ಸರ್ಕಾರಿ ಭೂಮಿಯಲ್ಲಿ ಕಲ್ಲುಕ್ವಾರಿ ಮಾಡಿ ಕೆಂಪುಕಲ್ಲನ್ನು ಕಳವು ಮಾಡಿದ ಆರೋಪಿಯನ್ನು ಠಾಣೆಗೆ ಕರೆದೊಯ್ದ ಆಟೋ ಚಾಲಕನನ್ನೇ ಸಹ ಆರೋಪಿಯನ್ನಾಗಿ ಮಾಡಿದ ಪೊಲೀಸರ ಮೇಲೆ ಇದೀಗ ಆಟೋ ಚಾಲಕ ಮಾನನಷ್ಟ ಮೊಕದ್ದಮೆ ಹೂಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ.

ಉಡುಪಿ : ಸರ್ಕಾರಿ ಭೂಮಿಯಲ್ಲಿ ಕಲ್ಲುಕ್ವಾರಿ ಮಾಡಿ ಕೆಂಪುಕಲ್ಲನ್ನು ಕಳವು ಮಾಡಿದ ಆರೋಪಿಯನ್ನು ಠಾಣೆಗೆ ಕರೆದೊಯ್ದ ಆಟೋ ಚಾಲಕನನ್ನೇ ಸಹ ಆರೋಪಿಯನ್ನಾಗಿ ಮಾಡಿದ ಪೊಲೀಸರ ಮೇಲೆ ಇದೀಗ ಆಟೋ ಚಾಲಕ ಮಾನನಷ್ಟ ಮೊಕದ್ದಮೆ ಹೂಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ.ಕುಂದಾಪುರ ತಾಲೂಕಿನ ಆಲೂರಿನ ನಿವಾಸಿ ಶೀನ ಪೂಜಾರಿ ಅವರ ಪತ್ನಿ 3 ದಶಕಗಳಿಂದ ಎಂಡೋಸಲ್ಪಾನ್‌ ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ, ಮಕ್ಕಳಿಬ್ಬರು ಶಾಲೆಯಲ್ಲಿ ಓದುತಿದ್ದಾರೆ, ಶೀನ ಅವರು ತಮ್ಮ ಕುಟುಂಬವನ್ನು ಆಟೋ ಓಡಿಸಿ ಸಾಕುತಿದ್ದರು.

2025ರಲ್ಲಿ ಶೀನ ಅವರು ಉದಯ ಶೆಟ್ಟಿ ಎಂಬವರನ್ನು ಆಟೋದಲ್ಲಿ ಗಂಗೊಳ್ಳಿ ಠಾಣೆಗೆ ಕರೆದೊಯ್ದಿದ್ದರು, ಉದಯ ಶೆಟ್ಟಿ ಸರ್ಕಾರಿ ಭೂಮಿಯಲ್ಲಿ ಪರವಾನಗಿ ಇಲ್ಲದೆ ಕಲ್ಲುಕ್ವಾರಿ ನಡೆಸಿ, ಲಕ್ಷಾಂತರ ರು. ಮೌಲ್ಯದ ಕೆಂಪುಕಲ್ಲು ಕಳವು ಪ್ರಕರಣದ ಆರೋಪಿ. ಆದರೆ ಠಾಣೆಯ ಹೊರಗೆ ಈ ಪ್ರಕರಣ ಬಗ್ಗೆ ಯಾವ ಮಾಹಿತಿಯೂ ಇಲ್ಲದ ಅನಕ್ಷರಸ್ಥ ಶೀನ ಅವರ ಸಹಿ ಪಡೆದ ಪೊಲೀಸರು ಅವರನ್ನೇ 2ನೇ ಆರೋಪಿಯಾಗಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು !

