ಪ್ರತಿ ಗ್ರಾಮಗಳಲ್ಲಿ ಪಡಿತರ ವಿತರಣಾ ಕೇಂದ್ರಕ್ಕೆ ಚಾಲನೆ: ಶಾಸಕ ಮಾನೆ

| Published : Jan 29 2024, 01:32 AM IST

ಪ್ರತಿ ಗ್ರಾಮಗಳಲ್ಲಿ ಪಡಿತರ ವಿತರಣಾ ಕೇಂದ್ರಕ್ಕೆ ಚಾಲನೆ: ಶಾಸಕ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಸಣ್ಣ ಗ್ರಾಮಗಳಲ್ಲಿಯೂ ಪಡಿತರ ವಿತರಣಾ ಕೇಂದ್ರ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಹೊಸದಾಗಿ ೨೫ಕ್ಕೂ ಹೆಚ್ಚು ಕೇಂದ್ರಗಳು ಆರಂಭವಾಗಲಿವೆ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಹತ್ತಿರದಲ್ಲಿಯೇ ಪಡಿತರ ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ ತಾಲೂಕಿನಲ್ಲಿ ಸಣ್ಣ ಗ್ರಾಮಗಳಲ್ಲಿಯೂ ಪಡಿತರ ವಿತರಣಾ ಕೇಂದ್ರ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಹೊಸದಾಗಿ ೨೫ಕ್ಕೂ ಹೆಚ್ಚು ಕೇಂದ್ರಗಳು ಆರಂಭವಾಗಲಿವೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಕಲಕೇರಿ ತಾಂಡಾ ಗ್ರಾಮದಲ್ಲಿ ಇತ್ತೀಚೆಗೆ ಆಹಾರ, ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆಯ ನೂತನ ನ್ಯಾಯಬೆಲೆ ಅಂಗಡಿ ಉದ್ಘಾಟಿಸಿ ಅವರು ಮಾತನಾಡಿದರು. ೫೦೦ಕ್ಕಿಂತ ಹೆಚ್ಚು ಪಡಿತರ ಕಾರ್ಡುಗಳಿದ್ದಲ್ಲಿ ಅವುಗಳನ್ನು ಬೇರ್ಪಡಿಸಿ, ಹೊಸ ಪಡಿತರ ವಿತರಣಾ ಕೇಂದ್ರ ಆರಂಭಿಸಲಾಗುತ್ತಿದೆ. ಕೆಲಸ, ಕಾರ್ಯಗಳನ್ನೆಲ್ಲ ಬದಿಗೊತ್ತಿ ಹೇರೂರು ಗ್ರಾಮಕ್ಕೆ ತೆರಳಿ ಪಡಿತರ ತರುತ್ತಿದ್ದ ಕಲಕೇರಿ ತಾಂಡಾದ ನಿವಾಸಿಗಳಿಗೆ ಇನ್ನು ಮುಂದೆ ಸ್ವಗ್ರಾಮದಲ್ಲಿಯೇ ಪಡಿತರ ಸಿಗಲಿದೆ ಎಂದರು.

ದೇಶದ ಜನ ನೆಮ್ಮದಿಯಿಂದ ಎರಡು ಹೊತ್ತು ಊಟ ಮಾಡಲಿ ಎನ್ನುವ ಉದ್ದೇಶದಿಂದ ಇಂದಿರಾ ಗಾಂಧಿ ಅವರ ಕಾಲದಲ್ಲಿ ಪಡಿತರ ವಿತರಣೆ ವ್ಯವಸ್ಥೆ ಆರಂಭಗೊಂಡಿದೆ. ರಿಯಾಯತಿ ದರದಲ್ಲಿ ಪಡಿತರ ದೊರೆಯುತ್ತಿತ್ತು. ೨೦೧೩ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿದ್ದಾಗ ಉಚಿತವಾಗಿ ಅಕ್ಕಿ ವಿತರಿಸುವ ವ್ಯವಸ್ಥೆ ಜಾರಿಗೆ ತಂದರು ಎಂದು ನೆನಪಿಸಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಮುಖ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಗಳಿಗೆ ಪ್ರತಿ ತಿಂಗಳು ಕನಿಷ್ಠ ₹ ೪ ಸಾವಿರ ನೆರವು ನೀಡುತ್ತಿದೆ. ಅಕ್ಕಿ ಕೊರತೆಯ ಹಿನ್ನೆಲೆಯಲ್ಲಿ ೫ ಕೆಜಿ ಅಕ್ಕಿಯ ಬದಲಿಗೆ ಕುಟುಂಬದ ಯಜಮಾನಿಯ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದೆ ಎಂದರು.

ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ಅಕ್ಕಿಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಪ್ರಕಾಶ ಬಣಕಾರ, ಪ್ರಕಾಶ ಬಾಗಣ್ಣನವರ, ಪ್ರಕಾಶ ಬಣಕಾರ, ಶಿವು ತಳವಾರ, ಗುಡ್ಡನಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಮಂಜಪ್ಪ ತಳವಾರ, ನಾಗಪ್ಪ ಮೆಳ್ಳಿಹಳ್ಳಿ, ಶಂಕ್ರಪ್ಪ ಪಾಟೀಲ, ಯಲ್ಲಪ್ಪ ಆಡೂರ, ಚನ್ನಪ್ಪ ಕರೆಕ್ಯಾತನಹಳ್ಳಿ, ಗುರಪ್ಪ ಬಣಕಾರ, ವಾಚಪ್ಪ ಗೌಡಗೇರಿ, ಶಂಕ್ರಪ್ಪ ಸೈದಣ್ಣನವರ ಈ ಸಂದರ್ಭದಲ್ಲಿದ್ದರು.