ಚಿತ್ರಾಪುರ: ಸಾಂಘಿಕ ಕೋಟಿ ಗಾಯತ್ರೀ ಜಪಯಜ್ಞಕ್ಕೆ ಚಾಲನೆ

| Published : Oct 27 2024, 02:17 AM IST

ಸಾರಾಂಶ

ವೇದಬ್ರಹ್ಮ ಕುಡುಪು ನರಸಿಂಹ ತಂತ್ರಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕುಡುಪು ಕೃಷ್ಣರಾಜ ತಂತ್ರಿ ನೇತೃತ್ವದಲ್ಲಿ ಜಯಯಜ್ಞ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕುಳಾಯಿಯ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಚಿತ್ರಾಪುರ ಮಠದ ಸಹಯೋಗದಲ್ಲಿ ‘ಸಾಮರಸ್ಯದಿ ಜಗವ ಬೆಳಗುವ ಬ್ರಹ್ಮ ತೇಜದ ಬೆಳಕಲಿ’ ಎಂಬ ಸದಾಶಯದೊಂದಿಗೆ ಚಿತ್ರಾಪುರ ಮಠದಲ್ಲಿ ಗಾಯತ್ರೀ ಸಂಗಮ, ಸಾಂಘಿಕ ಕೋಟಿ ಗಾಯತ್ರೀ ಜಪಯಜ್ಞ ಕಾರ್ಯಕ್ರಮಕ್ಕೆ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ ಶನಿವಾರ ಚಾಲನೆ ನೀಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಬೆಂಗಳೂರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ.ಕ. ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ವೇದಬ್ರಹ್ಮ ಕುಡುಪು ನರಸಿಂಹ ತಂತ್ರಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕುಡುಪು ಕೃಷ್ಣರಾಜ ತಂತ್ರಿ ನೇತೃತ್ವದಲ್ಲಿ ಜಯಯಜ್ಞ ನಡೆಯಲಿದೆ.

ಶನಿವಾರ ಬೆಳಗ್ಗೆ ಪ್ರಾರ್ಥನೆ, ಗೋಪೂಜೆ, ಗಣಪತಿ ಹೋಮ, ದುರ್ಗಾಹೋಮ, ರುದ್ರಹೋಮ, ಕೃಷ್ಣಮಂತ್ರ ಹೋಮ, ಪವಮಾನ ಹೋಮ, ನಾಗ ದೇವರಿಗೆ ಅಭಿಷೇಕ ನಡೆಯಿತು. ಮಹಾಸಭಾ ಯುವ ಘಟಕದ ನೇತೃತ್ವದಲ್ಲಿ ನಡೆದ ‘ಆದಿತ್ಯ’ ಯುವ ಸಂಗಮ ಹಳೆ ಬೇರು ಹೊಸ ಚಿಗುರು ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬ್ರಾಹ್ಮಣ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯಸಿಂಹ ಉಪಸ್ಥಿತರಿದ್ದರು. ಮಧ್ಯಾಹ್ನ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಗಾಯತ್ರಿ ಮಹಾತ್ಮೆ’ ಯಕ್ಷಗಾನ ತಾಳಮದ್ದಳೆ, ಮಹಾಸಭಾ ಮಹಿಳಾ ಘಟಕದ ನೇತೃತ್ವದಲ್ಲಿ ನಡೆದ ವೇದ ಮಾತಾ ಗಾಯತ್ರೀ ಸಂಸಾರ, ಸಂಸ್ಕಾರ, ಚಿಂತನೆ, ಸಾಕ್ಷಾತ್ಕಾರ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ವಾನ್ ಮೇಲುಕೋಟೆ ಉಮಾಕಾಂತ್ ಭಟ್‌ ಉಪನ್ಯಾಸ ನೀಡಿದರು.

ಸಂಜೆ 5.30ರಿಂದ ಕಲಶ ಪ್ರತಿಷ್ಠೆ ನಡೆದು ಬಳಿಕ ಕೊಟ್ಟಾರದ ಭರತಾಂಜಲಿಯ ನೃತ್ಯ ವಿದುಷಿ ಪ್ರತಿಮಾ ಶ್ರೀಧರ್ ಅವರಿಂದ ನೃತ್ಯಾಮೃತ ಹಾಗೂ ಶರಣ್ಯಾ ಮತ್ತು ಸುಮೇಧಾ ಕೆಮ್ಮಣ್ಣು ಸಹೋದರಿಯರಿಂದ ಗಾನಾಮೃತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಮಿತಿ ಗೌರವಾಧ್ಯಕ್ಷ ಅಶೋಕ್ ಹಾರನಹಳ್ಳಿ, ಹಿರಿಯ ವಕೀಲ, ಸಮಿತಿ ಅಧ್ಯಕ್ಷ ಮಹೇಶ್ ಕಜೆ, ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ, ಸಂಚಾಲಕರಾದ ಸುರೇಶ್ ರಾವ್, ಕಾರ್ಯದರ್ಶಿ ಕೃಷ್ಣ ಭಟ್ ಕದ್ರಿ, ಸಹ ಕಾರ್ಯದರ್ಶಿ ಎಂ.ಟಿ. ಭಟ್, ಕೋಶಾಧಿಕಾರಿ ಪಿ. ಉದಯ ಕುಮಾರ್ ರಾವ್, ಲೆಕ್ಕಪರಿಶೋಧಕ ಎಚ್.ಎಲ್. ರಾವ್ ಹೊಸಬೆಟ್ಟು, ಯಾಗ ಸಮಿತಿ ಸಂಚಾಲಕ ಶ್ರೀಕ್ಷೇತ್ರ ಕಟೀಲಿನ ಅರ್ಚಕ ವೇ. ಮೂ. ಹರಿನಾರಾಯಣದಾಸ ಆಸ್ರಣ್ಣ ಮತ್ತಿತರರು ಇದ್ದರು.

