3 ದಿನಗಳ ಹಸಿರು ವಾಹನ ಮೇಳಕ್ಕೆ ಚಾಲನೆ

| Published : Jun 29 2024, 01:18 AM IST / Updated: Jun 29 2024, 05:55 AM IST

ಸಾರಾಂಶ

ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ 5ನೇ ಆವೃತ್ತಿಯ ಎಕ್ಸ್‌ಪೋಗೆ ಶುಕ್ರವಾರ ಚಾಲನೆ ನೀಡಲಾಗಿದೆ

 ಬೆಂಗಳೂರು : ಬ್ಯಾಟರಿ ಶಾಖ ಹೆಚ್ಚಾದರೆ ಕೂಡಲೆ ಮುನ್ಸೂಚನೆ ನೀಡುವ ವ್ಯವಸ್ಥೆ ಹೊಂದಿರುವ ಎಲೆಕ್ಟ್ರಿಕ್‌ ಸ್ಕೂಟರ್‌, ಆಹಾರ ಸೇರಿ ಇನ್ನಿತರ ವಸ್ತುಗಳ ಸರಬರಾಜು ಸುಲಭವಾಗಿಸುವ ಸ್ಟೋರೇಜ್‌ ಸ್ಕೂಟರ್‌ ಹೀಗೆ ಹಲವು ಹೊಸ ಆವಿಷ್ಕಾರಗಳು ಅಂತಾರಾಷ್ಟ್ರೀಯ ಹಸಿರು ವಾಹನ ಎಕ್ಸ್‌ಪೋದಲ್ಲಿ ಅನಾವರಣಗೊಂಡಿವೆ.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ 5ನೇ ಆವೃತ್ತಿಯ ಎಕ್ಸ್‌ಪೋಗೆ ಶುಕ್ರವಾರ ಚಾಲನೆ ನೀಡಲಾಗಿದೆ. ಎಲೆಕ್ಟ್ರಾನಿಕ್‌ ದ್ವಿಚಕ್ರ, ಆಟೋ, ಕಾರುಗಳು ಸೇರಿದಂತೆ ಸರಕು ಸಾಗಣೆ ವಾಹನಗಳು ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಎಕ್ಸ್‌ಪೋದಲ್ಲಿ 100ಕ್ಕೂ ಹೆಚ್ಚಿನ ಪ್ರದರ್ಶಕರ 700ಕ್ಕೂ ಹೆಚ್ಚಿನ ಉತ್ಪನ್ನಗಳು ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಅದರಲ್ಲಿ ಹಲವು ವಾಹನಗಳು ಹೊಸಬಗೆಯ ತಂತ್ರಜ್ಞಾನವನ್ನು ಹೊಂದಿವೆ. ಪೆಟ್ರೋಲ್‌ನಿಂದ ಸಂಚರಿಸುವ ಬೈಕ್‌, ಸ್ಕೂಟರ್‌ಗಳ ಮಾದರಿಯ ಹಲವು ಆಕರ್ಷಕ ಎಲೆಕ್ಟ್ರಿಕ್‌ ಸ್ಕೂಟರ್‌, ಬೈಕ್‌ಗಳು ಎಲ್ಲರನ್ನು ಆಕರ್ಷಿಸುತ್ತಿವೆ.

ಎಕ್ಸ್‌ಪೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ.ಸಾಕ್ರಟೀಸ್‌, ಫೆರ್ರಿಯ ಹಿರಿಯ ನಿರ್ದೇಶಕ ಶಶಿಕುಮಾರ್‌, ಆಲ್‌ ಇಂಡಿಯಾ ಸೋಲಾರ್‌ ಥರ್ಮಲ್‌ ಫೆಡರೇಷನ್‌ನ ಅಧ್ಯಕ್ಷ ಕೆ.ಆರ್‌. ಸುರೇಂದ್ರ ಕುಮಾರ್‌, ಕ್ರೇಷ್ಮಾದ ಕಾರ್ಯದರ್ಶಿ ಎ.ಸಿ.ಈಶ್ವರ್‌ ಇದ್ದರು.

