುನ, ವಾರ್ಡನ್ ಮಲ್ಲಿಕಾರ್ಜುನ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತಿತರರಿದ್ದರು.
ಮಹಾರಾಷ್ಟ್ರದ ನಾಗಪುರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು 1956ರಲ್ಲಿ ವಿಜಯದಶಮಿ ದಿನ 5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕಾರ ಮಾಡಿದರು. ಕನಿಷ್ಠ 50 ಲಕ್ಷ ಜನ ದೇಶದ ಮೂಲೆ ಮೂಲೆಗಳಿಂದ ವಿಜಯ ದಶಮಿಯ ಈ ಸಂದರ್ಭದಲ್ಲಿ ದೀಕ್ಷ ಭೂಮಿಗೆ ತೆರಳುತ್ತಾರೆ.ದೀಕ್ಷಾಭೂಮಿ ಯಾತ್ರೆಗೆ ಹರಪನಹಳ್ಳಿಯಲ್ಲಿ ಚಾಲನೆ:
ಹರಪನಹಳ್ಳಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರು ದೀಕ್ಷೆ ಪಡೆದ ಮಹಾರಾಷ್ಟ್ರದ ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಹೊರಟ 30 ಅಂಬೇಡ್ಕರ್ ಅನುಯಾಯಿಗಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಗುರುವಾರ ಪಟ್ಟಣದಲ್ಲಿ ಚಾಲನೆ ನೀಡಿ ಶುಭ ಹಾರೈಸಿದರು. ಸಮಾಜ ಕಲ್ಯಾಣ ಇಲಾಖೆಯ ಕಚೇರಿ ವ್ಯವಸ್ಥಾಪಕಿ ಯಾಸ್ಮೀನ್, ಎನ್.ಜಿ. ಬಸವರಾಜ, ಮತ್ತೂರು ಬಸವರಾಜ ಹಾಗೂ ಅಂಬೇಡ್ಕರ್ ಅನುಯಾಯಿಗಳು ಇದ್ದರು.