...............

ಗಾಯತ್ರಿ ಜಪಾನುಷ್ಠಾನವೇ ಬ್ರಾಹ್ಮಣರ ಮಹಾಶಕ್ತಿ: ಹರಿನಾರಾಯಣ ಆಸ್ರಣ್ಣಕನ್ನಡಪ್ರಭ ವಾರ್ತೆ ಮೂಲ್ಕಿ ಗಾಯತ್ರಿ ಜಪಾನುಷ್ಠಾನವೇ ಬ್ರಾಹ್ಮಣರ ಮಹಾಶಕ್ತಿಯಾಗಿದೆ. ಬ್ರಾಹ್ಮಣ ಸಂಸ್ಕೃತಿ, ಸಂಪ್ರದಾಯಗಳು ಗಾಯತ್ರಿಮಂತ್ರದ ಒಡಲಲಿದ್ದು ನಮ್ಮ ಯುವ ಪೀಳಿಗೆಗೆ ಇದರ ಅನುಷ್ಠಾನಕ್ಕಾಗಿ ವಿಪ್ರ ಕುಟುಂಬಗಳು ಗಮನ ನೀಡಬೇಕೆಂದು ಯಾಗ ಸಮಿತಿ ಸಂಚಾಲಕರಾದ ಕಟೀಲು ಕ್ಷೇತ್ರದ ಹರಿನಾರಾಯಣ ಆಸ್ರಣ್ಣ ಹೇಳಿದರು. ಆದಿತ್ಯ ಯುವ ಸಂಗಮ ಕಾರ್ಯಕ್ರಮದ ಹಳೆ ಬೇರು ಹೊಸ ಚಿಗುರು ಕಾರ್ಯಕ್ರಮ ಸಂವಾದದಲ್ಲಿ ಅವರು ಮಾತನಾಡಿದರು. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ದೇವರ ಮುಂದೆ ಗಾಯತ್ರಿ ಜಪಾನುಷ್ಠಾನ ಮಾಡಿದಲ್ಲಿ ಶಿಸ್ತು, ಸಂಸ್ಕಾರ ಬೆಳೆಯುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣದ ಅವಶ್ಯಕತೆಯ ನಡುವೆ ನಮ್ಮ ವಿಪ್ರ ಬಾಂಧವರು ಮಕ್ಕಳನ್ನು ವೇದ ಪಾಠ ಶಾಲೆ, ವಸಂತ ಶಿಬಿರಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಮಾಡಿದಾಗ ದೇವತ್ವದೆಡೆಗೆ ಮನಸು ಹೊರಳಿ ರಾಕ್ಷಸತ್ವದ ನಾಶವಾಗುತ್ತದೆ ಎಂದರು.ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಹಾಗೂ ತ್ರಿಮತಸ್ಥ ಬ್ರಾಹ್ಮಣ ಸಂಘದ ಪ್ರಮುಖ ಡಾ.ಬಿ.ಎಸ್. ರಾಘವೇಂದ್ರ ಭಟ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಬ್ರಾಹ್ಮಣರ ಸಂಖ್ಯೆ ೪೪ ಲಕ್ಷವಿದೆ. ಆದರೆ ಈಗಿನ ಜಾತಿ ಜನಗಣತಿಯಲ್ಲಿ ಕೇವಲ ೧೬ ಲಕ್ಷ ಮಾತ್ರವೇ ತೋರಿಸಲಾಗುತ್ತಿದೆ. ಹೀಗಾಗಿ ಇದರ ಮಂಡನೆಗೆ ಬ್ರಾಹ್ಮಣ ಸಂಘಟನೆಯ ವಿರೋಧವಿದೆ ಎಂದರು. ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಉಮೇಶ್ ಶಾಸ್ತ್ರಿ, ಆರ್.ಡಿ ಶಾಸ್ತ್ರಿ, ಎಂ.ಎಸ್. ಗುರುರಾಜ್, ಕಶೆಕೋಡಿ ಸೂರ್ಯನಾರಾಯಣ ಭಟ್, ಶ್ರೀಖರ್ ದಾಮ್ಲೆ, ಪೊಳಲಿಗಿರಿ ಪ್ರಕಾಶ್ ತಂತ್ರಿ, ಸಂದೀಪ ಮಂಜ, ಚೇತನ ದತ್ತಾತ್ರೇಯ, ಉಮಾ ಸೋಮಯಾಜಿ, ಕ್ಯಾತ್ಯಾಯಿನಿ, ಕೃಷ್ಣ ಭಟ್ ಕದ್ರಿ, ಜಪ ಯಜ್ಞ ಸಮಿತಿಯ ಮಹೇಶ್ ಕಜೆ, ಶ್ರೀಧರ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು. ಪುತ್ತಿಗೆ ಅನಂತ ಪದ್ಮನಾಭ ಭಟ್, ಪುತ್ತಿಗೆ ಬಾಲಕೃಷ್ಣ ಭಟ್ ವಿಚಾರ ಮಂಡನೆ ಮಾಡಿದರು. ಸುಬ್ರಹ್ಮಣ್ಯ ಕೊರಿಯಾರ್ ನಿರೂಪಿಸಿದರು.