ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಜಾತ್ರೆಗೆ ಚಾಲನೆ

| Published : Jan 27 2025, 12:46 AM IST

ಸಾರಾಂಶ

ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಸಂತ ಲಾರೆನ್ಸ್ ಪ್ರತಿಮೆಯನ್ನು ಮೆರವಣಿಗೆಯ ಮೂಲಕ ವೇದಿಕೆಗೆ ತರುವ ಮೂಲಕ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಸಂತ ಲಾರೆನ್ಸ್ ಪ್ರತಿಮೆಯನ್ನು ಮೆರವಣಿಗೆಯ ಮೂಲಕ ವೇದಿಕೆಗೆ ತರುವ ಮೂಲಕ ಚಾಲನೆ ನೀಡಲಾಯಿತು.

ವಂ. ಸ್ವಾಮಿ ಜಿತೇಶ್ ಕ್ಯಾಸ್ತೆಲಿನೊ ಬೆಳಗ್ಗೆ ೭.೩೦ಕ್ಕೆ ಮೊದಲ ಬಲಿಪೂಜೆ ಅರ್ಪಿಸಿದರು, ನಂತರ ಎಲ್ಲ ಯಾತ್ರಿಕರ ಸುರಕ್ಷತೆಗಾಗಿ ಮತ್ತು ಎಲ್ಲ ಕಾರ್ಯಕ್ರಮಗಳ ಯಶಸ್ಸಿಗಾಗಿ ಭಗವಂತನ ಆಶೀರ್ವಾದವನ್ನು ಕೋರಿ ಆರಾಧನಾ ವಿಧಿಯನ್ನು ನೆರವೇರಿಸಿದರು. ಬಳಿಕ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೊ ಅವರು ಹಬ್ಬದ ಧ್ವಜವನ್ನು ಹಾರಿಸಿದರು. ಪಾಲನ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಸಿಲ್ವ ಸಂದೇಶ ನೀಡಿದರು. ಜೆರಾಲ್ಡ್ ಐಸಾಕ್ ಲೋಬೊ ಬಲಿಪೂಜೆ ಅರ್ಪಿಸಿದರು. ಬಲಿದಾನದ ಕೊನೆಯಲ್ಲಿ ಕೈಯಲ್ಲಿ ಬರೆದ ಬೈಬಲ್, ಮಕ್ಕಳಿಗಾಗಿ ಸಂತರ ಪುಸ್ತಕ ಮತ್ತು ವಂ.ಸ್ವಾಮಿ. ಲೂಯಿಸ್ ಡೇಸಾ ಬರೆದ ಶಿಲುಬೆಯ ಮಾರ್ಗ ಪುಸ್ತಕವನ್ನು ಬಿಷಪ್ ಬಿಡುಗಡೆ ಮಾಡಿದರು. ಉಳಿದ ಪೂಜೆಗಳನ್ನು ಧರ್ಮಗುರು ಫಾದರ್ ಅನಿಲ್ ಕ್ರಾಸ್ತಾ, ಕ್ಯಾರಿತಾಸ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ, ಫಾದರ್ ಪ್ರಕಾಶ್ ಲೋಬೊ, ಸೈಂಟ್ ಆನ್ಸ್ ಫ್ರೈರಿ, ಮಂಗಳೂರು, ಫಾದರ್ ಪ್ರವೀಣ್ ಜಾಯ್ ಸಲ್ಡಾನ್ಹಾ, ಸೈಂಟ್ ಜೋಸೆಫ್ಸ್ ಸೆಮಿನರಿ, ಮಂಗಳೂರು, ಫಾದರ್ ಐವನ್ ಡಿಸೋಡ, ಸೈಂಟ್ ಜೋಸೆಫ್ಸ್ ಸೆಮಿನರಿ, ಮಂಗಳೂರು, ಫಾದರ್ ವಾಲ್ಟರ್ ಡಿಸೋಜಾ, ಬೆಂದೂರು ಚರ್ಚಿನ ಧರ್ಮಗುರುಗಳು, ಅ.ವಂ. ರೋಶನ್ ಡಿಸೋಜಾ, ಉಡುಪಿ ಧರ್ಮಕ್ಷೇತ್ರದ ಕುಲಪತಿ ನೆರವೇರಿಸಿದರು.

20ಕ್ಕೂ ಹೆಚ್ಚು ಗುರುಗಳು ಪಾಪಕ್ಷಮಾಪಣೆ ಮಾಡಿದರು. ಇದು ಜುಬಿಲಿ ವರ್ಷವಾಗಿದ್ದರಿಂದ ಮತ್ತು ಈ ದೇವಾಲಯವನ್ನು ವಿಶೇಷ ಆರ್ಶೀವಾದಗಳನ್ನು ಪಡೆಯುವ ಪವಿತ್ರ ಸ್ಥಳವೆಂದು ಘೋಷಿಸಲಾಗಿರುವುದರಿಂದ, ಧರ್ಮ ಮತ್ತು ಜಾತಿಗಳನ್ನು ಲೆಕ್ಕಿಸದೆ ಭಕ್ತಾದಿಗಳು ಬಸಿಲಿಕಾಕ್ಕೆ ಭೇಟಿ ನೀಡಿ ಸಂತ ಲಾರೆನ್ರಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.