ನ್ಯಾಯಾಲಯದಿಂದ ಸಮನ್ಸ್‌: ನ್ಯಾಯಾಲಯದಿಂದ ಸಮನ್ಸ್ ಬಂದಾಗ ಶೀನ ಗಾಬರಿಯಾದರು, ಯಾರೋ, ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆಯದಿದ್ದರೇ ಜೈಲಿಗೆ ಹಾಕುತ್ತಾರೆ ಎಂದು ಹೆದರಿಸಿದರು. ಠಾಣೆಗೆ ಹೋಗಿ ವಿಚಾರಿಸಿದಾಗ, ಇದೊಂದು ಸಣ್ಣ ಕೇಸು, ತಪ್ಪು ಮಾಡಿರುವುದು ಹೌದು ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಳ್ಳಿ, ಉದಯ ಶೆಟ್ಟಿಅವರು ನ್ಯಾಯಾಲಯದ ದಂಡ ಕಟ್ಟುತ್ತಾರೆ, ನಿಮಗೆ ಅವರೇ ಜಾಮೀನು ಕೊಡುತ್ತಾರೆ ಎಂದು ಪೊಲೀಸರು ಹೇಳಿದರು. ಆದರೆ ಮಾಡದ ತಪ್ಪನ್ನು ಒಪ್ಪಿಕೊಳ್ಳಲು ಆತ್ಮಸಾಕ್ಷಿ ಒಪ್ಪದೇ ಶೀನ ಅವರು, ಉದಯ ಶೆಟ್ಟಿಯನ್ನು ಕಂಡು ಇದೆಲ್ಲಾ ಏನು ಎಂದು ಕೇಳಿದರೇ ಅವರು ಪ್ರತಿಕ್ರಿಯಿಸಲೇ ಇಲ್ಲ ! ಅಂದಿನಿಂದ ಶೀನ ಅವರು, ಪೊಲೀಸರು ಯಾವಾಗ ಬಂದು ತನ್ನನ್ನು ಬಂಧಿಸಿ ಜೈಲಿಗೆ ಹಾಕುತ್ತಾರೋ ಎಂದು ರಾತ್ರಿ ನಿದ್ರೆಯನ್ನೂ ಮಾಡಲಿಲ್ಲ, ಈಗಾಗಲೇ, ಹಾಸಿಗೆ ಹಿಡಿದಿರುವ ಪತ್ನಿಯೊಂದಿಗೆ ಇವರೂ ಹಾಸಿಗೆ ಹಿಡಿಯುವ ಪರಿಸ್ಥಿತಿಗೆ ತಲುಪಿದರು, ಕುಟುಂಬದ ನಿರ್ವಹಣೆ ಕಷ್ಟವಾಯಿತುಕೊನೆಗೆ ಕಾನೂನು ವಿದ್ಯಾರ್ಥಿಯೊಬ್ಬನ ಸಲಹೆಯಂತೆ ಶೀನ ಅವರು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದರು. ಕೋರ್ಟಿನಿಂದ ಬಂದ ಸಮನ್ಸ್‌ ಹೊರತು ಬೇರಾವ ದಾಖಲೆಯೂ ಅವರಲ್ಲಿರಲಿಲ್ಲ, ಪ್ರತಿಷ್ಠಾನವು 2 ತಿಂಗಳ ಶ್ರಮದಿಂದ ಠಾಣೆ, ನ್ಯಾಯಾಲಯದಿಂದ ಅಧಿಕೃತ ದಾಖಲೆ ಪಡೆದು. ಅಮಾಯಕ ಶೀನ ಅವರ ಆತ್ಮಸಂಮಾನದ ರಕ್ಷಣೆಗಾಗಿ, ನೇರ ಹೈಕೋರ್ಟಲ್ಲಿ ಅರ್ಜಿ ಸಲ್ಲಿಸಿ ದಾವೆಯಿಂದ ಶೀನ ಅವರನ್ನು ಮುಕ್ತಿಗೊಳಿಸಬೇಕು ಎಂದು ವಿನಂತಿಸಿತು. ಈ ಪ್ರಕರಣವು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠಕ್ಕೆ ಬಂದಾಗ, ಪ್ರಕರಣದಲ್ಲಿ ಶೀನ ಅವರನ್ನು ಆರೋಪಿಯನ್ನಾಗಿ ಮಾಡಲು ಯಾವ ಆಧಾರಗಳಿವೆ ಎಂದು ಗಂಗೊಳ್ಳಿ ಠಾಣೆಗೆ 4 ಬಾರಿ ನೊಟೀಸು ನೀಡಿದರೂ, ಪೊಲೀಸರು ದಾಖಲೆ ಸಲ್ಲಿಸಲು ವಿಫಲರಾದರು. ಅಗಸ್ಟ್ 6ರಂದು ಅಂತಿಮ ಆದೇಶ ನೀಡಿದ ನ್ಯಾಯಾಧೀಶರು ಶೀನ ಅವರನ್ನು ಕುಂದಾಪುರ ಆರೋಪ ಪಟ್ಟಿಯಿಂದ ತೆಗೆದುಹಾಕಿ, ದೋಷಮುಕ್ತಗೊಳಿಸಿದ್ದಾರೆ.

ಅಮಾಯಕ ಶೀನ ಅವರ ಮೇಲಿನ ಆಪಾದನೆಗಳು ಆಧಾರರಹಿತ ಎಂದು ಹೈಕೋರ್ಟೇ ತೀರ್ಮಾನಿಸಿದ್ದು, ಸುಳ್ಳು ಆರೋಪದಿಂದ ಅವರ ಮಾನ ನಷ್ಟವಾಗಿದ್ದು, ಅವರ ಪರವಾಗಿ, ಸುಳ್ಳು ಆಪಾದನೆ ಹೊರಿಸಿದ ಪೊಲೀಸರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಮಾನವ ಹಕ್ಕುಗಳ ಪ್ರತಿಷ್ಠಾನವು ಸಿದ್ದತೆಗಳನ್ನು ನಡೆಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರವಿಂದ್ರನಾಥ ಶ್ಯಾನುಭಾಗ್ ಹೇಳಿದ್ದಾರೆ.