ಬ್ಯಾಟರಿ ಆರೋಗ್ಯದ ಬಗ್ಗೆಎಚ್ಚರಿಕೆ ನೀಡುವ ಸ್ಕೂಟರ್‌

ಸದ್ಯ ಎಲೆಕ್ಟ್ರಿಕ್‌ ವಾಹನಗಳಲ್ಲಿ ಅಳವಡಿಸಲಾಗಿರುವ ಬ್ಯಾಟರಿ ಶಾಖ ಹೆಚ್ಚಾಗಿ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಅದಕ್ಕೆ ಪರಿಹಾರ ಎನ್ನುವಂತೆ ಇವೋಲ್ಟ್‌ ದನ್ನೋ ಹೆಸರಿನ ಸ್ಕೂಟರ್‌ ತನ್ನ ಬ್ಯಾಟರಿಯ ಗುಣಮಟ್ಟವನ್ನು ಕಾಲಕಾಲಕ್ಕೆ ವಾಹನ ಚಾಲಕರಿಗೆ ತಿಳಿಸುತ್ತದೆ. ಸ್ಕೂಟರ್‌ನ ಮುಂಭಾಗ ಅಳವಡಿಸಿರುವ ಡಿಸ್ಪ್ಲೇ ಸ್ಕ್ರೀನ್‌ನಲ್ಲಿ ಬ್ಯಾಟರಿಯ ಶಾಖದ ಪ್ರಮಾಣವನ್ನು ತೋರಿಸುತ್ತದೆ. ಒಂದು ವೇಳೆ ನಿಗದಿಗಿಂತ ಬ್ಯಾಟರಿ ಶಾಖ ಹೆಚ್ಚಾದರೆ, ಶಬ್ದ ಮಾಡಿ ಎಚ್ಚರಿಕೆ ನೀಡುತ್ತದೆ. ಆ ಮೂಲಕ ಬ್ಯಾಟರಿ ಶಾಖ ಹೆಚ್ಚಾಗಿ, ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಳ್ಳುವುದನ್ನು ತಪ್ಪಿಸಬಹುದಾಗಿದೆ.

ಅದೇ ರೀತಿ ಸ್ಕೂಟರ್‌ ಚಲಾಯಿಸುವುದನ್ನು ಕಲಿಯುವವರು ಹಾಗೂ ಸ್ಕೂಟರನ್ನು ನಿಲ್ಲಿಸುವುದಕ್ಕೆ ಸಾಧ್ಯವಾಗದವರಿಗಾಗಿ ಖಾಸಗಿ ಸಂಸ್ಥೆಯೊಂದು ಅಭಿವೃದ್ಧಿ ಪಡಿಸಿರುವ ಸೆಲ್ಫ್‌ ಬ್ಯಾಲೆನ್ಸಿಂಗ್‌ ಲೈಗರ್‌ ಇವಿ ಸ್ಕೂಟರ್‌, ಆಹಾರ ಅಥವಾ ಸಣ್ಣ ಪ್ರಮಾಣದ ಸರಕು ಸಾಗಣೆ ಮಾಡಲು ಸಾಧ್ಯವಾಗುವಂತೆ ಸ್ಕೂಟರ್‌ನ ಹಿಂಭಾಗದಲ್ಲಿ ಸಣ್ಣ ಪ್ರಮಾಣದ ಬಾಕ್ಸ್‌ ಅಳವಡಿಸಿದ ಸ್ಕೂಟರ್‌ ಹೀಗೆ ಹಲವು ವಿಧದ, ಹೊಸ ತಂತ್ರಜ್ಞಾನದ ಸ್ಕೂಟರ್‌, ಆಟೋ, ಕಾರುಗಳು ಎಕ್ಸ್‌ಪೋದಲ್ಲಿ ಪ್ರದರ್ಶನ, ಮಾರಾಟಗೊಳ್ಳುತ್ತಿವೆ.